ಇರಾನ್ ಕಮಾಂಡರ್ ಹತ್ಯೆ: ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ; ವಿಶ್ವ ಸಮುದಾಯ ಎಚ್ಚರಿಕೆ

ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ರನ್ನು ಅಮೆರಿಕಾ ಪಡೆಗಳು ವೈಮಾನಿಕ ದಾಳಿಯಲ್ಲಿ ಕೊಂದು ಹಾಕಿದ ಬೆನ್ನಲ್ಲೇ ಹಾಲಿ ಪರಿಸ್ಥಿತಿ ಕುರಿತು ಜಾಗತಿಕ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ ಎಂದು ಎಚ್ಚರಿಕೆ ನೀಡಿದೆ.
ಸೊಲೈಮಾನಿ ಹತ್ಯೆ
ಸೊಲೈಮಾನಿ ಹತ್ಯೆ

ನವದೆಹಲಿ: ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ರನ್ನು ಅಮೆರಿಕಾ ಪಡೆಗಳು ವೈಮಾನಿಕ ದಾಳಿಯಲ್ಲಿ ಕೊಂದು ಹಾಕಿದ ಬೆನ್ನಲ್ಲೇ ಹಾಲಿ ಪರಿಸ್ಥಿತಿ ಕುರಿತು ಜಾಗತಿಕ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ ಎಂದು ಎಚ್ಚರಿಕೆ ನೀಡಿದೆ.

ಇಂದು ಬೆಳಗ್ಗೆ ಅಮೆರಿಕಾ ಸೇನಾ ಪಡೆ ನಡೆಸಿದ ವಾಯುದಾಳಿಯಲ್ಲಿ ಇರಾನಿನ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಖಾಸೆಮ್ ಸೊಲೈಮಾನಿ ಮೃತಪಟ್ಟಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇರೆಗೆ ಅಮೆರಿಕದ ಸಶಸ್ತ್ರ ಪಡೆಗಳು ಖಾಸೆಮ್ ಸೊಲೈಮಾನಿ ಅವರನ್ನು ಕೊಲ್ಲಲು ಬಾಗ್ದಾದ್‌ನಲ್ಲಿ ಶುಕ್ರವಾರ ವೈಮಾನಿಕ ದಾಳಿ ನಡೆಸಿದೆ ಎಂದು ರಕ್ಷಣಾ ಇಲಾಖೆ ತಿಳಿಸಿತ್ತು. ಇದರ ಬೆನ್ನಲ್ಲೇ ಇರಾನ್ ಕೂಡ ಮೇಜರ್ ಜನರಲ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಅಮೆರಿದಕ ವಿರುದ್ಧ ಅಲ್ಲಿನ ಉನ್ನತ ನಾಯಕರು ಪ್ರತಿಜ್ಞೆ ಮಾಡಿದ್ದಾರೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಯ ಕುಡ್ಸ್ ಫೋರ್ಸ್‌ನ ಕಮಾಂಡರ್ ಮೇಜರ್ ಜನರಲ್ ಕಾಸ್ಸೆಮ್ ಸೊಲೈಮಾನಿ ಅವರನ್ನು ಹತ್ಯೆ ಮಾಡಿದವರು ಇರಾನ್‌ನ ತೀವ್ರ ಪ್ರತಿಕ್ರಿಯೆಗಾಗಿ ಕಾಯಬೇಕಾಗುತ್ತದೆ. ಅಮೆರಿಕಾ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಎಂದು ಇರಾನ್ ಪಣತೊಟ್ಟಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.  

ಈ ನಡುವೆ ಸೊಲೈಮಾನಿ ಹತ್ಯೆ ಬೆನ್ನಲ್ಲೇ ಇರಾನ್ ಮತ್ತು ಅಮೆರಿಕ ನಡುವಿನ ಶೀಥಲ ಸಮರ ತಾರಕಕ್ಕೇರಿದ್ದು, ಯಾವುದೇ ಕ್ಷಣದಲ್ಲೂ ಯುದ್ಧ ಸಂಭವಿಸುವ ಸಾಧ್ಯತೆಯನ್ನು ಅಲ್ಲ ಗಳೆಯುವಂತಿಲ್ಲ, ಇದೇ ಕಾರಣಕ್ಕೆ ಬ್ರಿಟನ್, ಜಪಾನ್, ಜರ್ಮನಿ, ರಷ್ಯಾ, ಫ್ರಾನ್ಸ್ ಸೇರಿದಂತೆ ವಿಶ್ವದ ಹಲವು ಸೂಪರ್ ಪವರ್ ದೇಶಗಳು ಜಾಗತಿಕ ಎಚ್ಚರಿಕೆ ನೀಡಿದ್ದು, ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿವೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಷ್ಟಾ ಸೊಲೈಮಾನಿ ಹತ್ಯೆ ಮಾಡಿದ ಅಮೆರಿಕದ ನಡೆ ಗಂಭೀರ ಪರಿಣಾಮಗಳಿಂದ ತುಂಬಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಅಂತೆಯೇ ಅಮೆರಿಕದ ಈ ನಡೆ ಮಧ್ಯ ಪ್ರಾಚ್ಯದಲ್ಲಿನ ಸಮಸ್ಯೆಗಳು ಉಲ್ಬಣವಾಗುವಂತೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಚೀನಾ ಗಂಭೀರ ಮತ್ತು ತೀವ್ರ ಕಳವಳಕಾರಿ ಬೆಳವಣಿಗೆ ಎಂದು ಹೇಳಿದ್ದು, ಮಧ್ಯ ಪ್ರಾಚ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ನಿಯಂತ್ರಿಸಬೇಕಿದೆ. ಪ್ರಮುಖವಾಗಿ ಅಮೆರಿಕ ಯಾವುದೇ ರೀತಿಯ ಸೇನಾ ಕಾರ್ಯಾಚರಣೆ ನಡೆಸದಂತೆ ನಿಯಂತ್ರಣ ಹೇರಬೇಕು ಎಂದು ಚೀನಾ ಹೇಳಿದೆ. ಜರ್ಮನಿ ಕೂಡ ಇಂತಹುದೇ ಹೇಳಿಕೆ ನೀಡಿದ್ದು, ಅಮೆರಿಕ ನಡೆ ನಿಜಕ್ಕೂ ಕಳವಳಕಾರಿಯಾಗಿದೆ ಎಂದು ಹೇಳಿದೆ.

ಅದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಅಮೆರಿಕದ ಮಿತ್ರರಾಷ್ಟ್ರ ಬ್ರಿಟನ್ ಮಾತ್ರ, ಪರೋಕ್ಷವಾಗಿ ಅಮೆರಿಕ ಬೆಂಬಲಕ್ಕೆ ನಿಂತಿದ್ದು, ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೈಮಾನ್ ಅತ್ಯಂತ ಪ್ರಚೋದನಾತ್ಮಕ ನಡೆ ಅನುಸರಿಸುತ್ತಿದ್ದರು. ಇರಾನ್ ಸೇನೆ ಆಕ್ರಮಣಕಾರಿ ಬೆದರಿಕೆ ಒಡ್ಡುತ್ತಿತ್ತು ಎಂದು ಹೇಳಿದೆ.

ಒಟ್ಟಾರೆ ಸೊಲೈಮಾನಿ ಹತ್ಯೆ ವಿಚಾರವಾಗಿ ಜಾಗತಿಕ ಸಮುದಾಯ ಮತ್ತೆ ಇಬ್ಭಾಗವಾಗುವ ಸಾಧ್ಯತೆ ಇದ್ದು, ಇದು ಜಾಗತಿಕ ಯುದ್ಧಕ್ಕೆ ಎಡೆ ಮಾಡಿಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com