ನ್ಯೂಯಾರ್ಕ್: ಭಯೋತ್ಪಾದನೆಗೆ ಬೆಂಬಲ ನೀಡಿ, ಗಡಿಯಲ್ಲಿನ ಭಯೋತ್ಪಾದನೆಗೆ ಸುರಕ್ಷಿತ ನೆಲೆ ಕಲ್ಪಿಸಿಕೊಂಡುತ್ತಿರುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ವಾಗ್ದಾಳಿ ನಡೆಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು, ಗಡಿಯಲ್ಲಿ ಭಯೋತ್ಪಾದನೆಗೆ ಸುರಕ್ಷಿತ ನೆಲಗಳನ್ನು ಕಲ್ಪಿಸಿಕೊಡುತ್ತಿರುವ ಪಾಕಿಸ್ತಾನವು, ಆಫ್ಘಾನಿಸ್ತಾನ ಮತ್ತು ಇತರ ಭಾಗದಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯಲು ಇಂಬು ನೀಡುತ್ತಿದೆ ಎಂದು ಹೇಳಿದ್ದಾರೆ.
ತಾಲಿಬಾನ್, ಹಕ್ಕಾನಿ ನೆಟ್ ವರ್ಕ್, ಇಸಿಸ್, ಅಲ್ ಖೈದಾ, ಲಷ್ಕರ್-ಇ-ತೊಯ್ಬಾದಂತಹ ಉಗ್ರ ಸಂಘಟನೆಗಳ ಕಪ್ಪು ಅಜೆಂಡಾಗಳಿಗೆ ಬೆಂಬಲ ನೀಡುತ್ತಿರುವವರು ಈಗಲೂ ಇದ್ದಾರೆಂದು ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
ಇದಲ್ಲದೆ, ಅಪರಾಧ, ಮಾದಕ ವಸ್ತುಗಳು, ಭಯೋತ್ಪಾದನೆ ನೆಟ್ ವರ್ಕ್ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಇದೇ ವೇಳೆ ಅಕ್ಬರುದ್ದೀನ್ ಪ್ರತಿಪಾದಿಸಿದ್ದಾರೆ.
ಇದೇ ವೇಳೆ ತಾಲಿಬಾನ್ ಹಿಂಸಾಚಾರಕ್ಕೆ ಕೊನೆ ಹಾಡುವ ಸಲುವಾಗಿ ಶಾಂತಿ ಸ್ಥಾಪನೆ ಹೊಸ ನಿರ್ಧಾರಗಳನ್ನು ಕೈಗೊಂಡಿರುವ ಅಫ್ಘಾನಿಸ್ತಾನವನ್ನು ಅಕ್ಬರುದ್ದೀನ್ ಪ್ರಶಂಸಿಸಿದ್ದಾರೆ. ಅಫ್ಘಾನಿಸ್ತಾನ ಸರ್ಕಾರ ಶಾಂತಿಗೆ ಕರೆ ನೀಡಿದೆ. ತಾಲಿಬಾನ್ ಮಟ್ಟಹಾಕಿ ಮುಖ್ಯ ವಾಹಿನಿಗೆ ಬರಲು ಅಫ್ಘಾನಿಸ್ತಾನ ಮುಂದಾಗಿದೆ. ಆಫ್ಘಾನಿಸ್ತಾನ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆಂದಿದ್ದಾರೆ.
ಹಿಂಸಾಚಾರವನ್ನು ಮುಂದುವರೆಸುವವರನ್ನು ಸಹಿಸಲು ಸಾಧ್ಯವಿಲ್ಲ. ಹಿಂಸಾಚಾರಕ್ಕೆ ಸೃಷ್ಟಿಸುವವರಿಗೆ ದಿಟ್ಟ ಉತ್ತರ ನೀಡಬೇಕಿದೆ. ಸರಿಪಡಿಸಲು ಸಾಧ್ಯವೇ ಇಲ್ಲದನ್ನು ಮೌನವಾಗಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.