ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಅಸಮಾಧಾನ: ಖಮೇನಿ ಭೇಟಿಗೆ ಟ್ರಂಪ್ ಒಲವು, ಇರಾನ್ ಕಡೆ ಸ್ನೇಹದ ಹಸ್ತ..?

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲೇ ಈ ಹೇಳಿಕೆ ಹೊರಬಿದ್ದಿದ್ದು, ಮಧ್ಯಪ್ರಾಚ್ಯದ ರಾಜಕೀಯ ಬೆಳವಣಿಗೆಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
US President Donald Trump with Israel's Prime Minister Benjamin Netanyahu
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಕಳೆದ ಹಲವು ತಿಂಗಳುಗಳಿಂದ ಇರಾನ್ ವಿರುದ್ಧ ಕಠಿಣ ನಿಲುವು ತಾಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಇರಾನ್‌ನ ಪರಮೋಚ್ಛ ನಾಯಕ ಮೊಜ್ತಾಬಾ ಖಮೇನಿ ಅವರನ್ನು ಭವಿಷ್ಯದಲ್ಲಿ ಭೇಟಿಯಾಗುವ ಆಸೆ ಹೊಂದಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲೇ ಈ ಹೇಳಿಕೆ ಹೊರಬಿದ್ದಿದ್ದು, ಮಧ್ಯಪ್ರಾಚ್ಯದ ರಾಜಕೀಯ ಬೆಳವಣಿಗೆಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ವಿಶೇಷವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆದ ತೀವ್ರ ದೂರವಾಣಿ ಸಂಭಾಷಣೆಯ ಬಳಿಕ ಟ್ರಂಪ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಅವರನ್ನು ಭೇಟಿಯಾಗಲು ಇಷ್ಟಪಡುತ್ತೇನೆ'

ನ್ಯೂಯಾರ್ಕ್ ಪೋಸ್ಟ್‌ನ "ಪಾಡ್ ಫೋರ್ಸ್ ಒನ್" ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮಾತುಕತೆಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಮೊಜ್ತಬಾ ಖಮೇನಿಯವರಿಗೇ ಇದೆ ಎಂದು ಹೇಳಿದ್ದಾರೆ.

"ನಾನು ಅವರನ್ನು ಭೇಟಿಯಾಗಲು ಇಷ್ಟಪಡುತ್ತೇನೆ. ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ಆದರೆ, ಯಾವುದೋ ಹಂತದಲ್ಲಿ ನಾವು ಭೇಟಿಯಾಗುವ ಸಾಧ್ಯತೆ ಇದೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್‌ನ ದೀರ್ಘಕಾಲದ ಸುಪ್ರೀಂ ನಾಯಕ ಅಲಿ ಖಮೇನಿ ಅವರ ನಿಧನದ ಬಳಿಕ, ಅವರ ಪುತ್ರ ಮೊಜ್ತಬಾ ಖಮೇನಿ ದೇಶದ ಪರಮೋಚ್ಛ ನಾಯಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

US President Donald Trump with Israel's Prime Minister Benjamin Netanyahu
ಹಿಜ್ಬುಲ್ಲಾಗೆ ಕಟ್ಟುನಿಟ್ಟಿನ ಕಡಿವಾಣ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇಸ್ರೇಲ್-ಲೆಬನಾನ್ ಮಹತ್ವದ ಒಪ್ಪಂದ, ಅಮೆರಿಕಾ ಮಧ್ಯಸ್ಥಿಕೆ..!

ಮೊಜ್ತಬಾ ಆರೋಗ್ಯದ ಬಗ್ಗೆ ಟ್ರಂಪ್ ಅನುಮಾನ

ಈ ನಡುವೆ ಟ್ರಂಪ್, ಇತ್ತೀಚಿನ ಅಮೆರಿಕ-ಇಸ್ರೇಲ್ ಸೇನಾ ಕಾರ್ಯಾಚರಣೆಗಳ ವೇಳೆ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿರಬಹುದೆಂಬ ವರದಿಗಳನ್ನು ಉಲ್ಲೇಖಿಸಿದರು. ಹೊಸ ನಾಯಕನ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ ಎಂಬ ಸುದ್ದಿಗಳು ಕೇಳಿಬರುತ್ತಿವೆ ಎಂದು ಹೇಳಿದರು. ಆದರೆ ಈ ಕುರಿತು ಇರಾನ್ ಸರ್ಕಾರದಿಂದ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ.

ನೆತನ್ಯಾಹು ಜೊತೆಗಿನ ಮಾತಿನ ಚಕಮಕಿ

ಇದೇ ವೇಳೆ ಟ್ರಂಪ್ ಮತ್ತು ನೆತನ್ಯಾಹು ನಡುವಿನ ದೂರವಾಣಿ ಸಂಭಾಷಣೆ ಕೂಡ ಭಾರೀ ಸುದ್ದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಲೆಬನಾನ್‌ನಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ಬಗ್ಗೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಮಾತುಕತೆಯ ವೇಳೆ ನೆತನ್ಯಾಹು ವಿರುದ್ಧ ಕಟುವಾಗಿ ಮಾತನಾಡಿದ್ದರು ಎಂದು ತಿಳಿದುಬಂದಿದೆ

ಕಾರ್ಯಕ್ರಮದ ನಿರೂಪಕರು, "ನೀವು ನೆತನ್ಯಾಹುಗೆ 'ನೀನು ಹುಚ್ಚನಾ? ಏನು ಮಾಡುತ್ತಿದ್ದೀಯ?' ಎಂದು ಕೇಳಿದ್ದೀರಾ?" ಎಂದು ಪ್ರಶ್ನಿಸಿದಾಗ, ಟ್ರಂಪ್ ಅದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.

"ಲೆಬನಾನ್ ವಿರುದ್ಧ ನಿರಂತರ ಯುದ್ಧ ನಡೆಸುತ್ತಿರುವ ಬಗ್ಗೆ ನನಗೆ ಬೇಸರವಾಗಿತ್ತು. ನಾನು 'ಬಿಬಿ, ಇದನ್ನು ನಿಲ್ಲಿಸಬೇಕು' ಎಂದು ಹೇಳಿದ್ದೆ" ಎಂದು ಟ್ರಂಪ್ ತಿಳಿಸಿದ್ದಾರೆ.

ಅಮೆರಿಕ-ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ?

ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿ ತನ್ನ ಸೇನಾ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಮತ್ತು ಟೆಲ್ ಅವೀವ್ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.

ಹಿಜ್ಬುಲ್ಲಾ ವಿರುದ್ಧದ ಹೋರಾಟವನ್ನು ಮುಂದುವರಿಸಬೇಕೆಂಬ ಇಸ್ರೇಲ್‌ನ ನಿಲುವು ಮತ್ತು ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆಗೊಳಿಸಲು ಅಮೆರಿಕ ನಡೆಸುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ನಡುವೆ ಅಡ್ಡಿಯಾಗುತ್ತಿದೆ ಎನ್ನಲಾಗುತ್ತಿದೆ.

ಈ ನಡುವೆ ಇರಾನ್‌ನ ಹೊಸ ನಾಯಕನನ್ನು ಭೇಟಿಯಾಗುವ ಟ್ರಂಪ್ ಅವರ ಇಚ್ಛೆ, ಭವಿಷ್ಯದಲ್ಲಿ ಅಮೆರಿಕ-ಇರಾನ್ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭವಾಗಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ, ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಇನ್ನೂ ಮುಂದುವರಿದಿರುವುದರಿಂದ ಈ ಸಾಧ್ಯತೆ ಎಷ್ಟರ ಮಟ್ಟಿಗೆ ಸಾಕಾರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com