ಸುಲೈಮಾನಿಯಾ: ಇರಾನ್-ಇರಾಕ್ ಗಡಿ ಭಾಗದ ಪರ್ವತ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 7.3 ಪರಿಮಾಣದ ಭೂಕಂಪ ಸಂಭವಿಸಿ ಮೃತಪಟ್ಟವರ ಸಂಖ್ಯೆ 207ಕ್ಕೇರಿದೆ.
ಭಾರೀ ಭೂಕುಸಿತ ಸಂಭವಿಸಿರುವುದರಿಂದ ನೂರಾರು ಮಂದಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಶಂಕೆಯಿದೆ. ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಕೆಲವರು ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಉತ್ತರ ಇರಾಕ್ ನ ಸುಲೈಮಾನಿಯಾದಲ್ಲಿ ನೋವಿನಿಂದ ಚೀರಾಡುತ್ತಾ ಹಲವರು ಓಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಪಕ್ಕದ ದರ್ಬಂಡಿಕಾನ್ ಎಂಬಲ್ಲಿ ಅನೇಕ ಕಟ್ಟಡಗಳು ಕುಸಿದು ಬೀಳುವ ದೃಶ್ಯ ಕಾಣುತ್ತಿದೆ.
ಭೂಕಂಪದಲ್ಲಿ ಗಾಯಗೊಂಡವರ ಸಂಖ್ಯೆ 1700ಕ್ಕೇರಿದೆ ಎಂದು ಇರಾನ್ ಸರ್ಕಾರದ ಅಧಿಕೃತ ಸುದ್ದಿ ಮಾಧ್ಯಮ ಐಆರ್ ಐಬಿ ಪ್ರಸಾರ ಮಾಡಿದೆ. ಐಆರ್ ಎನ್ಎ ಸುದ್ದಿ ಸಂಸ್ಥೆಯ ಪ್ರಕಾರ ಸುಮಾರು 300 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಇರಾಕ್ ಭಾಗದ ಗಡಿಯಲ್ಲಿ ಸುಮಾರು 6 ಮಂದಿ ಮೃತಪಟ್ಟಿದ್ದಾರೆ.ಮೂರು ತುರ್ತು ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಇರಾನ್ ನ ಕೆರ್ಮನ್ಶಾಹ್ ಪ್ರಾಂತ್ಯದ ಉಪ ಗವರ್ನರ್ ಮೊಜ್ತಾಬಾ ನಿಕ್ಕೆರ್ದಾರ್ ತಿಳಿಸಿದ್ದಾರೆ.
ಭೂಕಂಪ, ಇರಾಕ್ ನ ಕುರ್ದಿಸ್ತಾನ್ ನ ನೈರುತ್ಯ ಭಾಗಕ್ಕೆ 30 ಕಿಲೋ ಮೀಟರ್ ದೂರದಲ್ಲಿ ನಿನ್ನೆ ರಾತ್ರಿ 9.20ರ ಸುಮಾರಿಗೆ ಸಂಭವಿಸಿದೆ. ಈ ಸಂದರ್ಭದಲ್ಲಿ ಅನೇಕ ಜನರು ತಮ್ಮ ತಮ್ಮ ಮನೆಗಳಲ್ಲಿದ್ದರು ಎಂದು ಅಮೆರಿಕಾದ ಭೂಗರ್ಭ ಸಮೀಕ್ಷೆ ತಿಳಿಸಿದೆ.