2 ದಿನಗಳ ವುಹಾನ್ ಶೃಂಗಸಭೆ ಅಂತ್ಯ; ಒಬೋರ್ ಯೋಜನೆ ಕುರಿತು ಭಾರತದ ಮೇಲೆ ಯಾವುದೇ ಒತ್ತಡ ಹೇರಲ್ಲ: ಚೀನಾ

ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಚೀನಾ ಪ್ರವಾಸ ಅಂತ್ಯಗೊಂಡಿದ್ದು, ನರೇಂದ್ರ ಮೋದಿ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಆತ್ಮೀಯವಾಗಿ ಬೀಳ್ಕೋಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಚೀನಾ ಪ್ರವಾಸ ಅಂತ್ಯಗೊಂಡಿದ್ದು, ನರೇಂದ್ರ ಮೋದಿ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಆತ್ಮೀಯವಾಗಿ ಬೀಳ್ಕೋಟ್ಟಿದ್ದಾರೆ.
ಚೀನಾದ ಕೇಂದ್ರೀಯ ನಗರ ವುಹಾನ್ ನಲ್ಲಿ ನಡೆದ ಎರಡು ದಿನಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಪ್ರಮುಖವಾಗಿ ಉಭಯ ದೇಶಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ವಿಚಾರದ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. 
ಇತ್ತ ವುಹಾನ್ ನಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಇಲಾಖೆಯ ಉಪ ಮಂತ್ರಿ ಕಾಂಗ್ ಕ್ಸುವಾನ್ಯು ಅವರು, ಚೀನಾ ದೇಶದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆಯನ್ನು ಒಪ್ಪಿಕೊಳ್ಳುವಂತೆ ಭಾರತದ ಮೇಲೆ ತಾವು ಎಂದಿಗೂ ಒತ್ತಡ ಹೇರುವುದಿಲ್ಲ. ಆದರೆ ಒಬೋರ್ ಯೋಜನೆಯನ್ನು ಭಾರತ ಒಪ್ಪಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ. ಅಂತೆಯೇ ಚೀನಾ ಸರ್ಕಾರ ಎಂದೂ ಕೂಡ ಭಾರತ ಟಿಬೆಟ್ ಕುರಿತ ನಿಲುವು ಬದಲಾಗುತ್ತದೆ ಎಂದೂ ಭಾವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚೀನಾ ಭಾರತದೊಂದಿಗೆ ಮುಕ್ತ ವ್ಯಾಪಾರ ವಹಿವಾಟು ಬಯಸುತ್ತದೆ: ಚೀನಾ ರಾಯಭಾರಿ
ಅತ್ತ ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸ ಅಂತ್ಯವಾದ ಬೆನ್ನಲ್ಲೇ ಇತ್ತ ಕೋಲ್ಕತಾದಲ್ಲಿರುವ ಚೀನಾ ರಾಯಭಾರಿ ಮಾ ಝಾನುವು ಅವರು ಸುದ್ದಿಗಾರೊಂದಿಗೆ ಮಾತನಾಡಿದರು. ಈ ವೇಳೆ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ವಹಿವಾಟು ಸಂಬಂಧ ನಡೆಯಬೇಕು ಎಂದು ಅವರು ಬಯಸಿದರು. ಎಫ್ ಟಿಎ ಯಿಂದ ಉಭಯ ದೇಶಗಳ ನಡುವಿನ ವಾಣಿಜ್ಯ ಸಂಬಂಧ ಹೆಚ್ಚಾಗಲಿದ್ದು, ಎರಡೂ ದೇಶಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು. ಭಾರತದಿಂದ ತನ್ನ ಆಮದು ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಈ ಪೈಕಿ ಶಿಕ್ಷಣ ಕ್ಷೇತ್ರ ಕೂಡ ನಮ್ಮ ವಾಣಿಜ್ಯ ವಹಿವಾಟಿನಲ್ಲಿ ಅಡಕವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಚೀನಾದಲ್ಲಿರುವ ಸಾಕಷ್ಟು ವಿವಿಗಳು ಭಾರತೀಯ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com