

ಗಾದೆಗಳಿಲ್ಲದ ಭಾಷೆಯೇ ಇಲ್ಲ. ಗಾದೆಗಳು ಕಿರಿದಾದರೂ ಹಿರಿದಾದ ಅರ್ಥ ತುಂಬಿದ ಜನಾನುಭವಗಳು. ಬಹುಕಾಲದ ಪರಂಪರೆಯ ರಸಪಾಕಗಳು ಅವು. ಹಲವರ ವಿವೇಕ ಒಬ್ಬನ ವಾಕ್ಚಾತುರ್ಯವಾಗಿ ಗಾದೆ ಮೈದಳೆದಿರುತ್ತದೆ. ಪ್ರತಿಭೆ, ಬುದ್ಧಿ, ಚಮತ್ಕಾರ ಹಾಗೂ ಸತ್ವಗಳನ್ನು ಅದು ಗರ್ಭೀಕರಿಸಿಕೊಂಡಿರುತ್ತದೆ. ಜನಸಾಮಾನ್ಯರ ಬಿಡಿಕವಿತೆಗಳಾಗಿ ಗಾದೆಗಳು ಸಂದರ್ಭೋಚಿತವಾಗಿ ಸಾದರಗೊಳ್ಳುತ್ತವೆ. ಯಾರ ಹಂಗಿಗೂ ಒಳಗಾಗದೆ ನಿಖರವೂ, ನಿಷ್ಠುರವೂ ಆದ ವಿಮರ್ಶೆಯೇ ಅದು. ಎಲ್ಲರ ಪಾಲಿಗೂ ಬಾಳಿನ ಸಂಜೆ ಅರ್ಥಾತ್ ವೃದ್ಧಾಪ್ಯ ನೆಮ್ಮದಿ, ಸಂತಸದ ಅಧ್ಯಾಯವಾಗಬೇಕು. ಸದ್ಯ ಕೊನೆಗಾಲಕ್ಕಾದರೂ ನಿರಾಳವಾಗಿ ಉಸಿರಾಡೋಣ ಅನ್ನುವಾಗಲೇ ವೃದ್ಧರು ಭಿನ್ನ ಭಿನ್ನ ಕಾರಣಗಳಿಂದಾಗಿ ಹೈರಾಣಾಗಿಬಿಡುವುದಿದೆ. ಸ್ವತಃ ತಮ್ಮ ಮಕ್ಕಳೇ ಅವರಿಗೆ ಸಲ್ಲದ ಇರುಸುಮುರಸು ಉಂಟುಮಾಡುತ್ತಾರೆ. 'ಬಗ್ಗಿದ ಬೆನ್ನಿಗೆ ಬಂಡೆ ಹೇರಿದರು...' ಎಂಬ ಗಾದೆ ಆ ನೋವಿನ ಚಿತ್ರಣವನ್ನು ನಮಗೆ ಕಟ್ಟಿಕೊಡುತ್ತದೆ. ಅಂದಹಾಗೆ ತನಗೆ ಇನ್ನು ಏನೂ ಬೇಡ, ಹೇಗೂ ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ ಅಂತಲೇ ಸೋಗು ಹಾಕುವ ಪ್ರವೃತ್ತಿಯೂ ಕೆಲವರಲ್ಲಿ ಅಪರೂಪಕ್ಕಾದರೂ ಇದ್ದೀತು. ಒಂದು ಗಾದೆ ಸಾರಾಸಗಟಾಗಿ ಆ ಮನೋಭಾವವನ್ನು ಬಯಲಾಗಿಸುವ ಪರಿ ನಗೆಯುಕ್ಕಿಸುತ್ತದೆ, 'ಸಾಯ್ತೀನಿ ಸಾಯ್ತೀನಿ ಅಂತ ಸಾವಿರ ಕೋಳಿ ತಿಂದನಂತೆ...'.
ಮಕ್ಕಳು ತಮ್ಮ ವೃದ್ಧ ತಂದೆ, ತಾಯಿಗಳನ್ನು ಗೌರವ, ಆದರದಿಂದ ನೋಡಿಕೊಂಡರೆ ವೃದ್ಧಾಶ್ರಮ ಎಂಬ ಪದವೇ ನಿಘಂಟಿನಲ್ಲಿರದು. ಪೋಷಕರು ತಮ್ಮ ಬಾಳಿನ ಕೊನೆಯ ದಿನಗಳನ್ನು ಮಕ್ಕಳು ಮೊಮ್ಮಕ್ಕಳೊಂದಿಗೆ ಕಳೆಯಬಯಸುವುದು ಸಹಜ. ಅದು ನಿಸರ್ಗ ನಿಯಮವೂ ಹೌದು. ಮನೆಯ ವೈಶಾಖ ಮುಖ್ಯವಲ್ಲ. ಮಕ್ಕಳ ಹೃದಯವಂತಿಕೆ ಇಲ್ಲಿ ಪ್ರಧಾನ. 'ಅಕ್ಕರೆ ಇಲ್ಲದ ಉಪ್ಪರಿಗೆಗಿಂತ ಅಕ್ಕರೆ ಇರುವ ತಿಪ್ಪೆ ಲೇಸು' ಎಂಬ ಗಾದೆ ಸೊಗಸಾಗಿ ಈ ಅಂಶವನ್ನು ಎತ್ತಿಹಿಡಿಯುವುದು. ಪ್ರೀತಿಯಿರುವಲ್ಲಿ ಪೂಜ್ಯತೆ, ಪುರಸ್ಕಾರ. ಕಿರಿಯರಿಗೆ ಹಿರಿಯರೇ ಕನ್ನಡಿ. ಅತ್ತೆ ಎಂದೊಡನೆ ಬಹು ಸಿಡುಕಿ, ದುಡುಕಿ ಎಂದೂ, ಸೊಸೆ ಎಂದರೆ ಸಾಧು, ಸಂಯಮಿ ಎಂದೂ ಜನಜನಿತ ಅಂಬೋಣ. ಆದರೆ ಜನಪದರು ಇಂಥ ನಿಲುವನ್ನು ತಿರಸ್ಕರಿಸುತ್ತಾರೆ. ತ್ರಿಪದಿಯೊಂದು ಸ್ವಾರಸ್ಯವಾಗಿದೆ.
'ಅತ್ತೆಗೆ ಸೊಸೆ ಮುಚ್ಚಳದಲ್ಲಿ ಉಣಿಸ್ತೀನಿ ಅಂದ್ಲಂತೆ
ಅತ್ತೆ, ನೀನು ಮುಚ್ಚಳದಲ್ಲಿ ಕೊಟ್ಟರೆ
ನಾನು ನಿನಗೆ ಮೊಗೇಲಿ ಕೊಡ್ತೀನಿ ಅಂದ್ಲಂತೆ'
ನಗುವಿಗೆ, ವ್ಯಂಗ್ಯಕ್ಕೆ ವಯಸ್ಸಿನ ಹಂಗಿಲ್ಲವಲ್ಲ. ಆ ಹಳ್ಳಿಯಲ್ಲಿ ಅಜ್ಜ, ಅಜ್ಜಿ ಕುರಿತ ಪ್ರಸಂಗವಿದು. ಬೇಸಿಗೆ ಬಿರುಸಾಗಿತ್ತು. ಅಜ್ಜಿ ಮಧ್ಯಾಹ್ನ ಬಾಯಾರಿಕೆ ತೀರಿಸಿಕೊಳ್ಳಲು ಗಟಗಟನೆ ಒಂದು ಚೊಂಬು ನೀರುಮಜ್ಜಿಗೆ ಕುಡಿದಳಂತೆ. ಅಜ್ಜ ಜಗಲಿ ಮೇಲೆ ಕೂತು ಇಡೀ ಹಳ್ಳಿಗೆ ಹೇಳುತ್ತಿದ್ದನಂತೆ. ಅದನ್ನೇ ಹಾಡಾಗಿ ಹೀಗೆ;
'ಅಜ್ಜಿ ಮಜ್ಜಿಗೆ ಕುಡಿದ್ಲು
ಅಜ್ಜ ಏನೆಂದ 'ಎಮ್ಮೆ ಕಲಗಚ್ಚು ಕುಡಿದ್ಹಂಗೆ' ಅಂದ!
ಒಳ್ಳೆಯ ಅಳಿಯ, ಸೊಸೆ ಮನೆಗೆ ಬರುವುದು ಎಂದರೆ ಇಂಥ ಆಭಾಸವಾಗಬಾರದು;
'ಮಗಳನ್ನು ಹೆತ್ತು ಅಳಿಯನಿಗೆ ಕೊಟ್ಟೆ
ಮಗನನ್ನು ಹೆತ್ತು ಸೊಸೆಗೆ ಕೊಟ್ಟೆ'
ದೀರ್ಘಕಾಲದಿಂದ ಹಾಸಿಗೆ ಹಿಡಿದ ಎಂಬತ್ತು ದಾಟಿದ ಹಿರಿಯರೊಬ್ಬರನ್ನು ಅವರ ಆಪ್ತರು ಕೇಳುವ ಪ್ರಶ್ನೆಯೆಂದರೆ, 'ಹೇಗನ್ನಿಸುತ್ತಿದೆ ಈ ದಿನಗಳು?'. ಅವರು ನಾಲ್ಕಾರು ರೋಗಗಳನ್ನು ಸಂಭಾಳಿಸುತ್ತಿದ್ದರೂ ಥಟ್ಟನೆ ಪ್ರತಿಕ್ರಿಯಿಸಿದ್ದರು; 'ಓಹೋ ಚೆನ್ನಾಗಿಯೇ ಇವೆ. ರೋಗಗಳೂ ನನ್ನೊಡನೆ ಹಾಯಾಗಿವೆಯಲ್ಲ! ಅವುಗಳೊಂದಿಗೆ ಬದುಕಬೇಕೆನ್ನಿಸಿದೆ...' ನವಿರು ವಿನೋದ ಅನುಭವಗಳೆಂಬ ಮೊಸರಿನಲ್ಲಿ ಕಡೆದ ನವನೀತದ ಹಾಗೆ ಅರಳುತ್ತವೆ. ಈ ನಿಟ್ಟಿನಲ್ಲಿ ಜಾನ್ ಬ್ಯಾರಿಮೋರ್ ಎಂಬ ಚಿಂತಕನ ಉಕ್ತಿ ನಮ್ಮ ಉತ್ಸಾಹವನ್ನು ಹಿಗ್ಗಿಸುತ್ತದೆ. ಎಲ್ಲಿತನಕ ನಮ್ಮ ಪರಿತಾಪಗಳು ಕನಸುಗಳನ್ನು ಪಲ್ಲಟಗೊಳಿಸುವುದಿಲ್ಲವೊ ಅಲ್ಲಿತನಕ ನಮಗೆ ಮುಪ್ಪು ಬಂದಿರದು ಎನ್ನುತ್ತಾನೆ ಆತ. ವೃದ್ಧಾಪ್ಯಕ್ಕೆ ಮೊದಲೇ ಸಾವು ಬರದಿರಲಿ ಎಂಬ ಆಶಯದ ಹಿಂದೆ ಅದೆಂಥ ಬದುಕಿನ ಬಗೆಗಿನ ಪ್ರೀತಿಯಿದೆ. ಅದು ಏಕೋ ಏನೋ? ಐವತ್ತರ ವಯೋವಾನವೇ ವಿಚಿತ್ರ. ಏಕೆಂದರೆ ಅದು ಯುವಕರ ಪಾಲಿಗೆ ವೃದ್ಧಾಪ್ಯವಾಗಿ ಕಂಡರೆ ವೃದ್ಧರ ಪಾಲಿಗೆ ಯವ್ವನವಾಗಿ ತೋರುವುದಂತೆ!
ಖ್ಯಾತ ಸಾಹಿತಿಗಳು ವೃದ್ಧಾಪ್ಯವನ್ನು ಕಂಡ ಬಗೆಗಳು ವೈವಿಧ್ಯಮಯ. 'ಕಾವ್ಯಾನಂದ' ಎಂದೇ ಪ್ರಸಿದ್ಧರಾದ ಡಾ. ಸಿದ್ಧಯ್ಯ ಪುರಾಣಿಕರು 'ಈಗ ಬಿಡಪ್ಪ, ನನ್ನದೇನಿದ್ದರೂ ಬರಿ ಸ್ಪೇರ್ಪಾರ್ಟ್ಸ್' ಎಂದಿದ್ದು ನೆನೆದಾಗಲೆಲ್ಲ ಕಚಗುಳಿಯಿಡುತ್ತದೆ. ಪ್ರೊ. ಎ.ಎನ್. ಮೂರ್ತಿರಾಯರು ನೂರರ ಮೇಲೆ ಮೂರು ವಸಂತಗಳನ್ನು ದಾಟಿದ ಸಂದರ್ಭದಲ್ಲಿ 'ನಾನು ಎಂದೂ ಆ ದೇವರನ್ನು ನಿನ್ನ ಪಾದಾರವಿಂದಗಳಲ್ಲಿ ಸೇರಿಸಿಕೊ ಅಂತ ಅರ್ಜಿ ಹಾಕಿ ಬೇಡುವುದಿಲ್ಲ' ಎಂದಿದ್ದರು. ಈಚೆಗೆ ನಮ್ಮನ್ನಗಲಿದ ಬೆಳಗೆರೆ ಕೃಷ್ಣಶಾಸ್ತ್ರಿ 'ನನಗೆ ತೊಂಬತ್ಮೂರಾಯಿತು ಅಂತ ಯಾರು ಹೇಳಿದರು? ನನಗಿನ್ನೂ ಹಲ್ಲೇ ಬಂದಿಲ್ಲ!' ಅಂತ ಹೇಳಿದ್ದು ನೆನಪಾಗುತ್ತಿದೆ.
ಹಿರಿಯರೆಂದರೆ ಅಭಯ. ಹಿರಿತನದ ಇನ್ನೊಂದು ಹೆಸರೇ ಮಾರ್ಗದರ್ಶನ. ಸಂಜೆ ಹೊತ್ತಿನಲ್ಲಿ ಕಸಗುಡಿಸಬಾರದೆನ್ನುವ ಹಿತಮಾತಿನಲ್ಲಿ, ತೊಲೆ ಕೆಳಗೆ ಮಲಗಬಾರದೆಂಬ ಕಿವಿಮಾತಿನಲ್ಲಿ ವಿಜ್ಞಾನವಿದೆ, ವಿವೇಕವಿದೆ. ಕಸ ಗುಡಿಸಿ ಅದನ್ನು ಹೊರಗೆ ವಿಲೇವಾರಿ ಮಾಡುವಾಗ ಆಕಸ್ಮಿಕವಾಗಿ ಒಡವೆ, ವಜ್ರಗಳಾದಿಯಾಗಿ ಬೆಲೆಬಾಳುವ ವಸ್ತುಗಳು ಕಳೆದುಹೋಗುವುದು ಸಂಭಾವ್ಯ. ತೊಲೆ ಎಲ್ಲಿ ಬಿದ್ದಿತೋ ಎಂಬ ಭಯವೇ ಸುಖನಿದ್ರೆಗೆ ಸಂಚಕಾರವಾದೀತು. ಕೆಟ್ಟ ಸ್ವಪ್ನಗಳು ಬೀಳುವುದುಂಟೆನ್ನಿ. ಎಷ್ಟೇ ವೈರತ್ವವಿರಲಿ ಮದುವೆಗೆ ಹೋಗಬೇಕು, ಮಣ್ಣಿಗೆ ಹೋಗಬೇಕು ಎನ್ನುವಲ್ಲಿ ಆ ಮೂಲಕ ಸಂತಸ, ಸಂಕಟ ಹಂಚಿಕೊಂಡು ಸ್ನೇಹ, ಸೌಹಾರ್ದ ಪುನರ್ನವೀಕರಿಸಿಕೊಳ್ಳುವ ಆಶಯ ಅಡಗಿದೆ. ಊರು, ಕಾಡು- ಇವೆರಡು ಭಿನ್ನವೇನಲ್ಲ. ಕಷ್ಟ-ಕಾರ್ಪಣ್ಯ ಇದ್ದಿದ್ದೇ ಎನ್ನುವುದನ್ನು ಬಿಂಬಿಸುವ ಗಾದೆಯಿದು. 'ಊರಲ್ಲಿ ಸೊಳ್ಳೆಕಾಟ ಅಂತ ಕಾಡಿಗೆ ಹೋದ್ರೆ ಹುಲಿ ಬಂತು.' 'ಸಾವಿನ ಮನೆಯಲ್ಲಿ ಸತ್ತವನೊಬ್ಬನೇ ಕೆಟ್ಟ' ಎಂಬ ನುಡಿಗಟ್ಟಿನಲ್ಲಿ ಅಧ್ಯಾತ್ಮವಿದೆ. ಕವಿ ಡಾ. ಪು.ತಿ.ನ. ಅತ್ಯಂತ ಮನೋಜ್ಞವಾಗಿ ಅಷ್ಟೇ ಸರಳವಾಗಿ ಸಾತ್ವಿಕ ಬದುಕು ಸಾಗಿಸಿದರೆ ಸ್ವರ್ಗ ಯಾತರದ್ದು ಎಂದು ತೀಕ್ಷ್ಣ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ;
'ಹಗುರಾಗಿಹ ಮೈ ಕೆಸರಿಲ್ಲದ ಮನ
ಹಂಗಿಲ್ಲದ ಬದುಕು
ಕೇಡಿಲ್ಲದ ನುಡಿ ಕೇಡೆಣಿಸದ ನಡೆ
ಸಾಕಿವು ಇಹಕೂ ಪರಕೂ
ಮೇಲೇನಿದೆ ಇದಕೂ'.
-ಬಿಂಡಿಗನವಿಲೆ ಭಗವಾನ್