ಅಮೆರಿಕಾ ಜೊತೆ ಯಾಕೆ ಸಂಘರ್ಷ?’: ಟ್ರಂಪ್ ಒತ್ತಡಕ್ಕೆ ಮಣಿದ ಇಸ್ರೇಲ್, ಇರಾನ್ ಮೇಲಿನ ಭಾರೀ ದಾಳಿ ಕೈಬಿಟ್ಟ ನೆತನ್ಯಾಹು

ಟ್ರಂಪ್‌ ಅವರೊಂದಿಗೆ ನಾವು ಒಂದೇ ನಿಲುವಿನಲ್ಲಿದ್ದೇವೆ. ಇರಾನ್‌ನ ಸ್ಥಗಿತಗೊಳಿಸಲಾದ ಹಣವನ್ನು ಅವರು ಬಿಡುಗಡೆ ಮಾಡುತ್ತಿಲ್ಲ. ಅಣು ಸಾಮಗ್ರಿಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ಅವರೊಂದಿಗೆ ಯಾಕೆ ಸಂಘರ್ಷ ಮಾಡಬೇಕು?
US President Donald Trump with Israel's Prime Minister Benjamin Netanyahu
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ಜೆರುಸಲೇಂ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಯ ದೂರವಾಣಿ ಕರೆಯ ಬಳಿಕ ಇರಾನ್ ವಿರುದ್ಧ ಯೋಜಿಸಲಾಗಿದ್ದ ಭಾರೀ ವೈಮಾನಿಕ ದಾಳಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕೊನೆಯ ಕ್ಷಣದಲ್ಲಿ ಸ್ಥಗಿತಗೊಳಿಸಿದ್ದಾಗಿ ವರದಿಯಾಗಿದೆ.

ಯುದ್ಧವಿಮಾನಗಳು ರನ್‌ವೇಯಲ್ಲಿ ಸಜ್ಜಾಗಿದ್ದ ವೇಳೆಯೇ ದಾಳಿ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ನಿರ್ಧಾರಕ್ಕೆ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದಾಗ, “ಟ್ರಂಪ್‌ ಅವರೊಂದಿಗೆ ನಾವು ಒಂದೇ ನಿಲುವಿನಲ್ಲಿದ್ದೇವೆ. ಇರಾನ್‌ನ ಸ್ಥಗಿತಗೊಳಿಸಲಾದ ಹಣವನ್ನು ಅವರು ಬಿಡುಗಡೆ ಮಾಡುತ್ತಿಲ್ಲ. ಅಣು ಸಾಮಗ್ರಿಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ಅವರೊಂದಿಗೆ ಯಾಕೆ ಸಂಘರ್ಷ ಮಾಡಬೇಕು?” ಎಂದು ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆಂದು ತಿಳಿದುಬಂದಿದೆ.

ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸೇನೆಗೆ ಇರಾನ್‌ನ ಮಿಲಿಟರಿ ಹಾಗೂ ಆರ್ಥಿಕ ಗುರಿಗಳ ಮೇಲೆ ದಾಳಿ ನಡೆಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಸದ್ಯಕ್ಕೆ ಗುಂಡಿನ ಚಕಮಕಿ ನಿಂತಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

“ಟೆಹ್ರಾನ್‌ನ ಭಯೋತ್ಪಾದಕ ಆಡಳಿತಕ್ಕೆ ತಕ್ಕ ಪಾಠ ಕಲಿಸಿದ ಬಳಿಕ ದಾಳಿ ನಿಲ್ಲಿಸಲಾಗಿದೆ. ಆದರೆ ಮತ್ತೆ ಇಸ್ರೇಲ್ ಮೇಲೆ ದಾಳಿ ನಡೆಸಿದರೆ ನಮ್ಮ ಪ್ರತಿಕ್ರಿಯೆ ಮತ್ತಷ್ಟು ಕಠಿಣವಾಗಿರಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ದಾಳಿ ಸ್ಥಗಿತಗೊಳಿಸಿದ ನೆತನ್ಯಾಹು ನಿರ್ಧಾರ ಸರ್ಕಾರದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

US President Donald Trump with Israel's Prime Minister Benjamin Netanyahu
ಟ್ರಂಪ್ ಸೂಚನೆಗೆ ಕ್ಯಾರೆ ಎನ್ನದ ಇಸ್ರೇಲ್: ಇರಾನ್ ಮೇಲೆ ವೈಮಾನಿಕ ದಾಳಿ; ಟೆಹ್ರಾನ್ ವಾಯುಪ್ರದೇಶ ಬಂದ್!

ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್, “ಟ್ರಂಪ್ ಒತ್ತಡಕ್ಕೆ ಮಣಿಯಬಾರದು. ನಮ್ಮ ದಾರಿಯನ್ನು ಸ್ಪಷ್ಟಪಡಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನೆತನ್ಯಾಹು, ಬೆನ್-ಗ್ವಿರ್ ಅವರ ನಿಲುವು ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡದ್ದು ಎಂದು ಹೇಳಿದರೆಂದು ವರದಿಯಾಗಿದೆ. ಆದರೆ, ಈ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.

ಇದೇ ವೇಳೆ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್, ಬೈರೂತ್‌ನಲ್ಲಿರುವ ಹಿಜ್ಬುಲ್ಲಾ ಗುರಿಗಳ ಮೇಲೆ ಸೇನಾ ಕಾರ್ಯಾಚರಣೆ ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಏತನ್ಮಧ್ಯೆ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಟ್ರಂಪ್ ಮತ್ತು ನೆತನ್ಯಾಹು ನಡುವೆ ನಿರಂತರ ಸಂಪರ್ಕ ನಡೆದಿದೆ ಎನ್ನಲಾಗಿದೆ.

ಟ್ರಂಪ್ ಮೊದಲಿಗೆ ಪ್ರತಿದಾಳಿ ನಡೆಸದಂತೆ ಮನವಿ ಮಾಡಿದ್ದರು. ಆದಾಗ್ಯೂ ಬಳಿಕ ಇಸ್ರೇಲ್ ಸೇನೆ ಇರಾನ್‌ನ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, ಟೆಹ್ರಾನ್, ಇಸ್ಫಹಾನ್, ಕರಾಜ್ ಮತ್ತು ತಬ್ರಿಜ್ ನಗರಗಳಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿತ್ತು.

ಈ ಬೆಳವಣಿಗೆಯ ನಂತರ ಮತ್ತೊಮ್ಮೆ ನೆತನ್ಯಾಹುಗೆ ಕರೆ ಮಾಡಿದ ಟ್ರಂಪ್, ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳನ್ನು ಕಡೆಗಣಿಸಿ ಮುಂದುವರಿದರೆ ಇಸ್ರೇಲ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದರೆಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com