ವುಹಾನ್ ಶೃಂಗಸಭೆ: 2 ದಿನ, 7 ಕಾರ್ಯಕ್ರಮ, 9 ಗಂಟೆ, ಹೊಸ ಭಾಷ್ಯ ಬರೆದ ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ

ವುಹಾನ್ ಶೃಂಗಸಭೆ ನಿಮಿತ್ತ 2 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಒಟ್ಟು 9 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಚೀನಾ ರಾಯಭಾರಿ ಲುವೋ ಝಾವೊ ಹುಯಿ ಹೇಳಿದ್ದಾರೆ.
ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ
ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ
ಬೀಜಿಂಗ್: ವುಹಾನ್ ಶೃಂಗಸಭೆ ನಿಮಿತ್ತ 2 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಒಟ್ಟು 9 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಚೀನಾ ರಾಯಭಾರಿ ಲುವೋ ಝಾವೊ ಹುಯಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ 2 ದಿನಗಳ ಚೀನಾ ಪ್ರವಾಸ ಅಂತ್ಯಗೊಂಡ ಬಳಿಕ ಇಂದು ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಇದೀಗ ಸುದ್ದಿಗಾರರೊಂದಿಗೆ ಮಾತನಾಡಿರುವ ಚೀನಾ ರಾಯಭಾರಿ ಲುವೋ ಝಾವೊ ಹುಯಿ ಅವರು, ಮೋದಿ-ಕ್ಸಿ ಜಿನ್ ಪಿಂಗ್ ಅವರ ಸಂಪೂರ್ಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಚೀನಾದಲ್ಲಿ ಒಟ್ಟು 2 ದಿನ ಕಳೆದಿದ್ದು, ಒಟ್ಟು 7 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಒಟ್ಟು 9 ಗಂಟೆಗಳ ಅವಧಿಯನ್ನು ಜೊತೆಯಲ್ಲೇ ಕಳೆದಿದ್ದು, ಈ ವೇಳೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಮತ್ತು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಶುಕ್ರವಾರ ಚೀನಾಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ವುಹಾನ್ ನಲ್ಲಿ ಸ್ವಾಗತಿಸಿದರು. ಚೀನಾ ಇತಿಹಾಸದಲ್ಲಿ ಚೀನಾದ ಅಧ್ಯಕ್ಷರಬ್ಬರು ವಿಶ್ವ ನಾಯಕರನ್ನು ರಾಜಧಾನಿ ಬೀಜಿಂಗ್ ಅಲ್ಲದೇ ಬೇರೆ ಪ್ರದೇಶದಲ್ಲಿ ಸ್ವಾಗತಿಸಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ 2015ರಲ್ಲಿ ಇದೇ ಪ್ರಧಾನಿ ಮೋದಿ ಅವರನ್ನು ಕ್ಸಿಯಾನ್ ನಲ್ಲಿ ಜಿನ್ ಪಿಂಗ್ ಸ್ವಾಗತಿಸಿದ್ದರು. ಇದೀಗ 2ನೇ ಬಾರಿಗೆ ಮತ್ತೆ ಅವರನ್ನೇ ಬೀಜಿಂಗ್ ನಿಂದ ಹೊರಗೆ ಅಂದರೆ ವುಹಾನ್ ನಲ್ಲಿ ಸ್ವಾಗತಿಸಿದ್ದಾರೆ.
ಶುಕ್ರವಾರ ವುಹಾನ್ ನ ಹುಬೆಯಿ ಮ್ಯೂಸಿಯಂ ನಲ್ಲಿ ಉಭಯ ನಾಯಕರು ಭೇಟಿಯಾಗಿ ಚರ್ಚೆ ನಡೆಸಿದರು. ಹುಬೆಯಿ ಮ್ಯೂಸಿಯಂ ಚೀನಾ ಸಂಸ್ಕೃತಿ ಬಿಂಬಿಸುವ ಪ್ರಮುಖ ವಸ್ತು ಪ್ರದರ್ಶನ ಕೇಂದ್ರವಾಗಿದ್ದು, ಇಲ್ಲಿ ಝೆಂಗ್ ಸಾಂಸ್ಕೃತಿಯ ಅಪರೂಪದ ಅವಶೇಷಗಳು ಮತ್ತು ವಸ್ತುಗಳನ್ನು ಸಂರಕ್ಷಿಸಿ ಇಡಲಾಗಿದೆ. ಹುಬೆಯಿ ಮ್ಯೂಸಿಯಂ ವೀಕ್ಷಣೆ ಬಳಿಕ ಉಭಯ ನಾಯಕರು, ಈಸ್ಟ್ ಲೇಕ್ ನಲ್ಲಿ ಕೆಲ ಕ್ಷಣಗಳನ್ನು ಕಳೆದರು. ಈ ವೇಳೆ ಚಹಾ ಸವಿದ ನಾಯಕರು ಬೋಟ್ ರೈಡ್ ಮಾಡಿದರು. 
ಶನಿವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿಗಾಗಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿಶೇಷ ಔತಣಕೂಟ ಏರ್ಪಡಿಸಿದ್ದರು ಎಂದು ಚೀನಾ ರಾಯಭಾರಿ ಲುವೋ ಝಾವೊ ಹುಯಿ ಮಾಹಿತಿ ನೀಡಿದರು.
ಚೀನಾ ಭಾರತದೊಂದಿಗೆ ಮುಕ್ತ ವ್ಯಾಪಾರ ವಹಿವಾಟು ಬಯಸುತ್ತದೆ
ಅತ್ತ ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸ ಅಂತ್ಯವಾದ ಬೆನ್ನಲ್ಲೇ ಇತ್ತ ಕೋಲ್ಕತಾದಲ್ಲಿರುವ ಚೀನಾ ರಾಯಭಾರಿ ಮಾ ಝಾನುವು ಅವರು ಸುದ್ದಿಗಾರೊಂದಿಗೆ ಮಾತನಾಡಿದರು. ಈ ವೇಳೆ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ವಹಿವಾಟು ಸಂಬಂಧ ನಡೆಯಬೇಕು ಎಂದು ಅವರು ಬಯಸಿದರು. ಎಫ್ ಟಿಎ ಯಿಂದ ಉಭಯ ದೇಶಗಳ ನಡುವಿನ ವಾಣಿಜ್ಯ ಸಂಬಂಧ ಹೆಚ್ಚಾಗಲಿದ್ದು, ಎರಡೂ ದೇಶಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು. ಭಾರತದಿಂದ ತನ್ನ ಆಮದು ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಈ ಪೈಕಿ ಶಿಕ್ಷಣ ಕ್ಷೇತ್ರ ಕೂಡ ನಮ್ಮ ವಾಣಿಜ್ಯ ವಹಿವಾಟಿನಲ್ಲಿ ಅಡಕವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಚೀನಾದಲ್ಲಿರುವ ಸಾಕಷ್ಟು ವಿವಿಗಳು ಭಾರತೀಯ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com