'ಯಾರ ಬಳಿ ಏನನ್ನು ಖರೀದಿಸಬೇಕು ಎನ್ನುವ ಕುರಿತು ಅಮೆರಿಕದ ಪಾಠ ಬೇಕಿಲ್ಲ': ಜೈ ಶಂಕರ್ ಖಡಕ್ ತಿರುಗೇಟು

ಭಾರತ ಯಾರ ಬಳಿ ಏನನ್ನು ಖರೀದಿಸಬೇಕು ಎನ್ನುವ ಕುರಿತು ಅಮೆರಿಕದ ಪಾಠ ಬೇಕಿಲ್ಲ ಎಂದು ಹೇಳುವ ಮೂಲಕ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅಮೆರಿಕಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಷ್ಯಾದಿಂದ ರಕ್ಷಣಾ ಪರಿಕರಗಳ ಖರೀದಿ ಮೇಲೆ ಅಮೆರಿಕ ಕೆಂಗಣ್ಣು, ನಿರ್ಬಂಧ ಹೇರುವ ಎಚ್ಚರಿಕೆಗೆ ಭಾರತದ ತಿರುಗೇಟು

ವಾಷಿಂಗ್ಟನ್: ಭಾರತ ಯಾರ ಬಳಿ ಏನನ್ನು ಖರೀದಿಸಬೇಕು ಎನ್ನುವ ಕುರಿತು ಅಮೆರಿಕದ ಪಾಠ ಬೇಕಿಲ್ಲ ಎಂದು ಹೇಳುವ ಮೂಲಕ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅಮೆರಿಕಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಭಾರತ ರಷ್ಯಾದಿಂದ ರಕ್ಷಣಾ ಪರಿಕರಗಳ ಖರೀದಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಮೆರಿಕ ಭಾರತದ ಮೇಲೆ ನಿರ್ಬಂಧ ಹೇರುವ ಕುರಿತು ಹೇಳಿಕೆ ನೀಡಿತ್ತು. ಅಮೆರಿಕದ ಈ ನಡೆಗೆ ಅದರ ದೇಶದಲ್ಲೇ ನಿಂತು ವಿದೇಶಾಂಗ ಸಚಿವ ಜೈ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ವಿಶ್ವಸಂಸ್ಥೆ ಸಾಮಾನ್ಯ ಸಭೆ ಮುಕ್ತಾಯದ ಬಳಿಕ ವಾಷಿಂಗ್ಟನ್ ಗೆ ತೆರಳಿರುವ ವಿದೇಶಾಂಗ ಸಚಿವ ಜೈ ಶಂಕರ್ ಅಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಬಳಿ ಏನನ್ನು ಖರೀದಿಸಬೇಕು ಎನ್ನುವ ಹಕ್ಕು ಭಾರತಕ್ಕಿದೆ. ಈ ಕುರಿತು ಮತ್ತೊಬ್ಬರ ಪಾಠ ಬೇಕಿಲ್ಲ. ರಷ್ಯಾದಿಂದ ಏನನ್ನು ಖರೀದಿಸಬೇಕು? ಏನನ್ನು ಖರೀದಿಸಬಾರದು? ಎಂದು ಮತ್ತೊಂದು ದೇಶ ನಮಗೆ ತಿಳಿ ಹೇಳುವುದನ್ನು ಭಾರತ ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.

'ಮಿಲಿಟರಿ ಸಲಕರಣೆಗಳನ್ನು ಖರೀದಿಸುವುದು ಯಾವುದೇ ದೇಶದ ಮೂಲಭೂತ ಹಕ್ಕು. ರಷ್ಯಾದಿಂದ ಏನನ್ನು ಖರೀದಿಸಬೇಕು? ಏನನ್ನು ಖರೀದಿಸಬಾರದು? ಎಂಬ ಕುರಿತು ಯಾವುದೇ ದೇಶ ಭಾರತಕ್ಕೆ ತಿಳಿ ಹೇಳುವುದನ್ನು ನಾವು ಇಷ್ಟಪಡುವುದಿಲ್ಲ. ಅದೇ ರೀತಿ ಅಮೆರಿಕದಿಂದಲೂ ಏನನ್ನು ಖರೀಸಬೇಕು? ಎಂದು ನಾವೇ ನಿರ್ಧರಿಸುತ್ತೇವೆ. ಆ ಆಯ್ಕೆಯ ಸ್ವಾತಂತ್ರ್ಯ ನಮ್ಮದು. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಯಾವುದೇ ವಿಚಾರವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ನೇರವಾಗಿಯೇ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ರಷ್ಯಾದಿಂದ ಭಾರತ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವುದನ್ನು ಅಮೆರಿಕ ಆರಂಭದಿಂದಲೂ ವಿರೋಧಿಸುತ್ತಿದೆ. ಅಲ್ಲದೆ, ಈ ಕುರಿತು ಭಾರತದ ಮೇಲೆ ನಿರ್ಬಂಧದ ಬೆದರಿಕೆಯನ್ನೂ ಒಡ್ಡಿದೆ. ಅಮೆರಿಕ ಮತ್ತು ಸೋವಿಯತ್ ರಷ್ಯಾ ನಡುವೆ ಈಗಲೂ ಶೀತಲ ಸಮರ ನಡೆಯುತ್ತಿದ್ದು, ಸಿರಿಯಾ ಮತ್ತು ಉಕ್ರೇನ್ ಮಿಲಿಟರಿ ಕಾರ್ಯಾಚರಣೆಯಲ್ಲಿ ರಷ್ಯಾ ಪಾತ್ರ ಇದೆ ಎಂದು ಆರೋಪಿಸಿರುವ ಅಮೆರಿಕ, ಇದೇ ಕಾರಣಕ್ಕೆ 2017ರಲ್ಲಿ ಕಾನೂನು ರೂಪಿಸಿ ಅಮೆರಿಕ ಮಿತ್ರ ರಾಷ್ಟ್ರಗಳು ರಷ್ಯಾದಿಂದ ಯಾವುದೇ ಯುದ್ಧ ಸಲಕರಣೆಗಳನ್ನು ಖರೀದಿಸಬಾರದು ಎಂದು ತಾಕೀತು ಮಾಡಿತ್ತು. 

ಆದರೆ ಇದನ್ನು ಉಲ್ಲಂಘಿಸಿ ನ್ಯಾಟೋ ಮಿತ್ರ ರಾಷ್ಟ್ರವಾದ ಟರ್ಕಿ ಕಳೆದ ಜೂನ್ ತಿಂಗಳಲ್ಲಿ ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಮುಂದಾಗಿತ್ತು. ಇದರಿಂದ ಕೋಪಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಎಫ್-35 ಫೈಟರ್ ಜೆಟ್ ಕಾರ್ಯಕ್ರಮದಲ್ಲಿ ಟರ್ಕಿಯ ಪಾಲ್ಗೊಳ್ಳುವಿಕೆಯನ್ನು ಅಂತ್ಯಗೊಳಿಸಿದ್ದರು. ಅಲ್ಲದೆ, ಆ ದೇಶದ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದರು. ಅದೇ ರೀತಿ ಭಾರತ ಕೂಡ ರಷ್ಯಾದಿಂದ ಎಸ್ 400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದಾಗ ಭಾರತದ ಮೇಲೂ ನಿರ್ಬಂಧ ಹೇರುವ ಮಾತನಾಡಿತ್ತು. ಆದರೆ ಈ ನಿರ್ಬಂಧದ ಎಚ್ಚರಿಕೆಗೆ ಇದೀಗ ಭಾರತ ಖಡಕ್ ತಿರುಗೇಟು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com