ವಾಷಿಂಗ್ಟನ್: ಅಮೆರಿಕಾ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸಂಘಟನೆ ಬಳಿ ರಹಸ್ಯ ಸರ್ವರ್ ದಾಖಲಾಗಿದ್ದು ಅದು ರಷ್ಯಾದ ಬ್ಯಾಂಕ್ ಜೊತೆ ರಹಸ್ಯವಾಗಿ ಸಂವಹನ ನಡೆಸುತ್ತಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಅಧ್ಯಕ್ಷೀಯ ಚುನಾವಣೆಗೆ ಇನ್ನು ಒಂದು ವಾರ ಬಾಕಿ ಇರುವಾಗಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಂದು ಆರೋಪ ಕೇಳಿಬರುತ್ತಿದೆ.ರಷ್ಯಾದ ಬಹುದೊಡ್ಡ ಖಾಸಗಿ ವಾಣಿಜ್ಯ ಬ್ಯಾಂಕ್ ಅಲ್ಫಾ ಬ್ಯಾಂಕ್ ಜೊತೆ ಟ್ರಂಪ್ ಸಂಘಟನೆ ಸಂಪರ್ಕ ಹೊಂದಿದೆ ಎಂದು ಸ್ಲೇಟ್ ವರದಿ ಮಾಡಿದೆ.
ಆದರೆ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ವೇಳೆ ಇದನ್ನು ಅಲ್ಲಗಳೆದಿದ್ದಾರೆ. ಪತ್ರಿಕೆಯಲ್ಲಿ ವರದಿ ಪ್ರಕಟವಾದ ನಂತರ ಸರ್ವರ್ ನ್ನು ಮುಚ್ಚಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್ ಅವರ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್, ತಮ್ಮ ರಷ್ಯಾ ಜೊತೆಗಿನ ಸ್ನೇಹ ಸಂಬಂಧದ ಕುರಿತು ಟ್ರಂಪ್ ಅವರು ಉತ್ತರ ನೀಡಬೇಕು ಎಂದು ಹೇಳಿದ್ದಾರೆ.