ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪತ್ನಿ ಭೇಟಿ ಮಾಡಲು ಶುಕ್ರವಾರ ಪಾಕ್ ಅನುಮತಿ ನೀಡಿದೆ.
ಮಾನವೀಯ ಆಧಾರದ ಮೇಲೆ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅವರ ತಾಯಿಗೆ ವೀಸಾ ನೀಡುವಂತೆ ಭಾರತ ಸರ್ಕಾರ ಹಲವು ಬಾರಿ ಮನವಿ ಮಾಡಿತ್ತು. ಭಾರತದ ಮನವಿಗೆ ಕೊನೆಗೂ ಸ್ಪರ್ಧಿಸಿದ ಪಾಕಿಸ್ತಾನ ಸರ್ಕಾರ, ಜಾಧವ್ ಅವರನ್ನು ಭೇಟಿ ಮಾಡಲು ಅವರ ಪತ್ನಿಗೆ ಅವಕಾಶ ನೀಡುವುದಾಗಿ ಹೇಳಿದೆ.
ಮಾನವೀಯ ಆಧಾರದ ಮೇಲೆ ಕುಲಭೂಷಣ್ ಜಾಧವ್ ಅವರು ತಮ್ಮ ಪತ್ನಿಯ ಭೇಟಿಗೆ ಅವಕಾಶ ಕಲ್ಪಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಾಲ್ ಅವರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಕುರಿತು ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈಕಮಿಷನರ್ ಗೂ ಮಾಹಿತಿ ನೀಡಲಾಗಿದೆ.
ಕಳೆದ ಏಪ್ರಿಲ್ ನಲ್ಲಿ ಗೂಢಾಚಾರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಅದಕ್ಕೆ ಅಂತರಾಷ್ಟ್ರೀಯ ಕೋರ್ಟ್ ತಡೆ ನೀಡಿದೆ.