

ಮನುಷ್ಯ ಎಷ್ಟು ಕಾಲ ಲೈಂಗಿಕವಾಗಿ ಸಕ್ರಿಯವಾಗಿರಬಲ್ಲ ಎಂಬುದರ ಬಗ್ಗೆ ಅನೇಕ ವೈದ್ಯಕೀಯ ಪುಸ್ತಕಗಳಲ್ಲಿ, ನಿಯತಕಾಲಿಕೆಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಚರ್ಚಿತವಾಗಿದೆ. ಈ ಎಲ್ಲ ಬರಹಗಳ, ಚರ್ಚೆಗಳ ಮುಖ್ಯಾಂಶವೆಂದರೆ ಮನುಷ್ಯನ ಲೈಂಗಿಕ ಸಾಮರ್ಥ್ಯ ಆತನ ದೈಹಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ ಎಂಬುದು. ವೈದ್ಯ ವಿಜ್ಞಾನದ ಪ್ರಕಾರ ವ್ಯಕ್ತಿ ಲೈಂಗಿಕವಾಗಿ ಸಕ್ರಿಯವಾಗಿರಲು ಯಾವುದೇ ವಯಸ್ಸಿನ ಮಿತಿ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಕೆಲವರು ಮಧ್ಯವಯಸ್ಸಿನಲ್ಲಿ ಲೈಂಗಿಕಾಸಕ್ತಿ ಕಳೆದುಕೊಂಡರೆ ಇನ್ನು ಕೆಲವರು ಐವತ್ತರ ನಂತರ, 70ರ ವಯಸ್ಸಿನಲ್ಲಿ ಲೈಂಗಿಕಾಸಕ್ತಿ ಬೆಳೆಸಿಕೊಂಡ ಉದಾಹರಣೆ ಇದೆ ಎನ್ನುತ್ತದೆ ವೈದ್ಯ ವಿಜ್ಞಾನ. ಹಲವು ಹೆಸರಾಂತ ಗಣ್ಯರು ತಮ್ಮ ಐವತ್ತನೇ ವಯಸ್ಸಿನ ನಂತರ ಲೈಂಗಿಕವಾಗಿ ಕ್ರಿಯಾಶೀಲರಾಗಿದ್ದಂಥ ಉದಾಹರಣೆಗಳಿವೆ. ಇವರಿಗೆಲ್ಲ ಸೆಕ್ಸ್ ಒಂದು ಗೀಳಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.
ವಿಕ್ಟರ್ ಹ್ಯೂಗೋ: ಹೆಸರಾಂತ ಫ್ರೆಂಚ್ ಕಾದಂಬರಿಕಾರ. ಈತ ತನ್ನ 83ನೇ ವಯಸ್ಸಿನವರೆಗೂ, ಲೈಂಗಿಕವಾಗಿ ಸಕ್ರಿಯನಾಗಿದ್ದ. 70ನೇ ವಯಸ್ಸಿನಲ್ಲೂ 27 ವರ್ಷದ ಲಾಂಡ್ರಿ ಕೆಲಸ ಮಾಡುವವಳೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದ.
ಲಿಯೋ ಟಾಲ್ಸ್ಟಾಯ್: ಟಾಲ್ಸ್ಟಾಯ್ ಯಾರಿಗೆ ತಾನೇ ಗೊತ್ತಿಲ್ಲ? ರಷ್ಯಾದ ಕಾದಂಬರಿಕಾರ, ಸಣ್ಣಕಥೆಗಾರ ಹಾಗೂ ನೀತಿ ಬೋಧಕ. ಈತನ ಪ್ರಸಿದ್ಧ ಕಾದಂಬರಿ 'ವಾರ್ ಆ್ಯಂಡ್ ಪೀಸ್' ಮತ್ತು 'ಅನ್ನಾ ಕರೇನಿನಾ' ಗೊತ್ತಿಲ್ಲದವರೇ ಇಲ್ಲ. ಈತ ತೀರಾ ಅಸಹ್ಯವೆನಿಸುವಷ್ಟು ಲೈಂಗಿಕ ಬಯಕೆಯುಳ್ಳವನಾಗಿದ್ದ ಎಂದು ಆತನ ಪತ್ನಿ ಸೋನಿಯಾ ತನ್ನ ಡೈರಿಯಲ್ಲಿ ದಾಖಲಿಸಿದ್ದಾಳೆ.
ಬರ್ಟೆಂಡ್ ರಸೆಲ್: ಬ್ರಿಟಿಷ್ ತತ್ವಜ್ಞಾನಿ. ಈತ ನಾಲ್ಕನೇ ಬಾರಿ ಮದುವೆಯಾದದ್ದು ತನ್ನ 80ನೇ ವಯಸ್ಸಿನಲ್ಲಿ!
ಪಾಬ್ಲೊ ಪಿಕಾಸೊ: ಅತಿಯಾದ ಕಾಮುಕತೆಯಿಂದ ದೀರ್ಘಕಾಲದ ಗೆಳತಿ, ಇಬ್ಬರು ಹೆಣ್ಣು ಮಕ್ಕಳಿಂದ ದೂರಾದ ಪಿಕಾಸೊ 80ರ ನಂತರ ಪುನರ್ವಿವಾಹವಾದ.
ಚಾರ್ಲಿ ಚಾಪ್ಲಿನ್: ಮೂಕಿಚಿತ್ರಗಳ ಹೆಸರಾಂತ ಹಾಸ್ಯ ನಟ. ಈತನ ಮೊದಲ ಮೂವರು ಹೆಂಡತಿಯರಲ್ಲಿ ಇಬ್ಬರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಚಾಪ್ಲಿನ್ ತನ್ನ 54ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿ ಮದುವೆಯಾದ. 70ನೇ ವಯಸ್ಸಿನಲ್ಲಿ ಎರಡು ಮಕ್ಕಳಿಗೆ ತಂದೆಯಾದ. 'ನಾನು ಪ್ರಬುದ್ಧನಾದದ್ದು ನನ್ನ ನಾಲ್ಕನೇ ವಿವಾಹದ ನಂತರ' ಎಂದು ಆತನೇ ಹೇಳಿಕೊಂಡಿದ್ದಾನೆ.