Hormuz ಉದ್ವಿಗ್ನತೆ ಮತ್ತಷ್ಟು ತೀವ್ರ: Iran ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ; ಟೆಹ್ರಾನ್ ಪ್ರತೀಕಾರ, ಬಹ್ರೇನ್-ಕುವೈತ್ ಗುರಿಯಾಗಿಸಿ ಕ್ಷಿಪಣಿಗಳ ಸುರಿ ಮಳೆ..!

ಇರಾನ್ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸಲು ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದ ಈಗಾಗಲೇ ಸಂಪೂರ್ಣವಾಗಿ ವಿಫಲವಾಗಿದ್ದು, ಎರಡೂ ರಾಷ್ಟ್ರಗಳು ಮತ್ತೆ ತೀವ್ರ ದಾಳಿ-ಪ್ರತಿದಾಳಿಯಲ್ಲಿ ತೊಡಗಿವೆ.
Hormuz
ಹಾರ್ಮುಜ್ ಜಲಸಂಧಿ
Updated on

ನವದೆಹಲಿ/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ. ಅಮೆರಿಕದ ಮಿಲಿಟರಿ ಪಡೆಗಳು ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ಉತ್ತರ ಭಾಗದ ಪ್ರಮುಖ ಸೇನಾ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿವೆ.

ಇದರ ಬೆನ್ನಲ್ಲೇ, ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು (Naval Blockade) ಮೀರಿ ಚಲಿಸಲು ಯತ್ನಿಸಿದ ವಾಣಿಜ್ಯ ತೈಲ ಟ್ಯಾಂಕರ್ ಹಡಗೊಂದರ ಮೇಲೆ ಅಮೆರಿಕಾ ಪಡೆಗಳು ಕ್ಷಿಪಣಿ ದಾಳಿ ನಡೆಸಿ, ಅದನ್ನು ಸಮುದ್ರದಲ್ಲೇ ನಿಷ್ಕ್ರಿಯಗೊಳಿಸಿವೆ.

ಮೂಲಗಳ ಪ್ರಕಾರ, ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪಡೆಗಳು ಇರಾನ್‌ನ ಇತಿಹಾಸದಲ್ಲೇ ಅತ್ಯಂತ ಆಳವಾದ ಭಾಗಗಳಿಗೆ ನುಗ್ಗಿ ದಾಳಿ ನಡೆಸಿವೆ ಎಂದು ತಿಳಿದುಬಂದಿದ್ದು, ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಉತ್ಪಾದನೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮದ ಪ್ರಮುಖ ಕೇಂದ್ರವಾಗಿರುವ 'ಸೆಮ್ನಾನ್' ಪ್ರಾಂತ್ಯವನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ.

ಬಂದರ್ ಅಬ್ಬಾಸ್ ಮತ್ತು ಖೇಶ್ಮ್ ದ್ವೀಪಗಳಲ್ಲಿರುವ ಇರಾನ್‌ನ ಡ್ರೋನ್ ಉಡಾವಣಾ ಕೇಂದ್ರಗಳು ಮತ್ತು ರೇಡಾರ್ ವ್ಯವಸ್ಥೆಗಳನ್ನು ಅಮೆರಿಕ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಸಿಸ್ತಾನ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಇರಾನ್‌ನ ಕನಿಷ್ಠ ಏಳು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೆ ಪ್ರತಿಯಾಗಿ ಇರಾನ್, ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದ್ದು, ಸಂಪೂರ್ಣ ಯುದ್ಧದ ಆತಂಕ ಮತ್ತೆ ಎದುರಾಗಿದೆ.

ಇರಾನ್ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸಲು ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದ ಈಗಾಗಲೇ ಸಂಪೂರ್ಣವಾಗಿ ವಿಫಲವಾಗಿದ್ದು, ಎರಡೂ ರಾಷ್ಟ್ರಗಳು ಮತ್ತೆ ತೀವ್ರ ದಾಳಿ-ಪ್ರತಿದಾಳಿಯಲ್ಲಿ ತೊಡಗಿವೆ.

Hormuz
'ನಾವು ತಪ್ಪು ಮಾಡಿದೆವು...': Epstein ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance, Trump ಆಡಳಿತಕ್ಕೆ ತೀವ್ರ ಮುಜುಗರ..!

ಉತ್ತರ ಇರಾನ್‌ಗೂ ವಿಸ್ತರಿಸಿದ ಅಮೆರಿಕ ದಾಳಿ

ಅಮೆರಿಕದ ದಾಳಿಗಳು ಮೊದಲ ಬಾರಿಗೆ ಇರಾನ್ ರಾಜಧಾನಿ ಟೆಹ್ರಾನ್ ಸುತ್ತಮುತ್ತಲಿನ ಪ್ರದೇಶಗಳಿಗೂ ವಿಸ್ತರಿಸಿವೆ. ಸರ್ಕಾರಿ ಮಾಧ್ಯಮಗಳ ಪ್ರಕಾರ, ಟೆಹ್ರಾನ್ ಸಮೀಪದ ಪ್ರದೇಶಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ಉತ್ಪಾದನಾ ಕೇಂದ್ರ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಹೆಸರಾದ ಸೆಮ್ನಾನ್ ಪ್ರಾಂತ್ಯವನ್ನು ಅಮೆರಿಕ ಗುರಿಯಾಗಿಸಿದೆ.

ಇದಲ್ಲದೆ, ಬುಧವಾರ ಹೋರ್ಮುಜ್ ಜಲಸಂಧಿಯಲ್ಲಿರುವ ಅತ್ಯಂತ ಕಾರ್ಯತಂತ್ರದ ಮಹತ್ವದ ಗ್ರೇಟರ್ ಟುನ್ಬ್ ದ್ವೀಪದಲ್ಲಿನ ಇರಾನ್‌ನ ರಕ್ಷಣಾ ಹಾಗೂ ಕ್ಷಿಪಣಿ ನೆಲೆಗಳ ಮೇಲೂ ಅಮೆರಿಕ ದಾಳಿ ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ನೌಕಾ ನಿರ್ಬಂಧ ಉಲ್ಲಂಘಿಸಲು ಯತ್ನಿಸಿದ ಹಡಗಿನ ಮೇಲೆ ದಾಳಿ

ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದತ್ತ ಸಾಗುತ್ತಿದ್ದ 'ಬೆಲ್ಮಾ' ಎಂಬ ಕುರಕಾವೊ ಧ್ವಜ ಹೊಂದಿದ್ದ ತೈಲ ಸಾಗಣೆ ಹಡಗು ಅಮೆರಿಕದ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಲಾಗಿದೆ.

ಅಮೆರಿಕದ ಪ್ರಕಾರ, ಹಲವು ಬಾರಿ ಎಚ್ಚರಿಕೆ ನೀಡಿದರೂ ಹಡಗು ತನ್ನ ಮಾರ್ಗ ಬದಲಿಸದ ಹಿನ್ನೆಲೆಯಲ್ಲಿ, ಯುದ್ಧ ವಿಮಾನದಿಂದ ಹಡಗಿನ ಹೊಗೆ ಕೊಳವೆಗೆ ಕ್ಷಿಪಣಿ ಹೊಡೆದು ಅದನ್ನು ಚಲಿಸಲಾಗದಂತೆ ಮಾಡಲಾಗಿದೆ.

ಸೈನಿಕ ನೆಲೆಗಳ ಮೇಲೂ ಕ್ಷಿಪಣಿ ದಾಳಿ

ಸಿಸ್ತಾನ್-ಬಲುಚಿಸ್ತಾನ್ ಪ್ರಾಂತ್ಯದಲ್ಲಿರುವ ಇರಾನ್‌ನ 388ನೇ ಮೆಕನೈಸ್ಡ್ ಇನ್ಫ್ಯಾಂಟ್ರಿ ಬ್ರಿಗೇಡ್ ನೆಲೆ ಮೇಲೂ ಅಮೆರಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 13 ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ಏಳು ಸೈನಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಬಹ್ರೇನ್ ಮತ್ತು ಕುವೈತ್ ಮೇಲೆ ಇರಾನ್ ಪ್ರತಿದಾಳಿ

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಮುಂಜಾನೆ ಬಹ್ರೇನ್ ಮತ್ತು ಕುವೈತ್ ದಿಕ್ಕಿನತ್ತ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆ. ಈ ದಾಳಿಗಳ ಗುರಿ ಅಮೆರಿಕದ ಸೇನಾ ನೆಲೆಗಳು ಹಾಗೂ ಹಿತಾಸಕ್ತಿಗಳಾಗಿದ್ದವು ಎಂದು ವರದಿಗಳು ತಿಳಿಸಿವೆ.

Hormuz
'ಅವರಿಗೆ ಕಥೆ ಗೊತ್ತಿದೆ, ಎಚ್ಚರಿಕೆಯಿಂದ ವರ್ತಿಸಲಿ': Iranಗೆ Trump ಕಠಿಣ ಎಚ್ಚರಿಕೆ, ಗಡುವು ನೀಡದೆ ಸೇನಾ ಕಾರ್ಯಾಚರಣೆಗೆ ಅಮೆರಿಕಾ ಮುಂದು..!

ಹಾರ್ಮುಜ್ ಜಲಸಂಧಿಯೇ ಸಂಘರ್ಷದ ಕೇಂದ್ರ

ಈ ಸಂಘರ್ಷದ ಕೇಂದ್ರಬಿಂದುವಾಗಿ ಹಾರ್ಮುಜ್ ಜಲಸಂಧಿ ಪರಿಣಮಿಸಿದೆ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ, ಟೆಹ್ರಾನ್ ಈ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ಬಹುತೇಕ ಸ್ಥಗಿತಗೊಳಿಸಿತ್ತು.

ನಂತರ ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದದ ವೇಳೆ ಒಮಾನ್ ಕರಾವಳಿ ಮಾರ್ಗದ ಮೂಲಕ ಕೆಲವು ಹಡಗುಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಮಾರ್ಗದಲ್ಲಿಯೂ ಇರಾನ್ ದಾಳಿ ನಡೆಸಿದ್ದರಿಂದ, ಅಮೆರಿಕ ಮತ್ತೊಮ್ಮೆ ನೌಕಾ ನಿರ್ಬಂಧವನ್ನು ಜಾರಿಗೊಳಿಸಿದೆ.

ತೈಲ ಬೆಲೆ ಏರಿಕೆ, ಜಾಗತಿಕ ಆತಂಕ

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 85 ಡಾಲರ್‌ಗಿಂತ ಹೆಚ್ಚಾಗಿದೆ, ಇದು ಯುದ್ಧ ಆರಂಭಕ್ಕೂ ಮುನ್ನದ ಬೆಲೆಗಿಂತ ಶೇ.15ರಷ್ಟು ಹೆಚ್ಚಾಗಿದೆ.

ಇದರಿಂದ ತೈಲ, ರಸಗೊಬ್ಬರ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಜಾಗತಿಕ ಆರ್ಥಿಕತೆಯ ಮೇಲೂ ಒತ್ತಡ ಹೆಚ್ಚುವ ಆತಂಕ ವ್ಯಕ್ತವಾಗಿದೆ.

ಇದೇ ವೇಳೆ, ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್, ಅಮೆರಿಕ ಮಧ್ಯಂತರ ಒಪ್ಪಂದದ ಷರತ್ತುಗಳನ್ನು ಪಾಲಿಸದಿದ್ದರೆ ಇರಾನ್ ಇನ್ನಷ್ಟು ವ್ಯಾಪಕ ಸೇನಾ ಸಂಘರ್ಷಕ್ಕೆ ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕೂಡ, "ಪ್ರದೇಶದಿಂದ ತೈಲ ಮತ್ತು ಅನಿಲ ರಫ್ತು ಎಲ್ಲರಿಗೂ ಇರಬೇಕು, ಇಲ್ಲವಾದರೆ ಯಾರಿಗೂ ಇರುವುದಿಲ್ಲ," ಎಂದು ಎಚ್ಚರಿಕೆ ನೀಡಿದ್ದು, ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳುವ ಸೂಚನೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com