

ಸಾನ್ ಫ್ರಾನ್ಸಿಸ್ಕೊ: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ರೀತಿಗೆ ಅಮೆರಿಕನ್ನರು ಅಸಮಾಧಾನ ವ್ಯಕ್ತಪಡಿಸಿದ ರೀತಿಯೇ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಸಹ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದಾರೆ.
ಹಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗಿಂತಲೂ ಕಡಿಮೆ ಪರಿಣಾಮಕಾರಿಯಾಗಿ ಅಮೆರಿಕ ಕೋವಿಡ್-19 ಸಾಂಕ್ರಾಮಿಕವನ್ನು ನಿರ್ವಹಿಸುತ್ತಿದೆ. ವಿಶ್ವದ ಬೇರೆ ಅಭಿವೃದ್ಧಿಶೀಲ ದೇಶಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಅಮೆರಿಕದಲ್ಲಿ ಮಾತ್ರ ಹೆಚ್ಚಾಗುತ್ತಿದೆ ಎಂದು ಮೊನ್ನೆ ಗುರುವಾರ ಝುಕರ್ ಬರ್ಗ್ ಶ್ವೇತಭವನದ ಕೊರೋನಾ ವೈರಸ್ ಸಲಹೆಗಾರ ಡಾ ಆಂಥೊನಿ ಫೌಸಿ ಜೊತೆಗೆ ನಡೆಸಿದ ಸಂದರ್ಶನ ವೇಳೆ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಅಮೆರಿಕದಲ್ಲಿ ಪ್ರತಿದಿನ 50 ಸಾವಿರಕ್ಕೂ ಅಧಿಕ ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿವೆ. ಇದನ್ನು ನೋಡಿದರೆ ನಮ್ಮ ಸರ್ಕಾರ ಸರಿಯಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈಜ್ಞಾನಿಕವಾಗಿ ನಮ್ಮ ದೇಶ ಕೋವಿಡ್-19ನ್ನು ನಿಭಾಯಿಸಬೇಕಾದ ಅಗತ್ಯವಿದೆ. ನಮ್ಮಲ್ಲಿ ಸರಿಯಾದ ತಪಾಸಣೆ ವ್ಯವಸ್ಥೆಯಿಲ್ಲದಿರುವುದು ಬೇಸರದ ಸಂಗತಿ. ಮಾಸ್ಕ್ ಧರಿಸುವಂತಹ ಮೂಲ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾದ್ದು ಅತ್ಯಗತ್ಯ ಎಂದರು.
ಅಮೆರಿಕದಲ್ಲಿ ಇದುವರೆಗೆ 35 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿದ್ದು 1 ಲಕ್ಷದ 38 ಸಾವಿರ ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ.