

ಮಣ್ಣು, ಕಟ್ಟಿಗೆ, ಕಲ್ಲು ಏನೇ ಇರಲಿ... ಸುಂದರ ಆಕಾರ ನೀಡುವ ತವಕ. ಉತ್ಸಾಹಿ ಶಿಲ್ಪಿ ಹನಮಂತ ರಾವ್ ಗಾಯಕವಾಡ ವಿಕಲಚೇತನ. ಊರು ಗದಗ ಜಿಲ್ಲೆಯ ರೋಣದ ಗಜೇಂದ್ರಗಡ ಸಮೀಪದ ಉಣಚಗೇರಿ. ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಕಲೆಯತ್ತ ಮುಖಮಾಡಿದರು. ಬಡತನದಲ್ಲೇ ಕಲೆ ಶ್ರೀಮಂತಗೊಳಿಸಿಕೊಂಡರು. ಗುರು ಯಮನಪ್ಪ ಜೊತೆ 2 ದಶಕ ತರಬೇತಿ ಪಡೆದರು.
6 ತಿಂಗಳ ಮಗುವಾಗಿದ್ದಾಗ ಅಚಾನಕ್ ಬೆಂಕಿ ದುರಂತದಿಂದ ಬಲಗೈ ಸುಟ್ಟುಹೋಯಿತು. ಮುಂದೆ ಶಿಲ್ಪಕಲೆಯು ಅಂಗವೈಕಲ್ಯವನ್ನು ಮರೆಸಿತು. ಕಲೆಯಲ್ಲಿ ಏನನ್ನಾದರೂ ಸಾಧಿಸುವಂತೆ ಉತ್ತೇಜಿಸಿತು. ಪ್ರಾರಂಭದಲ್ಲಿ ಮಣ್ಣಿನ ಗಣೇಶಮೂರ್ತಿ ಮಾಡಲು ಶುರುಮಾಡಿದರು. ಸ್ವತಃ ಭವಾನಿ ಕಲಾ ನಿಧಿ ಎಂಬ ಅಂಗಡಿ ಪ್ರಾರಂಭಿಸಿದರು. ಗಜೇಂದ್ರಗಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಚತುರ್ಥಿಯಂದು ಪೂಜಿಸಲ್ಪಡುವುದು ಗಾಯಕವಾಡರು ತಯಾರಿಸಿದ ಗಣೇಶನನ್ನೆ! 300 ದೇಗುಲಗಳ ಗೋಪುರ ನಿರ್ಮಿಸಿದ್ದಾರೆ ಇವರು.
ರಥ ಬಂತು ರಥ
ಗಾಯಕವಾಡರು ಒಟ್ಟು 5 ರಥಗಳನ್ನು ನಿರ್ಮಿಸಿದ್ದಾರೆ. ಸಿದ್ದಾರೋಢ ರಥ ಪ್ರಮುಖ. 108 ಓಂಕಾರದಿಂದ ನಿರ್ಮಾಣಗೊಂಡಿದೆ. ಕನ್ನಡ, ತೆಲಗು, ತಮಿಳು, ಉರ್ದು ಹಿಂದಿ ಮತ್ತು ದೇವನಾಗರಿ ಲಿಪಿ ಸೇರಿದಂತೆ 8 ಭಾಷೆಯಲ್ಲಿ ಜಪ ಚಿತ್ರ ಕೆತ್ತಲಾಗಿದೆ. ಅಪರೂಪದ ಗಜ ಪಕ್ಷಿ ಚಿತ್ರಣ ಈ ರಥದ ವಿಶೇಷ. (ಗಜ ಪಕ್ಷಿ ಹಾರುತ್ತ ಇಂದ್ರನ ಆಸ್ಥಾನಕ್ಕೆ ಹೋಗಿತ್ತು. ಆಗ ಐರಾವತನ ಸೊಂಡಿಲುಗಳಿಗೆ ರೆಕ್ಕೆ ತಗುಲಿ ರಕ್ತ ಸುರಿಯಿತು. ಕೋಪದಿಂದ ಇಂದ್ರ ವಜ್ರಾಯುಧದಿಂದ ಗಜಪಕ್ಷಿಯ ರೆಕ್ಕೆ ಕತ್ತರಿಸಿದ ಎಂಬ ಪುರಾಣ ಕಥೆ ಚಾಲ್ತಿಯಲ್ಲಿದೆ). ಸಿದ್ದಾರೋಢ ರಥ ಸೇರಿದಂತೆ ಐದು ರಥ ಕಟ್ಟಿ ಭಕ್ತರ ಮೆಚ್ಚುಗೆ ಪಡೆದಿದ್ದಾರೆ.
- ಮಂಜುನಾಥ ಎಸ್. ರಾಠೋಡ