

ಇಸ್ಲಾಮಾಬಾದ್: ಪಾಕಿಸ್ತಾನದ ಮೊಟ್ಟಮೊದಲ ಮೆಟ್ರೋ ರೈಲು ಸೇವೆ ಲಾಹೋರ್‌ನಲ್ಲಿ ಭಾನುವಾರ ಆರಂಭಗೊಂಡಿದೆ. ಕಿತ್ತಳೆ ಮಾರ್ಗ ಎಂದು ಹೆಸರಿಸಲಾಗಿರುವ ಈ ಸೇವೆಯನ್ನು ಚೀನಾ ಸ್ಟೇಟ್ ರೈಲ್ವೆ ಗ್ರೂಪ್ ಕಂಪೆನಿ ಮತ್ತು ಚೀನಾ ನಾರ್ತ್ ಇಂಡಸ್ಟ್ರೀಸ್ ಕಾರ್ಪೊರೇಷನ್ ನಿರ್ಮಿಸಿದೆ.
ಈ ಸೇವೆಯನ್ನು ಗುವಾಂಗ್‌ಜೌ ಮೆಟ್ರೋ ಗ್ರೂಪ್, ನೊರಿಂಕೊ ಇಂಟರ್ ನ್ಯಾಷನಲ್ ಮತ್ತು ಡೇವೂ ಪಾಕಿಸ್ತಾನ್ ಎಕ್ಸ್‌ಪ್ರೆಸ್ ಬಸ್ ಸೇವೆ ನಿರ್ವಹಿಸಲಿವೆ. ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡಿದೆ.
ಭಾನುವಾರ ಮೆಟ್ರೋ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಸರ್ದಾರ್ ಉಸ್ಮಾನ್ ಬುಜ್ದಾರ್ ಪಾಲ್ಗೊಂಡಿದ್ದರು. ಪಾಕಿಸ್ತಾನದಲ್ಲಿ ಮೆಟ್ರೋ ರೈಲು ಕಾರ್ಯರೂಪಕ್ಕೆ ಬಂದಿರುವುದಕ್ಕೆ ಚೀನಾ ಕಂಪನಿಗಳಿಗೆ ಕೃತಜ್ಞತೆ ಸಲ್ಲಿಸಿದ ಬುಜ್ದಾರ್, ಕಿತ್ತಳೆ ಮಾರ್ಗ ದೇಶದ ಮೊದಲ ಪರಿಸರ ಸ್ನೇಹಿ ಸಮೂಹ ಸಾರಿಗೆ ಯೋಜನೆಯಾಗಿದ್ದು, ಲಾಹೋರ್ ಜನರಿಗೆ ವಿಶ್ವ ದರ್ಜೆಯ ಪ್ರಯಾಣ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.
ಮೆಟ್ರೋ ರೈಲು ಮಾರ್ಗದಿಂದ ನಗರಾಭಿವೃದ್ಧಿ ಮತ್ತು ಆರ್ಥಿಕಾಭಿವೃದ್ಧಿ ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ