

ಅರಮನೆ ನಿರ್ಮಿಸುವ ಶಿಲ್ಪಿ!
ಬೆಂಕಿಕಡ್ಡಿಯಿಂದ ಕಲಾಕೃತಿ ರಚಿಸುವ ನಿಪುಣ ಮೈಸೂರಿನ ನಾಗೇಶ್. ಅವರ ಮೈಸೂರು ಅರಮನೆ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿದೆ.
ಬೆಂಕಿಕಡ್ಡಿಗಳಿಂದ ಏನು ಮಾಡೋಕೆ ಸಾಧ್ಯ ಎಂದು ಕೇಳಿದರೆ ಈ ಯುವಕ ಮೈಸೂರು ಅರಮನೆಯನ್ನೇ ನಿರ್ಮಿಸಿ ತೋರಿಸುತ್ತಾನೆ. ಬೆಂಕಿಕಡ್ಡಿಯಲ್ಲಿ ಅರಮನೆ? ಹುಬ್ಬೇರಿಸಬೇಡಿ.
ಮೈಸೂರಿನ ಎಂ.ಪಿ ನಾಗೇಶ್ ಸುಮಾರು 6 ಲಕ್ಷ ಬೆಂಕಿಕಡ್ಡಿಗಳನ್ನು ಬಳಸಿ ಮೈಸೂರು ಅರಮನೆಯ ಕಲಾಕೃತಿ ರಚಿಸಿದ್ದಾನೆ. ಫೆವಿಕಾಲ್ನಿಂದ ಬೆಂಕಿಕಡ್ಡಿಗಳನ್ನು ಜೋಡಿಸುತ್ತಾ ಅದರಲ್ಲಿ ಮೈಸೂರು ಅರಮನೆಯನ್ನು ರಚಿಸುವುದು ಸುಲಭದ ಮಾತಲ್ಲ. ಈ ಕಲಾಕೃತಿ ರಚಿಸಲು ಈತ ತೆಗೆದುಕೊಂಡ ಕಾಲಾವಕಾಶ ಬರೋಬ್ಬರಿ ಮೂರೂವರೆ ವರ್ಷ! ಬೆಂಗಳೂರಿನಲ್ಲಿ ನಡೆದ ಈ ಬಾರಿಯ ಚಿತ್ರಸಂತೆಯಲ್ಲಿ ಈ ಕಲಾಕೃತಿಯನ್ನು ನಾಗೇಶ್ ಪ್ರದರ್ಶಿಸಿದ್ದರು. ಪ್ರಸ್ತುತ ಕಲಾಕೃತಿ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ನಲ್ಲೂ ಸ್ಥಾನ ಗಿಟ್ಟಿಸಿಕೊಂಡಿದೆ.
ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿಯಾಗಿರುವ 29ರ ಹರೆಯದ ನಾಗೇಶ್ ಜ್ಯುವೆಲ್ಲರಿ ವರ್ಕ್ ಮಾಡುತ್ತಿದ್ದಾರೆ. ಬೆಂಕಿಕಡ್ಡಿಯಲ್ಲಿ ಕಲಾಕೃತಿಗಳನ್ನು ಮಾಡುವುದು ಅವರ ಹವ್ಯಾಸ. 2005ರಲ್ಲಿ ಮೊದಲ ಬಾರಿಗೆ ಬೆಂಕಿಕಡ್ಡಿಯಲ್ಲಿ ಐಫೆಲ್ ಟವರ್ ನಿರ್ಮಿಸುವ ಮೂಲಕ ಜನರ ಗಮನ ಸೆಳೆದಿದ್ದರು. ಈ ಐಫೆಲ್ ಟವರ್ ಐದೂವರೆ ಅಡಿ ಎತ್ತರವಿದ್ದು, ಇದನ್ನು ನಿರ್ಮಿಸಲು 6000 ಬೆಂಕಿ ಕಡ್ಡಿಯನ್ನು ಬಳಸಲಾಗಿದೆ.
'ಐಫೆಲ್ ಟವರ್ ಕಲಾಕೃತಿಯ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡಿದ ನಂತರ ನನಗೆ ಇನ್ನಷ್ಟು ಕಲಾಕೃತಿಗಳನ್ನು ಮಾಡಬೇಕೆಂಬ ಉತ್ಸಾಹ ಬಂತು. ಹಾಗೆ ಮೈಸೂರು ಅರಮನೆ ನಿರ್ಮಿಸಿದೆ' ಅಂತಾರೆ ನಾಗೇಶ್.
ಇದೀಗ ಬೆಂಕಿಕಡ್ಡಿಯಲ್ಲಿ ತಾಜ್ಮಹಲ್ ನಿರ್ಮಿಸುವ ಕಾರ್ಯದಲ್ಲಿ ತೊಡಗಿರುವ ಇವರು ಪ್ರಸ್ತುತ ಕಲಾಕೃತಿಯನ್ನು ರಚಿಸಲು ಒಂದು ವರ್ಷ ಬೇಕೆನ್ನುತ್ತಾರೆ. ಇಂಥಾ ಕಲಾಕೃತಿಗಳನ್ನು ರಚಿಸಬೇಕಾದರೆ ತುಂಬಾ ಸಮಯ ಹಾಗು ತಾಳ್ಮೆ ಬೇಕು. ಇವು ತುಂಬಾ ನಾಜೂಕಾಗಿರುವುದರಿಂದ ಕಲಾಕೃತಿ ರಚಿಸುವಾಗಲೂ, ತದನಂತರ ಅದನ್ನು ಪ್ರದರ್ಶಿಸುವಾಗಲೂ ತುಂಬಾ ಜಾಗರೂಕತೆಯಿಂದಿರಬೇಕು. ಇಂಥಾ ಕಲಾಕೃತಿಗಳನ್ನು ಪ್ರದರ್ಶಿಸಲು ಆರ್ಟ್ ಗ್ಯಾಲರಿ ಬೇಕೆನ್ನುವುದು ನನ್ನ ಆಸೆ. ಆದರೆ ಜನ ಕಲಾಕೃತಿಗಳನ್ನು ನೋಡಿಕೊಂಡು ಹೋಗುತ್ತಾರೆಯೇ ವಿನಾ ಅದರ ಹಿಂದಿನ ಶ್ರಮದ ಬಗ್ಗೆ ಮಾತನಾಡುವುದಿಲ್ಲ ಎನ್ನುವುದು ನಾಗೇಶ್ ಮನದಾಳದ ಮಾತುಗಳು.
ನಮ್ಮ ನಡುವೆಯೇ ಇದ್ದು ಇಷ್ಟೊಂದು ಸಾಧನೆ ಮಾಡಿದರೂ ಇನ್ನೂ ಎಲೆಮರೆ ಕಾಯಿಯಂತಿರುವ ಈ ಯುವ ಕಲಾವಿದನಿಗೆ ಪ್ರೋತ್ಸಾಹದ ಅಗತ್ಯವಿದೆ. ನಾಗೇಶ್ರ ಈ ಸಾಧನೆಗೆ ಹಾಟ್ಸ್ ಆಫ್ ಹೇಳೋಣ...
--
ಮೈಸೂರು ಅರಮನೆಯ ಈ ಕಲಾಕೃತಿ ತುಂಬಾ ದೊಡ್ಡದಾಗಿದ್ದು, ಮನೆಯಲ್ಲಿ ಇಟ್ಟುಕೊಳ್ಳಲು ಕೂಡಾ ಕಷ್ಟವಾಗುತ್ತಿದೆ. ಮನೆಯ ತಾಪತ್ರಯಗಳು ಒಂದೆಡೆಯಾದರೆ, ನನ್ನಂಥ ಬಡ ಕಲಾವಿದನಿಗೆ ಪ್ರೋತ್ಸಾಹಗಳು ಸಿಗುತ್ತಿಲ್ಲ. ನನ್ನ ಕಲಾಕೃತಿ ಲಿಮ್ಕಾ ದಾಖಲೆ ಸೇರಿದ್ದರೂ, ಹೆಚ್ಚಿನ ಪ್ರೋತ್ಸಾಹ ಜನರಿಂದ ಲಭಿಸುತ್ತಿಲ್ಲ ಎಂಬ ಕೊರಗು ಇದೆ.
- ನಾಗೇಶ್, ದೂರವಾಣಿ ಸಂಖ್ಯೆ: 9845222815
- ರಶ್ಮಿ ಕಾಸರಗೋಡು