ಗ್ರೀನ್‌ಲ್ಯಾಂಡ್'ಗೆ ಅಮೆರಿಕಾ ಪಟ್ಟು: ಇರಾನ್ ವಿಚಾರದಲ್ಲಿ ಸಹಕರಿಸದ್ದಕ್ಕೆ NATOನ್ನು ‘ಪೇಪರ್ ಟೈಗರ್’ ಎಂದು ಟೀಕಿಸಿದ ಟ್ರಂಪ್, ಮಿತ್ರರಾಷ್ಟ್ರಗಳ ನಡುವೆ ಭಾರೀ ಬಿರುಕು..!

ಅಮೆರಿಕ ಈಗಾಗಲೇ ಗ್ರೀನ್‌ಲ್ಯಾಂಡ್‌ನಲ್ಲಿ ಥುಲೆ ಏರ್ ಬೇಸ್ (ಪಿಟುಫಿಕ್ ಸ್ಪೇಸ್ ಬೇಸ್) ಎಂಬ ಪ್ರಮುಖ ಸೈನಿಕ ತಾಣವನ್ನು ಹೊಂದಿದೆ. ಇದರಿಂದ ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾ ಚಟುವಟಿಕೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ.
US president Donald trump
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ಕುರಿತ ಇತ್ತೀಚಿನ ಹೇಳಿಕೆಗಳು ಇದೀಗ ಜಾಗತಿಕ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಈ ಬೆಳವಣಿಗೆ ನ್ಯಾಟೋ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳು ಮೂಡಿರುವುದನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿವೆ.

ಟ್ರಂಪ್ ಅವರು NATO ಮಿತ್ರ ರಾಷ್ಟ್ರಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇರಾನ್ ಯುದ್ಧದ ಸಮಯದಲ್ಲಿ ಅಮೆರಿಕಕ್ಕೆ ನೆರವು ನೀಡಲು ನಿರಾಕರಿಸಿದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಅಮೆರಿಕ ನ್ಯಾಟೋ ಸದಸ್ಯ ರಾಷ್ಟ್ರಗಳ ಬಳಿ ಸಹಾಯ ಕೇಳಿದಾಗ, ಆ ರಾಷ್ಟ್ರಗಳು ಸ್ಪಷ್ಟವಾಗಿ ನಿರಾಕರಿಸಿದವು ಮಾತ್ರವಲ್ಲದೆ, “ಉದ್ದೇಶಪೂರ್ವಕವಾಗಿಯೇ ಸಹಾಯ ಮಾಡದಿರುವಂತೆ ನಡೆದುಕೊಂಡವು” ಎಂದು ಆರೋಪಿಸಿದ್ದಾರೆ.

“ನಾವು NATO ಬಳಿ ಹೋದೆವು, ಆದರೆ ಅವರು ‘ಸಹಾಯ ಮಾಡುವುದಿಲ್ಲ’ ಎಂದರು” ಎಂದು ಟ್ರಂಪ್ ಅವರು ತಿಳಿಸಿದ್ದಾರೆ.

ಇದಲ್ಲದೆ NATOವನ್ನು “ಪೇಪರ್ ಟೈಗರ್” ಎಂದು ಕರೆದಿರುವ ಟ್ರಂಪ್ ಅವರು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಈ ಒಕ್ಕೂಟದ ಮೇಲೆ ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ. ಇದು ನ್ಯಾಟೋ ಒಗ್ಗಟ್ಟಿನ ಮೇಲೆ ಗಂಭೀರ ಪ್ರಶ್ನೆಗಳನ್ನು ಶುರುವಾಗುವಂತೆ ಮಾಡಿದೆ.

ಇದಲ್ಲದೆ, "ಅವರು ಅದನ್ನು ನಮಗೆ ನೀಡಲು ಬಯಸುವುದಿಲ್ಲ" ಎಂಬ ಟ್ರಂಪ್ ಅವರ ಹೇಳಿಕೆ, ಗ್ರೀನ್‌ಲ್ಯಾಂಡ್'ಗೆ ಮೇಲಿನ ಅಮೆರಿಕದ ಆಸಕ್ತಿಯನ್ನು ಇನ್ನಷ್ಟು ಸ್ಪಷ್ಟಪಡಿಸಿದೆ,

US president Donald trump
ಗ್ರೀನ್‌ಲ್ಯಾಂಡ್ ಯುಎಸ್ ಪ್ರಾಂತ್ಯ; 2026 ರಲ್ಲಿ ಸ್ಥಾಪನೆ: ಅಮೆರಿಕದ ನಕ್ಷೆ ಹೊಸ ನಕ್ಷೆ ಬಿಡುಗಡೆ ಮಾಡಿದ ಟ್ರಂಪ್!

ಇದರ ನಡುವೆಯೇ, NATO ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದು, ಟ್ರಂಪ್ ಸೇರಿದಂತೆ ಅಮೆರಿಕದ ಹಿರಿಯ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮೈತ್ರಿ ಬಿಕ್ಕಟ್ಟು, ಭದ್ರತಾ ವಿಚಾರಗಳು ಹಾಗೂ ಇರಾನ್ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ವಿವಾದಕ್ಕೆ ಗ್ರೀನ್ ಲ್ಯಾಂಡ್ ಪಟ್ಟು ಕಾರಣವಾಗಿದೆ. ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಸೇರ್ಪಡೆ ಮಾಡಿಕೊಳ್ಳಲು ಬಯಸುತ್ತಿರುವುದಾಗಿ ಪುನರುಚ್ಚರಿಸಿದ್ದು, ಡೆನ್ಮಾರ್ಕ್ ಇದನ್ನು ಕಟ್ಟುನಿಟ್ಟಾಗಿ ತಿರಸ್ಕರಿಸಿದೆ. ಈ ವಿಷಯವೇ NATO ದೇಶಗಳೊಂದಿಗೆ ಸಂಬಂಧ ಹದಗೆಡುವ ಪ್ರಮುಖ ಕಾರಣವೆಂದು ಟ್ರಂಪ್ ಹೇಳಿದ್ದಾರೆ.

ಇದಲ್ಲದೆ, ಟ್ರಂಪ್ ಅವರು ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಮೇಲೂ ಟೀಕೆ ವ್ಯಕ್ತಪಡಿಸಿದ್ದು, ಇರಾನ್ ಯುದ್ಧದಲ್ಲಿ ಯಾವುದೇ ಸಹಾಯ ಮಾಡಿಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಸೌದಿ ಅರೇಬಿಯಾ, ಖತಾರ್, ಕುವೈತ್, ಬಹ್ರೈನ್ ಮತ್ತು ಯುಎಇ ದೇಶಗಳನ್ನು ಪ್ರಶಂಸಿಸಿ, ಅವುಗಳು ಯುದ್ಧದ ಸಮಯದಲ್ಲಿ ಮಹತ್ವದ ಬೆಂಬಲ ನೀಡಿವೆ ಎಂದು ಹೇಳಿದ್ದಾರೆ.

ಗ್ರೀನ್‌ಲ್ಯಾಂಡ್, ಡೆನ್ಮಾರ್ಕ್ ಆಡಳಿತದಲ್ಲಿರುವ ಸ್ವಾಯತ್ತ ಪ್ರದೇಶವಾಗಿದ್ದು, ಭೌಗೋಳಿಕವಾಗಿ ಆರ್ಕ್ಟಿಕ್ ಪ್ರದೇಶದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿ ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳು—ತೈಲ, ಅನಿಲ, ಅಪರೂಪದ ಖನಿಜಗಳು ಇವೆ ಎಂಬ ಅಂದಾಜುಗಳಿವೆ. ಜೊತೆಗೆ, ಹಿಮ ಕರಗುತ್ತಿರುವುದರಿಂದ ಹೊಸ ಸಾಗಣೆ ಮಾರ್ಗಗಳು ತೆರೆದುಕೊಳ್ಳುತ್ತಿದ್ದು, ಜಾಗತಿಕ ವ್ಯಾಪಾರದಲ್ಲಿ ಗ್ರೀನ್‌ಲ್ಯಾಂಡ್‌ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಟ್ರಂಪ್ ಆಡಳಿತವು ಗ್ರೀನ್‌ಲ್ಯಾಂಡ್ ಮೇಲೆ ನಿಯಂತ್ರಣ ಸಾಧಿಸುವುದನ್ನು ಕೇವಲ ಭೂಪ್ರದೇಶದ ವಿಸ್ತರಣೆ ಎಂದೇ ನೋಡದೆ, ಅದನ್ನು ಸೈನಿಕ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ ಹೆಜ್ಜೆ ಎಂದು ಪರಿಗಣಿಸಿದೆ.

ಅಮೆರಿಕ ಈಗಾಗಲೇ ಗ್ರೀನ್‌ಲ್ಯಾಂಡ್‌ನಲ್ಲಿ ಥುಲೆ ಏರ್ ಬೇಸ್ (ಪಿಟುಫಿಕ್ ಸ್ಪೇಸ್ ಬೇಸ್) ಎಂಬ ಪ್ರಮುಖ ಸೈನಿಕ ತಾಣವನ್ನು ಹೊಂದಿದೆ. ಇದರಿಂದ ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾ ಚಟುವಟಿಕೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ.

US president Donald trump
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಟ್ರಂಪ್ ದಿಢೀರ್ ಯೂ-ಟರ್ನ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ವಿಧಿಸದಿರಲು ನಿರ್ಧಾರ..!

ಆದರೆ, ಈ ಪ್ರಸ್ತಾಪವನ್ನು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಸರ್ಕಾರಗಳು ತೀವ್ರವಾಗಿ ತಳ್ಳಿಹಾಕಿವೆ. ಅವರು ಗ್ರೀನ್‌ಲ್ಯಾಂಡ್ ಸ್ವಾಯತ್ತತೆಯನ್ನು ಯಾವುದೇ ರೀತಿಯ ಒತ್ತಡಕ್ಕೆ ಒಳಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಲುವು ಯುರೋಪಿಯನ್ ರಾಷ್ಟ್ರಗಳಲ್ಲಿಯೂ ವ್ಯಾಪಕ ಬೆಂಬಲ ಪಡೆದಿದೆ.

ಈ ಹಿನ್ನೆಲೆಯಲ್ಲಿ, ಟ್ರಂಪ್ ನ್ಯಾಟೋ ಮೈತ್ರಿಕೂಟದ ದೇಶಗಳ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಯುರೋಪಿಯನ್ ದೇಶಗಳು ಅಮೆರಿಕದ ಭದ್ರತಾ ನೀತಿಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿಲ್ಲ ಎಂಬ ಅಸಮಾಧಾನವನ್ನು ಟ್ರಂಪ್ ಅವರು ವ್ಯಕ್ತಪಡಿಸಿದ್ದು, ಇದು ನ್ಯಾಟೋ ಒಳಗಿನ ಭಿನ್ನಾಭಿಪ್ರಾಯಗಳು ಸ್ಫೋಟಗೊಳ್ಳುವಂತೆ ಮಾಡಿದೆ.

ಇದಲ್ಲದೆ, ಟ್ರಂಪ್ ನ್ಯಾಟೋ ದಿಂದ ಅಮೆರಿಕ ಹೊರಬರುವ ಸಾಧ್ಯತೆಯನ್ನು ಸೂಚಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ನ್ಯಾಟೋ ಆರ್ಟಿಕಲ್ 5 ಎಂಬ ಪರಸ್ಪರ ರಕ್ಷಣಾ ಒಪ್ಪಂದವೇ ಈ ಮೈತ್ರಿಕೂಟದ ಪ್ರಮುಖ ಆಧಾರವಾಗಿದ್ದು, ಅದನ್ನು ದುರ್ಬಲಗೊಳಿಸುವ ಯಾವುದೇ ಹೇಳಿಕೆ ಜಾಗತಿಕ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಆರ್ಕ್ಟಿಕ್ ಪ್ರದೇಶದಲ್ಲಿ ಈಗಾಗಲೇ ರಷ್ಯಾ ಮತ್ತು ಚೀನಾ ತಮ್ಮ ಪ್ರಭಾವವನ್ನು ವಿಸ್ತರಿಸಲು ಮುಂದಾಗಿರುವ ಸಂದರ್ಭದಲ್ಲಿ, ಅಮೆರಿಕ-ಯುರೋಪ್ ನಡುವಿನ ಭಿನ್ನಾಭಿಪ್ರಾಯಗಳು ಮೈತ್ರಿಕೂಟದ ಬಲವನ್ನು ಕುಗ್ಗಿಸುವ ಸಾಧ್ಯತೆಹಗಳಿವೆ.

ಗ್ರೀನ್‌ಲ್ಯಾಂಡ್ ವಿವಾದವು ಈ ದೊಡ್ಡ ಭೌಗೋಳಿಕ ಮತ್ತು ರಾಜಕೀಯ ಸ್ಪರ್ಧೆಯ ಒಂದು ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಜಾಗತಿಕವಾಗಿ ಈ ಬೆಳವಣಿಗೆಗಳು ಆರ್ಥಿಕ ಹಾಗೂ ಭದ್ರತಾ ದೃಷ್ಟಿಯಿಂದ ಮಹತ್ವ ಪಡೆದಿದ್ದು, ತೈಲ, ಸಾಗಣೆ ಮತ್ತು ಸೇನಾ ಸಮತೋಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಆರ್ಕ್ಟಿಕ್ ಪ್ರದೇಶವು ಭವಿಷ್ಯದ ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಒಟ್ಟಾರೆ, ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ನಿಲುವು ಕೇವಲ ಒಂದು ಭೂಪ್ರದೇಶದ ವಿವಾದವಾಗಿರದೇ, ನ್ಯಾಟೋ ಮೈತ್ರಿಕೂಟದ ಏಕತೆ, ಅಮೆರಿಕಾ-ಯುರೋಪ್ ಸಂಬಂಧಗಳು ಮತ್ತು ಜಾಗತಿಕ ಶಕ್ತಿಸಮತೋಲನವನ್ನು ಪ್ರಭಾವಿಸುವ ಪ್ರಮುಖ ಬೆಳವಣಿಗೆಯಾಗಿ ರೂಪುಗೊಳ್ಳುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com