ಗಂಭೀರ ಎಚ್ಚರಿಕೆ ನಡುವೆ ತೈವಾನ್ ಗೆ ನ್ಯಾನ್ಸಿ ಪೆಲೋಸಿ ಪ್ರಯಾಣ; ಅಮೆರಿಕ ಜೊತೆ ಚೀನಾ ಮಾತುಕತೆ ಸ್ಥಗಿತ!

ಗಂಭೀರ ಎಚ್ಚರಿಕೆಯ ನಡುವೆಯೂ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಬಂದಿಳಿದಿರುವ ಪರಿಣಾಮ ಅಮೆರಿಕ ವಿರುದ್ಧ ಕೆಂಗಣ್ಣು ಬೀರಿರುವ ಚೀನಾ ಇದೀಗ ಅಮೆರಿಕದ ಜೊತೆ ತನ್ನ ಮಾತುಕತೆಯನ್ನು ಸ್ಥಗಿತಗೊಳಿಸಿದೆ.
ತೈವಾನ್ ಪ್ರವಾಸದಲ್ಲಿ ಪೆಲೋಸಿ
ತೈವಾನ್ ಪ್ರವಾಸದಲ್ಲಿ ಪೆಲೋಸಿ

ಬೀಜಿಂಗ್: ಗಂಭೀರ ಎಚ್ಚರಿಕೆಯ ನಡುವೆಯೂ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಬಂದಿಳಿದಿರುವ ಪರಿಣಾಮ ಅಮೆರಿಕ ವಿರುದ್ಧ ಕೆಂಗಣ್ಣು ಬೀರಿರುವ ಚೀನಾ ಇದೀಗ ಅಮೆರಿಕದ ಜೊತೆ ತನ್ನ ಮಾತುಕತೆಯನ್ನು ಸ್ಥಗಿತಗೊಳಿಸಿದೆ.

ಹೌದು.. ಅಮೆರಿಕದ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯನ್ನು ಗಂಭೀರವಾಗಿ ವಿರೋಧಿಸಿರುವ ಚೀನಾ ಇದೀಗ ಹವಾಮಾನ ಬದಲಾವಣೆ, ಮಿಲಿಟರಿ ಸಮಸ್ಯೆಗಳು, ಮಾದಕ ದ್ರವ್ಯ ವಿರೋಧಿ ಕೆಲಸಗಳ ಕುರಿತು ಅಮೆರಿಕ ಜೊತೆಗಿನ ಮಾತುಕತೆಯನ್ನು ಸ್ಥಗಿತಗೊಳಿಸಿದೆ.

ಇತ್ತ ತೈವಾನ್ ಗೆ ಬಂದಿಳಿಯುತ್ತಲೇ ಈ ಕುರಿತು ಟ್ವೀಟ್ ಮಾಡಿರುವ ಪೆಲೋಸಿ ಅವರು, 'ತೈವಾನ್‌ಗೆ ನಮ್ಮ ನಿಯೋಗದ ಭೇಟಿಯು ತೈವಾನ್‌ನ ರೋಮಾಂಚಕ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ. ನಮ್ಮ ಭೇಟಿಯು ತೈವಾನ್‌ಗೆ ಹಲವಾರು ಕಾಂಗ್ರೆಷನಲ್ ನಿಯೋಗಗಳಲ್ಲಿ ಒಂದಾಗಿದೆ. 1979 ರ ತೈವಾನ್ ಸಂಬಂಧಗಳ ಕಾಯಿದೆಯ ಯುಎಸ್‌-ಚೀನಾ ನಡುವಿನ ಜಂಟಿ ಸಂಬಂಧಗಳು, ಆರು ಭರವಸೆಗಳನ್ನು ಯಾವುದೇ ರೀತಿಯಲ್ಲಿ ದೀರ್ಘಾವಧಿಯ ಯುನೈಟೆಡ್ ಸ್ಟೇಟ್ಸ್ ನೀತಿಯನ್ನು ವಿರೋಧಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಇನ್ನು ಪೆಲೋಸಿ ತೈವಾನ್ ಭೇಟಿ ವಿರೋಧಿಸಿ ಚೀನಾ, ಕ್ಸಿಯಾಮೆನ್ ಸುತ್ತ ಪೂರ್ವ ಕರಾವಳಿಯ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಆಕೆಯ ವಿಮಾನ ತೈಪೆಯಲ್ಲಿ ಇಳಿಯಿತು. ಚೀನಾದ ಯುದ್ಧ ವಿಮಾನಗಳು ತೈವಾನ್ ಜಲಸಂಧಿಯ ಬಳಿ ಹಾರಾಟ ನಡೆಸಿದೆ ಎಂದು ವರದಿಯಾಗಿದೆ.

ಕಳೆದ ಎರಡು ದಿನಗಳಲ್ಲಿ 100 ಕ್ಕೂ ಹೆಚ್ಚು ಯುದ್ಧವಿಮಾನಗಳು ಮತ್ತು 10 ಯುದ್ಧನೌಕೆಗಳು ತೈವಾನ್ ಸುತ್ತಮುತ್ತಲಿನ ಲೈವ್-ಫೈರ್ ಮಿಲಿಟರಿ ಡ್ರಿಲ್‌ಗಳಲ್ಲಿ ಭಾಗವಹಿಸಿವೆ ಎಂದು ಹೇಳಲಾಗಿದೆ.  ಇದಕ್ಕೂ ಮೊದಲು ನ್ಯಾನ್ಸಿ ಪೆಲೋಸಿ ಅವರು ಸ್ವಯಂ-ಆಡಳಿತ ದ್ವೀಪ ತೈವಾನ್ ಗೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಅಮೆರಿಕದ ವಿರುದ್ಧ ನಿರ್ಬಂಧಗಳನ್ನು ಘೋಷಿಸಿತ್ತು.  

25 ವರ್ಷಗಳ ಬಳಿಕ ಅಮೆರಿಕದ ಉನ್ನತ ಮಟ್ಟದ ಪ್ರತಿನಿಧಿಯೊಬ್ಬರು ತೈವಾನ್‌ಗೆ ಭೇಟಿ ನೀಡಿದ್ದಾರೆ. ನ್ಯಾನ್ಸಿ ಪೆಲೋಸಿ ಅವರು ಪ್ರಯಾಣಿಸುತ್ತಿದ್ದ ಅಮೆರಿಕದ ವಿಶೇಷ ವಿಮಾನಕ್ಕೆ ತೈವಾನ್‌ ವಾಯುಪಡೆಯ ಯುದ್ಧ ವಿಮಾನಗಳು ರಕ್ಷಣೆ ಒದಗಿಸಿದವು. ತೈವಾನ್‌ ವಾಯು ಪ್ರದೇಶಕ್ಕೆ ಅಮೆರಿಕದ ವಿಮಾನವು ಪ್ರವೇಶಿಸುವುದಕ್ಕೂ ಮುನ್ನ ಜಪಾನ್‌ನ ವಾಯುನೆಲೆಯಿಂದ ಅಮೆರಿಕ ವಾಯುಪಡೆಯ ಕನಿಷ್ಠ 13 ವಿಮಾನಗಳು ರಕ್ಷಣಾ ಹಾರಾಟ ಆರಂಭಿಸಿದವು. ಎಂಟು ಯುದ್ಧ ವಿಮಾನಗಳು ಹಾಗೂ ಐದು ಟ್ಯಾಂಕರ್‌ಗಳು ಜಪಾನ್‌ನಿಂದ ಹಾರಾಟ ಆರಂಭಿಸಿ, ನ್ಯಾನ್ಸಿ ಪೆಲೋಸಿ ಅವರಿದ್ದ ವಿಮಾನಕ್ಕೆ ಭದ್ರತೆ ಒದಗಿಸಿದವು.

ಚೀನಾ ತೀವ್ರ ವಿರೋಧ
ಇನ್ನು ಪೆಲೋಸಿ ಅವರ ತೈವಾನ್ ಭೇಟಿಯನ್ನು ತೀವ್ರವಾಗಿ ಟೀಕಿಸಿರುವ ಚೀನಾ, '"ತೈವಾನ್ ಜಲಸಂಧಿಯಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಚೋದನಕಾರಿ ಕ್ರಮಗಳನ್ನು ಅಮೆರಿಕ ತೆಗೆದುಕೊಳ್ಳುತ್ತಿದೆ. ಅದು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಚೀನಾದ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರೆ ಅಮೆರಿಕ ಖಂಡಿತವಾಗಿ ಹೊಣೆಗಾರನಾಗುತ್ತದೆ ಮತ್ತು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಚೀನಾ ಎಚ್ಚರಿಕೆಗೆ ಹೆದರಲ್ಲ 
ಇನ್ನು ಚೀನಾ ಎಚ್ಚೆರಿಕೆಗೆ ತಿರುಗೇಟು ನೀಡಿರುವ ಅಮೆರಿಕ, 'ಚೀನಾ "ಸೇಬರ್ ರ್ಯಾಟ್ಲಿಂಗ್" ಎಂದು ಕರೆದದ್ದಕ್ಕೆ ಹೆದರುವುದಿಲ್ಲ. ವಾಷಿಂಗ್ಟನ್ ಅಧಿಕೃತವಾಗಿ ತೈವಾನ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ. ಆದರೆ ದ್ವೀಪವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯ ಮಾಡಲು ಅಮೆರಿಕ ಕಾನೂನಿನ ಪ್ರಕಾರ ನೆರವು ನೀಡಲಿದೆ ಎಂದು ತಿಳಿಸಿದೆ. ಇದೇ ವಿಚಾರವನ್ನು ಸ್ಪಷ್ಟಪಡಿಸಿರುವ ಅಮೆರಿಕದ ನ್ಯಾನ್ಸಿ ಪೆಲೋಸಿ ಅವರು, '1979 ರ ತೈವಾನ್ ಸಂಬಂಧಗಳ ಕಾಯಿದೆಯನ್ನು ತಾನು ವಿರೋಧಿಸಿಲ್ಲ, ಪ್ರಜಾಪ್ರಭುತ್ವಕ್ಕೆ ಬೆಂಬಲ ನೀಡುವ ಉದ್ದೇಶದಿಂದ ತೈವಾನ್‌ಗೆ ಭೇಟಿ ನೀಡಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com