

ವಾಷಿಂಗ್ಟನ್: ಅಮೆರಿಕಾದಲ್ಲಿ 75 ಲಕ್ಷ ಜನರಿಗೆ ತಗುಲಿ 2.12 ಲಕ್ಷ ಮಂದಿಯನ್ನು ಬಲಿಪಡೆದುಕೊಂಡಿರುವ ಕೊರೋನಾ ಸೋಂಕು ಇದೀಗ ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ತಗುಲಿದ್ದು, ವೈದ್ಯರ ಸಲಹೆ ಮೇರೆಗೆ ಟ್ರಂಪ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ.
ಅಪಾರ ಬೆಂಬಲ ನೀಡಿದ ಪ್ರತೀಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ವಾಲ್ಟರ್ ರೀಡ್ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಆರೋಗ್ಯವಾಗಿದ್ದೇನೆ. ಅಲ್ಲಿಂದಲೇ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಮೆಲಾನಿಯಾ ಟ್ರಂಪ್ ಕೂಡ ಉತ್ತಮವಾಗಿದ್ದಾರೆಂದು ಟ್ರಂಪ್ ಟ್ವಿಟ್ ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.
ಕೊರೋನಾ ಸೋಂಕಿಗೆ ಒಳಗಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಲ್ಟರ್ ರೀಡ್ ಮಿಲಿಟರಿ ಮೆಡಿಕಲ್ ಸೆಂಟರ್ ಗೆ ದಾಖಲಾಗಿದ್ದಾರೆ. ಅಲ್ಲಿ ಅವರು ಮುಂದಿನ ಹಲವು ದಿನಗಳ ಕಾಲ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಆಸ್ಪತ್ರೆಯಿಂದಲೇ ಅಧ್ಯಕ್ಷೀಯ ಕಾರ್ಯ ಕಲಾಪಗಳನ್ನು ನಡೆಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮರೈನ್ ಒನ್ ಹೆಲಿಕಾಪ್ಟರ್ ಹತ್ತುವ ಮೊದಲು ನಡೆದುಕೊಂಡು ಪತ್ರಕರ್ತರತ್ತ ಕೈ ಬೀಸುತ್ತಿರುವ ದೃಶ್ಯಗಳನ್ನು ಸುದ್ದಿ ವಾಹಿನಿಗಳು ಶುಕ್ರವಾರ ಬಿತ್ತರಿಸಿವೆ.
ಅಮೆರಿಕಾ ಅಧ್ಯಕ್ಷರಿಗೆ ಕೋವಿಡ್ -19 ಸೋಂಕಿನ ಲಘು ಲಕ್ಷಣಗಳು ಕಾಣಿಸಿಕೊಂಡಿದ್ದು, ಆರೋಗ್ಯಕರವಾಗಿ ಹಾಗೂ ಉತ್ಸಾಹದಿಂದಿದ್ದಾರೆ. ನವಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಹಾಗೂ ಉಳಿದ ಅವಧಿಯ ಅಧ್ಯಕ್ಷೀಯ ಅವಧಿಗೆ ಮುಂದುವರಿಯಲಿದ್ದಾರೆ ಎಂದು ಶ್ವೇತಭವನ ಇದಕ್ಕೂ ಮುನ್ನ ಶುಕ್ರವಾರ ಹೇಳಿತ್ತು