ಜಪಾನ್‌ನಲ್ಲಿ ಮಸೀದಿ ಉದ್ಘಾಟಿಸಿದ ಪಾಕಿಸ್ತಾನ: 'ಇದು ಕಾನೂನುಬಾಹಿರ' ಎಂದ ಸರ್ಕಾರ; ಬುಲ್ಡೋಜರ್ ಭೀತಿ!

ಜಪಾನ್‌ನ ಸೈತಾಮಾ ಪ್ರಾಂತ್ಯದ ಕವಾಗೋಎ ನಗರದಲ್ಲಿನ 4,500 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಬೃಹತ್ ಮಸೀದಿಯೊಂದು ನಿರ್ಮಾಣಗೊಂಡಿದ್ದು, ಅಚ್ಚರಿ ಎಂದರೆ ಈ ಮಸೀದಿ ನಿರ್ಮಾಣದ ಬಗ್ಗೆ ಸ್ಥಳೀಯ ಆಡಳಿತಕ್ಕಾಗಲೀ..
Pakistan Inaugurates Mosque In Japan. Tokyo Says It's Illegal
ಜಪಾನ್ ನಲ್ಲಿ ಅಕ್ರಮ ಮಸೀದಿ ನಿರ್ಮಾಣ
Updated on

ಟೋಕಿಯೋ: ಜಪಾನ್ ನಲ್ಲಿ ಹೊಸದಾಗಿ ನಿರ್ಮಾಣವಾದ ಮಸೀದಿಯೊಂದು ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸರ್ಕಾರದ ಅನುಮತಿ ಪಡೆಯದೇ ನಿರ್ಮಾಣ ಮಾಡಲಾದ ಈ ಮಸೀದಿಗೆ ಇದೀಗ ಬುಲ್ಡೋಜರ್ ಆತಂಕ ಎದುರಾಗಿದೆ.

ಹೌದು.. ಜಪಾನ್‌ನ ಸೈತಾಮಾ ಪ್ರಾಂತ್ಯದ ಕವಾಗೋಎ ನಗರದಲ್ಲಿನ 4,500 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಬೃಹತ್ ಮಸೀದಿಯೊಂದು ನಿರ್ಮಾಣಗೊಂಡಿದ್ದು, ಅಚ್ಚರಿ ಎಂದರೆ ಈ ಮಸೀದಿ ನಿರ್ಮಾಣದ ಬಗ್ಗೆ ಸ್ಥಳೀಯ ಆಡಳಿತಕ್ಕಾಗಲೀ ಅಥವಾ ಜಪಾನ್ ಸರ್ಕಾರಕ್ಕಾಗಲೀ ಮಾಹಿತಿಯೇ ಇಲ್ಲವಂತೆ.

ಇನ್ನೂ ಅಚ್ಚರಿ ಎಂದರೆ ಈ ಮಸೀದಿ ಉದ್ಘಾಟನೆಗೆ ಸ್ವತಃ ಜಪಾನ್ ನಲ್ಲಿರುವ ಪಾಕಿಸ್ತಾನದ ರಾಯಭಾರ ಅಧಿಕಾರಿ ಆಗಮಿಸಿದ ಬಳಿಕವಷ್ಟೇ ಸ್ಥಳೀಯ ಜಪಾನ್ ಸರ್ಕಾರಕ್ಕೆ ಈ ಮಸೀದಿ ನಿರ್ಮಾಣದ ಮಾಹಿತಿ ತಿಳಿದಿದೆ.

ಇದೀಗ ಇದು ವಿವಾದಕ್ಕೆ ಕಾರಣವಾಗಿದ್ದು, ವಿವಾದ ಸ್ಫೋಟ ಬೆನ್ನಲ್ಲೇ ಮಸೀದಿ ನಿರ್ಮಾಣ ಯೋಜನೆಯಿಂದ ಪಾಕಿಸ್ತಾನದ ರಾಯಭಾರ ಕಚೇರಿ ದೂರ ಉಳಿದಿದೆ. ಸ್ಥಳೀಯ ಕಾನೂನುಗಳ ಪ್ರಕಾರ ಅಗತ್ಯ ಅನುಮತಿಗಳನ್ನು ಪಡೆಯದೇ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೂಮಿಯನ್ನು “ಪರ್ವತ ಅರಣ್ಯ ಪ್ರದೇಶ” (Mountain Forest Land) ಎಂದು ವರ್ಗೀಕರಿಸಲಾಗಿದೆ. ಇದು ನಗರೀಕರಣ ನಿಯಂತ್ರಣ ವಲಯ (Urbanisation Control Area) ಒಳಗೊಂಡಿರುವುದರಿಂದ, ಸ್ಥಳೀಯ ಆಡಳಿತದಿಂದ ವಿಶೇಷ ಅನುಮತಿ ಪಡೆಯದೆ ಯಾವುದೇ ಕಟ್ಟಡ ನಿರ್ಮಾಣ ಸಾಮಾನ್ಯವಾಗಿ ನಿಷೇಧಿತವಾಗಿದೆ.

Pakistan Inaugurates Mosque In Japan. Tokyo Says It's Illegal
ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧ ಆರಂಭ: ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ದಾಳಿ; ಕೆಶ್ಮ್ ದ್ವೀಪದ ಮೇಲೆ ಅಮೆರಿಕ ಸೇನೆ ಪ್ರತಿದಾಳಿ!

ಮಸೀದಿ ನಿರ್ಮಾಣ ಸಂಸ್ಥೆ ಹೇಳಿದ್ದೇನು?

ದಿ ಆಸಾಹಿ ಶಿಂಬುನ್ ವರದಿಯ ಪ್ರಕಾರ, ಆ ಜಮೀನಿನ ಮಾಲೀಕತ್ವವು 2025ರ ಮಾರ್ಚ್‌ನಲ್ಲಿ ಫುಜಿಮಿ ಮೂಲದ ರಿಯಲ್ ಎಸ್ಟೇಟ್ ಕಂಪನಿಯಿಂದ ಕವಾಗೋಎ ವಿಳಾಸದಲ್ಲಿ ನೋಂದಾಯಿತವಾಗಿರುವ ಮತ್ತೊಂದು ಸಂಸ್ಥೆಗೆ ವರ್ಗಾಯಿಸಲಾಗಿದೆ. ಆದರೆ ಕವಾಗೋಎ ನಗರ ಆಡಳಿತದ ಅಧಿಕಾರಿಗಳ ಪ್ರಕಾರ, ಈ ಮಸೀದಿಯನ್ನು ಅಗತ್ಯ ಅನುಮತಿಗಳಿಲ್ಲದೆ ನಿರ್ಮಿಸಲಾಗಿದೆ.

“ನಗರ ಯೋಜನಾ ಕಾಯ್ದೆಯಡಿ (City Planning Act) ಅಗತ್ಯ ಅನುಮತಿಗಳನ್ನು ಪಡೆಯದ ಹೊರತು ನಿರ್ಮಾಣಕ್ಕೆ ಅವಕಾಶವಿಲ್ಲದ ನಗರಾಭಿವೃದ್ಧಿ ನಿಯಂತ್ರಣ ಪ್ರದೇಶದಲ್ಲಿ ಈ ಮಸೀದಿ ಕಟ್ಟಡವನ್ನು ನಿರ್ಮಿಸಲಾಗಿದೆ. ಸಂಬಂಧಿತ ಕಟ್ಟಡವನ್ನು ನಗರಾಡಳಿತದ ಅನುಮತಿ ಇಲ್ಲದೆ ನಿರ್ಮಿಸಲಾಗಿದೆ,” ಎಂದು ನಗರಾಡಳಿತ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕ್ ರಾಯಭಾರಿ ಆಗಮಿಸಿದ್ದೇ ಮಸೀದಿಗೆ ಕುತ್ತು

ಈ ವಿವಾದ ಇನ್ನಷ್ಟು ಚರ್ಚೆಗೆ ಕಾರಣವಾದದ್ದು, ಪಾಕಿಸ್ತಾನದ ರಾಯಭಾರಿ ಅಬ್ದುಲ್ ಹಮೀದ್ ಅವರು ಈ ವರ್ಷದ ಆರಂಭದಲ್ಲಿ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ. ದಿ ಆಸಾಹಿ ಶಿಂಬುನ್ ವರದಿ ಪ್ರಕಾರ, ಯಾಶಿಯೊ ಮಸ್ಜಿದ್ (Yashio Masjid) ಹಲವು ವರ್ಷಗಳಿಂದ ಸ್ಥಳೀಯ ಆಡಳಿತ ಮತ್ತು ನಿವಾಸಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. 2000ರಲ್ಲಿ ಪರಿವರ್ತಿತ ಕಾರ್ಖಾನೆಯೊಂದರಲ್ಲಿ ಕಾರ್ಯಾರಂಭ ಮಾಡಿದ ಈ ಮಸೀದಿ, 2007ರಲ್ಲಿ ಅಧಿಕೃತವಾಗಿ ಧಾರ್ಮಿಕ ಸಂಸ್ಥೆಯಾಗಿ ನೋಂದಾಯಿತವಾಯಿತು.

ಈ ಅವಧಿಯಲ್ಲಿ, ನೆರೆಹೊರೆಯ ಸಂಘಟನೆಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದು, ಈದ್‌ ಹಬ್ಬದಂತಹ ಪ್ರಮುಖ ಕಾರ್ಯಕ್ರಮಗಳ ಮುನ್ನ ಸ್ಥಳೀಯರಿಗೆ ಮಾಹಿತಿ ನೀಡುವುದು ಹಾಗೂ ಸ್ವಚ್ಛತಾ ಅಭಿಯಾನಗಳಲ್ಲಿ ಭಾಗವಹಿಸುವುದರ ಮೂಲಕ ಸಮುದಾಯದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದೆ. ಅದಾಗ್ಯೂ ಯಾಶಿಯೊ ಮಸ್ಜಿದ್‌ನ ಪ್ರತಿನಿಧಿಯಾಗಿರುವ 62 ವರ್ಷದ ಪಾಕಿಸ್ತಾನ ಮೂಲದ ಶಕೀಲ್ ಶೇಖ್ ಮೊಹಮ್ಮದ್ ಅವರು ಕವಾಗೋಎ ಮಸೀದಿ ಯೋಜನೆಯನ್ನು ಟೀಕಿಸಿದ್ದಾರೆ.

“ಅನುಮತಿ ಪಡೆಯದೆ ಮಸೀದಿ ನಿರ್ಮಿಸುತ್ತಿದ್ದರೆ ಅದು ಒಳ್ಳೆಯ ವಿಚಾರವಲ್ಲ. ಸ್ಥಳೀಯ ಜನರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಾಗ ಮಾತ್ರ ಮಸೀದಿಗೆ ಸೂಕ್ತ ವಾತಾವರಣ ನಿರ್ಮಾಣವಾಗುತ್ತದೆ,” ಎಂದು ಅವರು ಹೇಳಿದ್ದಾರೆ.

Pakistan Inaugurates Mosque In Japan. Tokyo Says It's Illegal
ಟ್ರಂಪ್ ಒತ್ತಡಕ್ಕೆ ಮಣಿದ ನೆತನ್ಯಾಹು; ಲೆಬನಾನ್ ಮೇಲಿನ ದಾಳಿಗೆ ಬ್ರೇಕ್; ಸಂಘರ್ಷ ನಿಲ್ಲಿಸಲು ಇಸ್ರೇಲ್-ಹಿಜ್ಬುಲ್ಲಾ ಸಮ್ಮತಿ..!

ಪಾಕ್ ಪ್ರಜೆಗಳಿಗೆ ರಾಯಭಾರ ಕಚೇರಿ ಮನವಿ

ನಿರ್ಮಾಣದ ಕುರಿತು ವರದಿಗಳು ಪ್ರಕಟವಾದ ನಂತರ, ಪಾಕಿಸ್ತಾನದ ರಾಯಭಾರ ಕಚೇರಿ ಸೋಮವಾರ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿ, ಜಪಾನ್‌ನಲ್ಲಿ ವಾಸಿಸುವ ಪಾಕಿಸ್ತಾನಿಯರು ಸ್ಥಳೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.

“ಜಪಾನ್‌ನಲ್ಲಿ ವಾಸಿಸುವ ಪಾಕಿಸ್ತಾನಿ ಸಮುದಾಯದವರು ಎಲ್ಲಾ ವಿಷಯಗಳಲ್ಲೂ, ವಿಶೇಷವಾಗಿ ಆರಾಧನಾ ಸ್ಥಳಗಳ ನಿರ್ಮಾಣದ ವಿಚಾರದಲ್ಲಿ, ಜಪಾನ್‌ನ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ರಾಯಭಾರ ಕಚೇರಿ ವಿನಂತಿಸುತ್ತದೆ. ಸ್ಥಳೀಯ ಆಡಳಿತದಿಂದ ಅಗತ್ಯ ಅನುಮತಿಗಳನ್ನು ಪಡೆಯದೆ ಯಾವುದೇ ನಿರ್ಮಾಣ ಯೋಜನೆಯನ್ನು ಆರಂಭಿಸಬಾರದು,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇ 31ರಂದು ಹೊರಡಿಸಿದ ಮತ್ತೊಂದು ಪ್ರಕಟಣೆಯಲ್ಲಿ, ಮಸೀದಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ಸ್ವೀಕರಿಸುವ ಮೊದಲು ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದಿದ್ದೇವೆ ಎಂದು ಆಯೋಜಕರು ಭರವಸೆ ನೀಡಿದ್ದರಿಂದಲೇ ರಾಯಭಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದೂ ಕಚೇರಿ ಸ್ಪಷ್ಟಪಡಿಸಿದೆ.

“ಸ್ಥಳೀಯ ಆಡಳಿತದ ಕಾನೂನುಗಳಿಗೆ ಅನುಗುಣವಾಗಿರದ ಯಾವುದೇ ಯೋಜನೆಯೊಂದಿಗೆ ಪಾಕಿಸ್ತಾನದ ರಾಯಭಾರ ಕಚೇರಿಗೆ ಯಾವುದೇ ಸಂಬಂಧವಿಲ್ಲ. 2026ರ ಏಪ್ರಿಲ್ 3ರಂದು ಕವಾಗೋಎಯಲ್ಲಿ ನಡೆದ ಕಾರ್ಯಕ್ರಮಕ್ಕೂ ಇದೇ ಅನ್ವಯಿಸುತ್ತದೆ. ಜಪಾನ್ ಕಾನೂನುಗಳಿಗೆ ಅನುಗುಣವಾಗಿ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದಿದ್ದೇವೆ ಎಂಬ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದ ರಾಯಭಾರಿ ಆಹ್ವಾನವನ್ನು ಸ್ವೀಕರಿಸಿದ್ದರು” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಇದಲ್ಲದೆ, ಇಂತಹ ಯೋಜನೆಗಳ ಬಗ್ಗೆ ಸ್ಥಳೀಯ ನಿವಾಸಿಗಳಿಗೆ ಹಾಗೂ ಸಮುದಾಯದ ಸದಸ್ಯರಿಗೆ ಕಾನೂನು ಸಂಬಂಧಿತ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ರಾಯಭಾರ ಕಚೇರಿ ಕರೆ ನೀಡಿದೆ.

“ಇಂತಹ ಎಲ್ಲಾ ಯೋಜನೆಗಳ ಕಾನೂನುಬದ್ಧ ಅಂಶಗಳ ಕುರಿತು ಸಮುದಾಯದ ಸದಸ್ಯರು ಮತ್ತು ಆ ಪ್ರದೇಶದ ನಿವಾಸಿಗಳಿಗೆ ಮಾಹಿತಿ ನೀಡಬೇಕು. ಈ ರೀತಿಯ ಯೋಜನೆಗಳಿಗೆ ಸಂಬಂಧಿಸಿದಂತೆ ಜಪಾನ್ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ಹಾಗೂ ಎಲ್ಲ ಸಂದರ್ಭಗಳಲ್ಲೂ ಜಪಾನ್ ಕಾನೂನುಗಳನ್ನು ಪಾಲಿಸುವಂತೆ ರಾಯಭಾರ ಕಚೇರಿ ತುರ್ತುವಾಗಿ ಮನವಿ ಮಾಡುತ್ತದೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Pakistan Inaugurates Mosque In Japan. Tokyo Says It's Illegal
ಲೆಬನಾನ್ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ಸ್ಫೋಟ; 'ನಾನಿಲ್ಲದಿದ್ದರೆ ಜೈಲಿನಲ್ಲಿರುತ್ತಿದ್ದೆ'- ನೆತನ್ಯಾಹು ವಿರುದ್ಧ ಗುಡುಗಿದ ಟ್ರಂಪ್

ಬುಲ್ಡೋಜರ್ ಭೀತಿ!

ಇದೀಗ ಕಾನೂನು ಬಾಹಿರವಾಗಿ ನಿರ್ಮಾಣವಾಗಿರುವ ಈ ಬೃಹತ್ ಮಸೀದಿಯನ್ನು ನೆಲಸಮಗೊಳಿಸಲು ಅಧಿಕಾರಿಗಳು ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಅಧಿಕಾರಿಗಳು ಮತ್ತು ಮಸೀದಿ ನಿರ್ಮಾಣ ಸಂಸ್ಥೆಯೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com