ಉದ್ಯಮಿ ಗೌತಮ್ ಅದಾನಿಗೆ ಬಿಗ್ ರಿಲೀಫ್: ಕ್ರಿಮಿನಲ್ ಕೇಸ್ ಕೈಬಿಡಲು ಅಮೆರಿಕಾ ಒಪ್ಪಿಗೆ..!

2024ರ ಕೊನೆಯಲ್ಲಿ ಅಮೆರಿಕದ ಸೆಕ್ಯುರಿಟೀಸ್ ಅ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ದಾಖಲಿಸಿದ್ದ ಮೊಕದ್ದಮೆಯಲ್ಲಿ, ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಗಂಭೀರ ಆರೋಪ ಮಾಡಲಾಗಿತ್ತು.
Gautam Adani
ಗೌತಮ್ ಅದಾನಿ
Updated on

ನ್ಯೂಯಾರ್ಕ್: ಅಮೆರಿಕದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿಗೆ ವಿರುದ್ಧ ಬಿಗ್ ರಿಲೀಫ್ ಸಿಕ್ಕಿದೆ. ಗೌತಮ್ ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕೈಬಿಡಲು ಅಮೆರಿಕಾ ಸರ್ಕಾರ ಸಮ್ಮತಿಸಿದೆ ಎಂದು ತಿಳಿದುಬಂದಿದೆ.

2024ರ ಕೊನೆಯಲ್ಲಿ ಅಮೆರಿಕದ ಸೆಕ್ಯುರಿಟೀಸ್ ಅ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ದಾಖಲಿಸಿದ್ದ ಮೊಕದ್ದಮೆಯಲ್ಲಿ, ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಗಂಭೀರ ಆರೋಪ ಮಾಡಲಾಗಿತ್ತು.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ಗೆ ಸಂಬಂಧಿಸಿದ ಸೌರಶಕ್ತಿ ಯೋಜನೆಗಳಿಗೆ ಭಾರತದಲ್ಲಿ ಸರ್ಕಾರಿ ಒಪ್ಪಂದಗಳನ್ನು ಪಡೆಯಲು ಅಧಿಕಾರಿಗಳಿಗೆ ನೂರಾರು ಮಿಲಿಯನ್ ಡಾಲರ್ ಮೌಲ್ಯದ ಲಂಚ ನೀಡಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಇದೇ ವೇಳೆ ಕಂಪನಿಯು ಅಮೆರಿಕದ ಹೂಡಿಕೆದಾರರಿಂದ ಬಿಲಿಯನ್‌ಗಳಷ್ಟು ಡಾಲರ್ ಹೂಡಿಕೆ ಪಡೆದಿದ್ದು, ಕಂಪನಿಯಲ್ಲಿ ಭ್ರಷ್ಟಾಚಾರ ವಿರೋಧಿ ಕಟ್ಟುನಿಟ್ಟಿನ ವ್ಯವಸ್ಥೆ ಇದೆ ಹಾಗೂ ಯಾವುದೇ ಲಂಚ ವ್ಯವಹಾರ ನಡೆಯುವುದಿಲ್ಲ ಎಂದು ಭರವಸೆ ನೀಡಲಾಗಿತ್ತು ಎಂದು SEC ಆರೋಪಿಸಿತ್ತು.

ಈ ಮೂಲಕ ಅಮೆರಿಕದ ಭದ್ರತಾ ಮತ್ತು ಹೂಡಿಕೆ ಸಂಬಂಧಿತ ವಂಚನೆ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿತ್ತು.

ಇದೀಗ ನ್ಯಾಯಾಲಯದ ದಾಖಲೆಗಳ ಪ್ರಕಾರ, ಗೌತಮ್ ಅದಾನಿ 6 ಮಿಲಿಯನ್ ಡಾಲರ್ ಹಾಗೂ ಸಾಗರ್ ಅದಾನಿ 12 ಮಿಲಿಯನ್ ಡಾಲರ್ ನಾಗರಿಕ ದಂಡ ಪಾವತಿಸಲು ಒಪ್ಪಿಕೊಂಡಿದ್ದಾರೆ ತಿಳಿದುಬಂದಿದೆ. ಆದರೆ, ಈ ಒಪ್ಪಂದದಲ್ಲಿ ತಪ್ಪೊಪ್ಪಿಕೊಂಡಿರುವುದಿಲ್ಲ ಎಂಬ ಅಂಶ ಗಮನಾರ್ಹವಾಗಿದೆ.

Gautam Adani
Richest person in Asia: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!

ಪ್ರಕರಣ ಹೊರಬಿದ್ದಾಗ ಅದಾನಿ ಸಮೂಹ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ, “ಆಧಾರರಹಿತ ಮತ್ತು ದುರುದ್ದೇಶಪೂರಿತ ಆರೋಪಗಳು” ಎಂದು ಪ್ರತಿಕ್ರಿಯಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರಲ್ಲಿ ನ್ಯೂಯಾರ್ಕ್‌ನಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ವಂಚನೆ ಹಾಗೂ ಸಂಚು ಆರೋಪಗಳಡಿ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿತ್ತು. ಇದೀಗ ಆ ಪ್ರಕರಣಗಳನ್ನೂ ಕೈಬಿಡುವ ಸಾಧ್ಯತೆ ಇದೆ ಎಂದು ಅಮೆರಿಕದ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಅವಧಿಗೆ ಆಯ್ಕೆಯಾದ ಬಳಿಕ ಬೆಳವಣಿಗೆಗಳು ಬದಲಾಗತೊಡಗಿದವು ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.

2025ರ ಮಾರ್ಚ್‌ನಲ್ಲಿ ಟ್ರಂಪ್ ವಿದೇಶಿ ಲಂಚ ತಡೆ ಕಾಯ್ದೆ (Foreign Corrupt Practices Act) ಜಾರಿಗೆ ತಾತ್ಕಾಲಿಕ ಸ್ಥಗಿತ ನೀಡಿದ್ದು, ಅದಾನಿ ಪ್ರಕರಣದ ಮೇಲೂ ಅದರ ಪರಿಣಾಮ ಬಿದ್ದಿದೆ ಎನ್ನಲಾಗಿದೆ.

1990ರ ದಶಕದಲ್ಲಿ ಕಲ್ಲಿದ್ದಲು ಉದ್ಯಮದ ಮೂಲಕ ವ್ಯವಹಾರ ಆರಂಭಿಸಿದ್ದ ಗೌತಮ್ ಅದಾನಿ, ಬಳಿಕ ಬಂದರು, ವಿದ್ಯುತ್, ರಕ್ಷಣಾ, ಕೃಷಿ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಿಗೆ ತನ್ನ ವ್ಯಾಪಾರ ವಿಸ್ತರಿಸಿದ್ದರು.

“Growth with Goodness” ಘೋಷಣೆಯೊಂದಿಗೆ ಅದಾನಿ ಗ್ರೂಪ್ ದೇಶದ ಅತಿದೊಡ್ಡ ಹಸಿರು ಇಂಧನ ಕಂಪನಿಗಳಲ್ಲಿ ಒಂದಾಗಿ ಬೆಳೆದಿತ್ತು.

ಆದರೆ, ಅದಾನಿ ಸಮೂಹದ ವೇಗದ ಬೆಳವಣಿಗೆ ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಇರುವ ಆಪ್ತ ಸಂಬಂಧಗಳು ಹಲವು ಬಾರಿ ರಾಜಕೀಯ ಟೀಕೆಗೆ ಗುರಿಯಾಗಿದ್ದವು.

ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯೂ ಅದಾನಿ ಸಮೂಹದ ವಿರುದ್ಧ ಷೇರು ಮೌಲ್ಯ ಕೃತಕ ಏರಿಕೆ ಮತ್ತು ಲೆಕ್ಕಪತ್ರ ವಂಚನೆ ಆರೋಪ ಮಾಡಿತ್ತು. ಆದರೆ, ಅದಾನಿ ಗ್ರೂಪ್ ಆ ಆರೋಪಗಳನ್ನು ಕೂಡ ತಳ್ಳಿಹಾಕಿತ್ತು.

ಅಮೆರಿಕದ ಪ್ರಕರಣ ಬೆಳಕಿಗೆ ಬಂದ ಬಳಿಕ ಕೀನ್ಯಾ ಸರ್ಕಾರ ಅದಾನಿ ಸಮೂಹದೊಂದಿಗೆ ಮಾಡಿಕೊಂಡಿದ್ದ ಬಹುಮಿಲಿಯನ್ ಡಾಲರ್ ಒಪ್ಪಂದಗಳನ್ನು ರದ್ದುಪಡಿಸಿತ್ತು.

ಶ್ರೀಲಂಕಾದಲ್ಲಿಯೂ ವಿದ್ಯುತ್ ಯೋಜನೆಗಳನ್ನು ಅದಾನಿ ಗ್ರೀನ್ ಎನರ್ಜಿ ಹಿಂಪಡೆದುಕೊಂಡಿತ್ತು. ಫ್ರಾನ್ಸ್‌ನ ಪ್ರಮುಖ ತೈಲ ಕಂಪನಿಯೂ ಹೊಸ ಹೂಡಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈಗ ಅಮೆರಿಕದಲ್ಲಿ ಪ್ರಕರಣ ಇತ್ಯರ್ಥದತ್ತ ಸಾಗುತ್ತಿರುವುದು ಅದಾನಿ ಸಮೂಹಕ್ಕೆ ದೊಡ್ಡ ನಿರಾಳತೆ ತಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com