

ಹೈದರಾಬಾದ್: ಉನ್ನತ ಶಿಕ್ಷಣಕ್ಕಾಗಿ ಯುನೈಟೆಡ್ ಕಿಂಗ್‌ಡಮ್ (ಯುಕೆ)ಗೆ ತೆರಳಿದ್ದ ತೆಲಂಗಾಣದ 25 ವರ್ಷದ ವಿದ್ಯಾರ್ಥಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳ ಬಳಿಕ ವಿದ್ಯಾರ್ಥಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
ಮೃತ ವಿದ್ಯಾರ್ಥಿಯನ್ನು ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯ ತಲಮದ್ಲಾ ಗ್ರಾಮದ ನಿವಾಸಿ ಎಸ್. ಶ್ರೀನಾಥ್ ರೆಡ್ಡಿ ಎಂದು ಗುರುತಿಸಲಾಗಿದೆ. ಸುಮಾರು 14 ತಿಂಗಳ ಹಿಂದೆ ಅವರು ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ್ದರು.
ಇಂಗ್ಲೆಂಡ್‌ನ ಲೆಸ್ಟರ್‌ನಲ್ಲಿರುವ ಡಿ ಮಾಂಟ್‌ಫೋರ್ಟ್ ವಿಶ್ವವಿದ್ಯಾಲಯದಲ್ಲಿ (De Montfort University) ಸ್ನಾತಕೋತ್ತರ ಪದವಿ (ಮಾಸ್ಟರ್ಸ್) ವ್ಯಾಸಂಗ ಮಾಡುತ್ತಿದ್ದರು.
ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ, ಜೂನ್ 22ರ ರಾತ್ರಿ ಶ್ರೀನಾಥ್ ತಮ್ಮ ಕುಟುಂಬದವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಆ ವೇಳೆ ಅವರ ಮಾತಿನಲ್ಲಿ ಯಾವುದೇ ಆತಂಕ ಕಂಡುಬಂದಿರಲಿಲ್ಲ. ಬಳಿಕ ಅದೇ ರಾತ್ರಿ ಅವರು ಸ್ನೇಹಿತರೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಮರುದಿನ ಜೂನ್ 23ರ ಬೆಳಿಗ್ಗೆ ರೂಮ್‌ಮೇಟ್ ಕೊಠಡಿಯಲ್ಲಿ ಶ್ರೀನಾಥ್ ಮೃತ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಬಳಿಕ ಈ ವಿಷಯವನ್ನು ಸ್ನೇಹಿತರಿಗೆ ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.
ಶ್ರೀನಾಥ್ ಅವರ ತಂದೆ ಮಧುಸೂದನ್ ರೆಡ್ಡಿ ಮಾತನಾಡಿ, ತಮ್ಮ ಮಗನ ಸಾವಿನ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಬ್ರಿಟನ್ ಅಧಿಕಾರಿಗಳಿಂದ ಸ್ಪಷ್ಟನೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಮಗನ ಪಾರ್ಥಿವ ಶರೀರವನ್ನು ಶೀಘ್ರವಾಗಿ ಭಾರತಕ್ಕೆ ತರಲು ಕೇಂದ್ರ ಸರ್ಕಾರ ಹಾಗೂ ತೆಲಂಗಾಣ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ನಡುವೆ, ಶ್ರೀನಾಥ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಬೇಕಾಗುವ ವೆಚ್ಚ ಭರಿಸಲು ಅವರ ಸಂಬಂಧಿಕರಾದ ಸನೋಜ್ ಮತ್ತು ಮನೀಶ್ ಅವರು ಆನ್‌ಲೈನ್‌ನಲ್ಲಿ ನಿಧಿ ಸಂಗ್ರಹ ಅಭಿಯಾನ (GoFundMe) ಆರಂಭಿಸಿರುವುದಾಗಿ ತಿಳಿದುಬಂದಿದೆ.
ಘಟನೆ ಕುರಿತು ಬ್ರಿಟನ್ ಅಧಿಕಾರಿಗಳು ಇದೂರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದ್ದು, ವರದಿ ಬಂದ ಬಳಿಕವೇ ಸತ್ಯಾಂಶ ತಿಳಿದುಬರಲಿದೆ.