
ಟಿಯಾನ್‌ಜಿನ್: ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯನ್ನು ಸೋಮವಾರ ಉದ್ಘಾಟಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು, ಪರೋಕ್ಷವಾಗಿ ಅಮೆರಿಕಾ ವಿರುದ್ಧ ಕಿಡಿಕಾರಿದರು. ಜಾಗತಿಕ ಕ್ರಮದಲ್ಲಿ 'ಬೆದರಿಸುವ ವರ್ತನೆ'ಯನ್ನು ಖಂಡಿಸಿದರು.
ಶೃಂಗಸಭೆಯಲ್ಲಿ ರಷ್ಯಾದ ವ್ಲಾಡಿಮಿರ್ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ನಾಯಕರು ಶೀತಲ ಸಮರದ ಮನಸ್ಥಿತಿ, ಬಣ ರಾಜಕೀಯ ಮತ್ತು ಬೆದರಿಕೆಯನ್ನು ತಿರಸ್ಕರಿಸುವಾಗ ನ್ಯಾಯವನ್ನು ಎತ್ತಿಹಿಡಿಯಬೇಕೆಂದು ಕರೆ ನೀಡಿದರು.
ಇದಕ್ಕೂ ಮುನ್ನ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು, ಪುಟಿನ್ ಮತ್ತು ಮೋದಿ ಸೇರಿದಂತೆ 20 ಕ್ಕೂ ಹೆಚ್ಚು ವಿಶ್ವ ನಾಯಕರು ಭಾಗವಹಿಸಿದ್ದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡದ ಅವರು, ಚೀನಾವು SCOದ ಎಲ್ಲಾ ಸದಸ್ಯರೊಂದಿಗೆ ಪ್ರಾದೇಶಿಕ ಭದ್ರತಾ ವೇದಿಕೆಯನ್ನು ಉನ್ನತೀಕರಿಸಲು ಕೆಲಸ ಮಾಡುತ್ತದೆ ಎಂದು ಹೇಳಿದರು, ಅಮೆರಿಕದ ಪ್ರಭಾವವನ್ನು ಪ್ರಶ್ನಿಸುವ ಹೊಸ ಜಾಗತಿಕ ಭದ್ರತಾ ಕ್ರಮಕ್ಕಾಗಿ ಅವರ ದೃಷ್ಟಿಕೋನವನ್ನು ವಿವರಿಸಿದರು.
SCO ಹೊಸ ರೀತಿಯ ಅಂತರರಾಷ್ಟ್ರೀಯ ಸಂಬಂಧಗಳಿಗೆ ಉದಾಹರಣೆಯನ್ನು ನೀಡಿದ್ದು, ಬಾಹ್ಯ ಹಸ್ತಕ್ಷೇಪದ ವಿರುದ್ಧ ದೃಢವಾಗಿ ನಿಂತಿದೆ ಎಂದು ಹೇಳಿದರು.
ಜಾಗತಿಕ ವ್ಯವಹಾರಗಳಲ್ಲಿ ರಚನಾತ್ಮಕ ಭಾಗವಹಿಸುವಿಕೆ, ಪ್ರಾಬಲ್ಯ, ಬೆದರಿಗೆ ವರ್ತನೆ-ಅಧಿಕಾರವನ್ನು ತಿರಸ್ಕರಿಸುವುದು ಮತ್ತು ಬಹುಪಕ್ಷೀಯತೆಗೆ ಬಲವಾದ ಬೆಂಬಲವನ್ನು ನೀಡಬೇಕೆಂದು ಕರೆ ನೀಡಿದರು.
ಇದೇ ವೇಳೆ ಈ ವರ್ಷದೊಳಗೆ SCO ಸದಸ್ಯ ರಾಷ್ಟ್ರಗಳಿಗೆ 2 ಬಿಲಿಯನ್ ಯುವಾನ್ (ಸುಮಾರು 281 ಮಿಲಿಯನ್ ಅಮೆರಿಕನ್ ಡಾಲರ್) ಅನುದಾನವನ್ನು ನೀಡುವುದಾಗಿ ವಾಗ್ದಾನ ಮಾಡಿದರು.
Advertisement