

ಪಾರ್ವತಿ ಅಮ್ಮನಿಗೆ ಈಗ ಎಪ್ಪತ್ನಾಲ್ಕು. ಆರು ಗಂಡು, ಮೂರು ಹೆಣ್ಣುಮಕ್ಕಳ ತಾಯಿ. ವೃದ್ಧಾಪ್ಯದಿಂದ ಬೆನ್ನು ಬಾಗಿದೆ. ಮೈಯಲ್ಲಿ ಕಸುವಿಲ್ಲ. ಆದರೆ ಯಾರಾದರೂ ಮರದಿಂದಲೋ ಎತ್ತರದ ಸ್ಥಳದಿಂದಲೋ ಬಿದ್ದು ಎಲುಬು ಮುರಿದುಕೊಂಡವರನ್ನು ಮನೆಗೆ ಹೊತ್ತು ತಂದರೆ ಅವರ ಮೈಯಲ್ಲಿ ಹದಿನಾರರ ಚೈತನ್ಯ ಮೂಡುತ್ತದೆ. ಪಕಪಕನೆ ಹತ್ತಿರದ ಗುಡ್ಡಕ್ಕೆ ಹೋಗಿ ಬಳ್ಳಿಯೊಂದನ್ನು ಎಲೆಗಳ ಸಹಿತ ಕಿತ್ತು ತರುತ್ತಾರೆ. ಒರಳು ಕಲ್ಲಿನಲ್ಲಿ ಜಜ್ಜಿ ತುಪ್ಪದಲ್ಲಿ ಕಲಸಿ ಕುಡಿಯಲು ಕೊಡುತ್ತಾರೆ. ತೈಲ ಹಾಕಿ ನೋವಿರುವ ಸ್ಥಳವನ್ನು ನೀವುತ್ತಾರೆ. ಗಾಯಗೊಂಡವರ ವಯಸ್ಸು ನಲುವತ್ತೈದರೊಳಗಿದ್ದರೆ ಮೂರು ತಿಂಗಳಲ್ಲಿ ಮುರಿದ ಎಲುಬು ಸಂದುಗೂಡಿ ಮೊದಲಿನಂತಾಗುತ್ತಾರೆ. ಆ ಮಿತಿ ದಾಟಿದ್ದರೂ ಬಹುಪಾಲು ಗುಣ ಹೊಂದುತ್ತಾರೆ.
ಪಾರ್ವತಿ ಅಮ್ಮ ವೈದ್ಯಶಾಸ್ತ್ರ ಓದಿದವರಲ್ಲ. ಕಲಿತದ್ದು ಎರಡನೇ ತರಗತಿ. ಪಾರಂಪರಿಕ ಔಷಧವೊಂದು ಅವರ ಭಂಡಾರದಲ್ಲಿದ್ದು ನೂರಾರು ಜನರಿಗೆ ಆರೋಗ್ಯ ದಾನ ಮಾಡಿದೆ. ಬೆಳ್ತಂಗಡಿ ತಾಲೂಕಿನ ವೇಣೂರಿನಿಂದ ನಾರಾವಿಗೆ ಹೋಗುವ ದಾರಿಯಲ್ಲಿ ನಡ್ತಿಕಲ್ಲು ಎಂಬಲ್ಲಿ ಈ ಧನ್ವಂತರಿಯ ಮನೆ. ಅವರ ಪತಿ ಕೇಶವ ಕಾರಂತರು. ತಂದೆ ನೆಲ್ಲಿಕಾರಿನ ರಂಗಪ್ಪಯ್ಯ, ತಾಯಿ ಸೀತಮ್ಮ ಮಗಳಿಗೆ ಆಸ್ತಿಯಾಗಿ ನೀಡಿದ್ದು ತಲೆಮಾರಿನಿಂದ ಬಂದ ಔಷಧಗಳ ಭಂಡಾರ. ಮೂಳೆ ಮುರಿದು ಆಸ್ಪತ್ರೆಯಲ್ಲೂ ಚಿಕಿತ್ಸೆ ಸಾಧ್ಯವಿಲ್ಲವೆಂದು ಮರಳಿದವರಿಗೂ ಅವರು ಕೊಡುವ ಮದ್ದಿನಿಂದ ಉತ್ತಮ ಫಲಿತಾಂಶ ಸಿಕ್ಕಿವೆ. ಮಂಗಳೂರಿನ ವಣಿಕರೊಬ್ಬರು ತಾರಸಿಯಿಂದ ಬಿದ್ದು ಬೆನ್ನುಮೂಳೆ ಜಖಂ ಆದವರು ಇವರಿಂದ ಮೊದಲಿನಂತಾದ ಸಂತೋಷದಲ್ಲಿ ಮುತ್ತಿನ ಬೆಂಡೋಲೆ ಮಾಡಿಸಿಕೊಟ್ಟು ಉಪಕಾರ ಸ್ಮರಿಸಿದ್ದಾರೆ.
ಪಾರ್ವತಿ ಅಮ್ಮ ಹಸಿರುಮದ್ದನ್ನು ಜೀರಿಗೆ ಹಾಕಿ ಕುಟ್ಟಿ ತುಪ್ಪದಲ್ಲಿ ಕರಗಿಸಿ ನಾಲ್ಕು ತಾಸಿಗೊಮ್ಮೆ ಕುಡಿಯಲು ಕೊಡುತ್ತಾರೆ. ಔಷಧ ಕುಡಿದ ಕೂಡಲೇ ನಿದ್ರೆ ಬರಬೇಕು. ಅದರಿಂದ 2ನೆ ಸಲದ ಔಷಧಿ ಕೊಡಲು ಅನುಕೂಲ. ಹೀಗೆ ಐದು ದಿನಗಳ ಚಿಕಿತ್ಸೆ ಮುಗಿದಾಗ ಪರಿಣಾಮ ಸ್ಪಷ್ಟವಾಗುತ್ತದೆ. ತಿಂಗಳಲ್ಲಿ ಐದು ದಿನದಂತೆ ಮೂರೇ ತಿಂಗಳ ಮದ್ದು. ಜತೆಗೆ ಕಾಳಜೀರಿಗೆ, ಕರಿಜೀರಿಗೆ, ಜೀರಿಗೆಗಳನ್ನು ಅದೇ ಹಸಿರುಮದ್ದಿನೊಂದಿಗೆ ಕುಟ್ಟಿ ಒಣಗಿಸಿಡುತ್ತಾರೆ. ತೆಂಗಿನೆಣ್ಣೆಯಲ್ಲಿ ಐದು ನಿಮಿಷ ಇದನ್ನು ಕುದಿಸಿದಾಗ ತೈಲ ಸಿದ್ಧ. ಇದು ಕೂಡ ಮುರಿದ ಎಲುಬು ಸಂದುಗೂಡಿಸಲು ಸಹಾಯಕ. ಬಿದ್ದ ಗಾಯ ಬಾತುಕೊಂಡಿದ್ದರೆ ಹಸಿರುಮದ್ದನ್ನು ಅಕ್ಕಿ ತೊಳೆದ ನೀರಿನಲ್ಲಿ ಜೀರಿಗೆಯೊಂದಿಗೆ ಅರೆದು ಲೇಪನ ಮಾಡಿದರೆ ನೋವು ಮಾಯ. ಗೂರಲು ಬಾಧೆಯಿರುವವರಿಗೂ ಪಾರ್ವತಮ್ಮನಲ್ಲಿ ಮದ್ದಿದೆ. ಬೆಳ್ಳುಳ್ಳಿ ಕಾಳುಮೆಣಸು ಹಸಿರೆಲೆಗಳ ಸಂಮ್ಮಿಶ್ರಣ. ತಿಂಗಳಲ್ಲಿ ಮೂರು ದಿನ ಸೇವನೆ.
ಇಪ್ಪತ್ತನೇ ವಯಸ್ಸಿನಿಂದ ಔಷಧದಾನ ಮಾಡುತ್ತ ಬಂದಿರುವ ಪಾರ್ವತಮ್ಮ ಈ ಐವತ್ತು ವರ್ಷಗಳಲ್ಲಿ ಗುಣಪಡಿಸಿದ ಮಂದಿಗೆ ಲೆಕ್ಕವಿಲ್ಲ. ಬಡವರಿಂದ ಬಿಡಿಗಾಸೂ ಸ್ವೀಕರಿಸಿಲ್ಲ. ಉಳ್ಳವರು ಸಂತೋಷದಿಂದ ಕೊಟ್ಟಿದ್ದೂ ಉಂಟು. ಪಾರ್ವತಮ್ಮನನ್ನು ಸಂಪರ್ಕಿಸಲು 9449208032.
- ಪ. ರಾಮಕೃಷ್ಣ ಶಾಸ್ತ್ರಿ