

ಸಾವನ್ನು ಮುಂದೂಡಲು ಮನುಷ್ಯ ಎಲ್ಲ ಕಾಲದಲ್ಲೂ ಪ್ರಯತ್ನಿಸುತ್ತಲೇ ಬಂದಿದ್ದಾನೆ. ಭಾರತೀಯ ವೇದ-ಪುರಾಣಗಳಲ್ಲಿ ಋಷಿ-ಮುನಿಗಳು ಗಡ್ಡೆ-ಗೆಣಸುಗಳನ್ನು ತಿಂದು, ಕಠೋರ ಅನುಷ್ಠಾನಗಳನ್ನು ಮಾಡುತ್ತಾ ಸಹಸ್ರಾರು ವರ್ಷ ಜೀವಿಸಿದ್ದರ ಉಲ್ಲೇಖ ಬರುತ್ತದೆ. ಸಪ್ತ ಋಷಿಗಳಂತೂ ಅತ್ಯಂತ ದೀರ್ಘಾಯುಷಿಗಳು ಎನ್ನಲಾಗುತ್ತದೆ. ಇನ್ನು ಹನುಮಂತ-ಅಶ್ವತ್ಥಾಮರು ಚಿರಂಜೀವಿ ವರ ಪಡೆದವರು. ಅಮರತ್ವದ ಹಂಬಲ ಮನುಷ್ಯರಿಗಷ್ಟೇ ಅಲ್ಲ, ದೇವತೆಗಳಿಗೂ ಇತ್ತು. ಅದಕ್ಕೆಂದೇ ಸಮುದ್ರ ಮಥನ ಮಾಡಿ ಅಮೃತ ಪಡೆದು ಸಾವನ್ನು ಗೆದ್ದರು ಎಂದು ಪುರಾಣ ಹೇಳುತ್ತದೆ.
ಇಂಥ ಅಮೃತದ ಹುಡುಕಾಟದಲ್ಲಿ ಇಂದಿನ ಮನುಕುಲವೂ ತೊಡಗಿಕೊಂಡಿದೆ. ವೈದ್ಯಕೀಯ ಜಗತ್ತು ಇಂದು ಅಗಾಧ ಸಾಧನೆ ಮಾಡಿದ್ದರೂ ಸಾವನ್ನು ಜಯಿಸುವ ಔಷಧ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಇದೆ. 'ಹುಟ್ಟಿದ ಮನುಷ್ಯ ಸಾಯಲೇಬೇಕು' ಎಂಬ ನಾಣ್ಣುಡಿ ಮಾತ್ರ ಬದಲಾಗಿಲ್ಲ.
ಆದಾಗ್ಯೂ ಇಂದಿನ ಸಮಾಜದಲ್ಲಿ ಕೆಲವು ದೀರ್ಘಾಯುಷಿಗಳು ಕಂಡುಬರುತ್ತಾರೆ. ಯಾವುದೇ ಕಾಯಿಲೆ-ಕಸಾಲೆಗಳಿಲ್ಲದ ಇವರು ನೂರು ವರ್ಷ ಪೂರ್ಣಗೊಳಿಸಿದರೂ ಚಟುವಟಿಕೆಯ ಜೀವನದಲ್ಲಿರುತ್ತಾರೆ. ದೀರ್ಘಾಯುಷಿಗಳಾದ ತಂದೆ-ತಾಯಿಯರಿಗೆ ಹುಟ್ಟಿದ ಮಕ್ಕಳು ದೀರ್ಘಾಯುಷ್ಯವನ್ನು ಪಡೆಯುತ್ತಾರೆ ಎನ್ನುವುದು ವೈಜ್ಞಾನಿಕ ಸತ್ಯ. ಇಂಥ ಹಲವು ದೀರ್ಘಾಯುಷಿಗಳ ಜೀವನಶೈಲಿ ಆಧರಿಸಿ ಈ ಕೆಳಗಿನ ಟಿಪ್ಸ್ ರೂಪಿಸಲಾಗಿದೆ.