ಇರಾನ್‌ನಲ್ಲಿ ಅಮಾನವೀಯ ಕೃತ್ಯ: ತವರು ಮನೆಗೆ ಕಳಿಸುವಂತೆ ಕೇಳಿದ್ದಕ್ಕೆ ಹೆರಿಗೆಯಾದ 10 ದಿನಕ್ಕೆ 14 ವರ್ಷದ ಬಾಲಕಿಯ ಥಳಿಸಿ ಕೊಂದ ಪತಿ..!

ಟೆಹ್ರಾನ್: ಇರಾನ್‌ನಲ್ಲಿ ಬಾಲ್ಯವಿವಾಹದ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಮಗುವಿಗೆ ಜನ್ಮ ನೀಡಿ ಕೆಲವೇ ದಿನಗಳಾಗಿದ್ದ 14 ವರ್ಷದ ಬಾಲಕಿಯನ್ನು, ತವರು ಮನೆಗೆ ಭೇಟಿ ನೀಡಲು ಅನುಮತಿ ಕೇಳಿದ್ದಕ್ಕೆ ಪತಿಯೇ ಬಡಿದು ಹತ್ಯೆ ಮಾಡಿದ್ದಾನೆ.
ಸೋಗಂಡ್ ಮೊಷ್ಟರೆಕಿ (Sogand Moshtareki) ಮೃತ ಬಾಲಕಿ. ಇರಾನ್‌ನ ಕೆರ್ಮನ್ ಪ್ರಾಂತ್ಯದ ನಿವಾಸಿಯಾಗಿದ್ದ ಈಕೆ, ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಳು. ಬಳಿಕ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಹೆರಿಗೆಯಾದ ಕೆಲವೇ ದಿನಗಳಲ್ಲಿ ಪತಿಯ ಹಲ್ಲೆಯಿಂದ ಪ್ರಾಣ ಕಳೆದುಕೊಂಡಿದ್ದಾಳೆ.
ಇರಾನ್ ಹ್ಯೂಮನ್ ರೈಟ್ಸ್ (IHR) ಸಂಸ್ಥೆಯ ವರದಿಯ ಪ್ರಕಾರ, ಸೋಗಂಡ್‌ನ ಪತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎಂದು ಹೇಳಿದ್ದಾನೆ.
ಪತಿ ಆಕೆಯನ್ನು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಬಿಡುತ್ತಿರಲಿಲ್ಲ. ತಾನು ಮನೆಯಿಂದ ಹೊರಗೆ ಹೋದಾಗ ಆಕೆಯನ್ನು ಮನೆಯೊಳಗೆ ಕೂಡಿ ಹಾಕುತ್ತಿದ್ದ ಎಂದು ಸಂಸ್ಥೆ ತಿಳಿಸಿದೆ.
ಈ ಪ್ರಕರಣವು ಇರಾನ್‌ನಲ್ಲಿ ಬಲವಂತದ ಮದುವೆಗಳಿಂದ ಉಂಟಾಗುತ್ತಿರುವ ಅಪಾಯಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ತಾರತಮ್ಯಪೂರಿತ ಕಾನೂನುಗಳು, ಪುರುಷ ಪ್ರಧಾನ ವ್ಯವಸ್ಥೆ ಹಾಗೂ ಅಪರಾಧಿಗಳಿಗೆ ಸಿಗುತ್ತಿರುವ ಶಿಕ್ಷೆಯಿಲ್ಲದ ಪರಿಸ್ಥಿತಿಯಿಂದ ಇಂತಹ ಘಟನೆಗಳು ಮುಂದುವರಿಯುತ್ತಿವೆ ಎಂದು ಮಾನವ ಹಕ್ಕುಗಳ ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ಇದೇ ದಿನ ಫಾರ್ಸ್ ಪ್ರಾಂತ್ಯದ 21 ವರ್ಷದ ಗರ್ಭಿಣಿ ಸೆಪಿದೇಹ್ ರೈಸಿ ಎಂಬಾಕೆಯೂ ಕೊಲೆಯಾಗಿದ್ದಾಳೆ. ಆಕೆಯನ್ನೂ ಬಲವಂತವಾಗಿ ಮದುವೆ ಮಾಡಲಾಗಿತ್ತು. ಪತಿಯೇ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಇರಾನ್‌ನಲ್ಲಿ ಈ ತಿಂಗಳ ಆರಂಭದಲ್ಲೂ 19 ವರ್ಷದ ಗರ್ಭಿಣಿಯೊಬ್ಬಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಹೆಲಿಯಾ ಫತ್ತಾಹಿ (Helia Fattahi) ಮೃತ ದುರ್ದೈವಿಯಾಗಿದ್ದಳು. ಯುವಕನೊಂದಿಗಿನ ಸಂಬಂಧದಿಂದ ಎರಡು ತಿಂಗಳ ಗರ್ಭಿಣಿಯಾಗಿದ್ದ ಆಕೆ, ಈ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಳು.
ಇದರಿಂದ ಆಕ್ರೋಶಗೊಂಡ ಪೋಷಕರು ಆಕೆಗೆ ಸುಮಾರು 30 ಅಪಸ್ಮಾರ ನಿಯಂತ್ರಣ ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿ, ಹಲ್ಲೆ ನಡೆಸಿ, ಬಳಿಕ ತಲೆಯ ಮೇಲೆ ದಿಂಬು ಒತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಪಶ್ಚಿಮ ಇರಾನ್‌ನ ಸನಂದಜ್ ನಗರದಲ್ಲಿ ಈ ಘಟನೆ ನಡೆದಿತ್ತು. ಕೊಲೆ ಆರೋಪದಡಿ ಪೋಷಕರಾದ ವೋರಿಯಾ ಫತ್ತಾಹಿ ಮತ್ತು ಲೈಲಾ ವೈಸ್ ಅವರನ್ನು ಪೊಲೀಸರು ಬಂಧಿಸಿದ್ದರು.
ಇಬ್ಬರೂ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೆಂಗಾವ್ ಮಾನವ ಹಕ್ಕುಗಳ ಸಂಘಟನೆ ಹಾಗೂ ಹನಾ ಸಂಘಟನೆ ಈ ಹತ್ಯೆಯನ್ನು 'ಮರ್ಯಾದಾ ಹತ್ಯೆ' ಎಂದು ಬಣ್ಣಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



