ಸಿಯೋಲ್: ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ 30 ಮಂದಿ ಸಾವನ್ನಪ್ಪಿ 70ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ.
ದಕ್ಷಿಣ ಕೊರಿಯಾದ ಸೆಜೋಂಗ್ ಆಸ್ಪತ್ರೆಯಲ್ಲಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ 30 ಮಂದಿ ಸಾವನ್ನಪ್ಪಿ 77 ಮಂದಿ ಗಾಯಗೊಂಡಿದ್ದಾರೆ. 77 ಮಂದಿಯ ಪೈಕಿ 8 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ತುರ್ತುನಿಗಾ ಘಟಕದಲ್ಲಿ ಇಂದು ಬೆಳಿಗ್ಗೆ 7.35ರ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ. ಬಳಿಕ ಬೆಂಕಿಯ ಕೆನ್ನಾಗಿಲಿಗೆ ಕಟ್ಟಡದ ಸುತ್ತಲೂ ಆವರಿಸಿದೆ ಎಂದು ಅಗ್ನಿಶಾಮಕದ ದಳದ ಅಧಿಕಾರಿ ಚೋಯ್ ಮ್ಯಾನ್-ವೂ ಅವರು ಹೇಳಿದ್ದಾರೆ.
ಸೆಜೋಂಗ್ ಆಸ್ಪತ್ರೆಯ ಎರಡು ಮಹಡಿಯಲ್ಲಿ ಒಟ್ಟು 194 ಮಂದಿ ರೋಗಿಗಳು ದಾಖಲಾಗಿದ್ದರು ಎಂದು ತಿಳಿಸಿದ್ದಾರೆ.
ದುರ್ಘಟನೆ ಬಳಿಕ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಉನ್ನತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.