ಅನುಭಾವವೆಂದರೆ ಅಂತರಂಗದ ಪರಿಪಾಕ. ಅನುಭವಗಳು ಹೆಪ್ಪುಗಟ್ಟಿದರೆ ಅದು ತಾನೇತಾನಾಗಿ ಮೂಡುತ್ತದೆ ಮೊಸರಿನಲ್ಲಿನ ಬೆಣ್ಣೆಯ ಹಾಗೆ. ಆದ್ದರಿಂದಲೇ ವೃದ್ಧಾಪ್ಯವನ್ನು ಸಮುದ್ರಕ್ಕೆ ಹೋಲಿಸಲಾಗುತ್ತದೆ. ಶ್ರೀಮದ್ಗಾಂಭೀರ್ಯ, ಹಿತಮಿತ ಮಾತು, ತುಂಬಿದ ಕೊಡ, ತಾಳ್ಮೆ, ನಿಧಾನವೇ ಪ್ರಧಾನವಾಗಿ ಮೆರೆಯುತ್ತಾರೆ ಹಿರಿಯರು. ಅವರು ಹಾರಿಬಿಡುವ ಚಟಾಕಿಗಳು ಸಿದ್ಧವಿನೋದವಾಗಿರದೆ ಬೋಧಪ್ರದ ವಿಮರ್ಶೆಯಾಗಿರುತ್ತವೆ. ಸಮಯಸ್ಫೂರ್ತಿಯಿಂದ ಉಗಮಿಸುವ ವಿಡಂಬನೆಗಳು ಅವು. ನಗೆ ನವಿರುಗಳು ಕ್ಷಣಿಕವಾಗಿರದೆ ಅನವರತ ನಗಿಸುತ್ತಲೇ ಇರುತ್ತವೆ. ಅವು ಕೇವಲ ಕಚಗುಳಿಗಳಲ್ಲ. ಎಂತಹ ಮರೆಗುಳಿಗೂ ಮತ್ತೆ ಮತ್ತೆ ಕಾಡುವ ಹಾಸ್ಯ ಗುಳಿಗೆಗಳು. ಕನ್ನಡದ 'ರತ್ನ' ಎಂದೇ ಖ್ಯಾತರಾದ ಡಾ. ಜಿ.ಪಿ. ರಾಜರತ್ನಂರವರಿಗೆ ಯಾವುದೇ ಪ್ರಶಸ್ತಿ, ಗೌರವ, ಬಹುಮಾನ, ಅಧ್ಯಕ್ಷ ಸ್ಥಾನ ಬಂದರೂ ಅವರ ಆಪ್ತರು 'ಸಾರ್ ನಿಮಗೆ ಯಾವತ್ತೋ ಈ ಮರ್ಯಾದೆ ಸಲ್ಲಬೇಕಿತ್ತು... ತಡವಾಗಿ ಪ್ರಾಪ್ತವಾಯಿತು' ಎಂದು ಅಭಿಪ್ರಾಯಪಡುತ್ತಿದ್ದರಂತೆ. ಒಂದು ಸಮಾರಂಭದಲ್ಲಿ ಸ್ವತಃ ರಾಜರತ್ನಂ ಈ ಸಂಗತಿಯನ್ನು ಪ್ರಸ್ತಾಪಿಸುತ್ತ 'ಹೌದು.. ನಾಳೆ ನಾನು ಮೇಲಕ್ಕೆ ಹೋದಾಗಲೂ ಜನ ಖಂಡಿತವಾಗಿ ಹೇಳಿಯೇ ತೀರ್ತಾರೆ, ಇವನು ಯಾವತ್ತೋ ಹೋಗಬೇಕು ಅಂತ' ಎಂದು ತಮಾಷೆ ಸಿಡಿಸಿದಾಗ ಸಭಿಕರು ನಗೆಗಡಲಿನಲ್ಲಿ ತೇಲಿದ್ದರು. ರಾಜರತ್ನಂ ಮನೆ ಇದ್ದದ್ದು ಬೆಂಗಳೂರಿನ ಮಲ್ಲೇಶ್ವರದಲ್ಲಿ. ಒಂದು ದಿನ ಬೆಳಗ್ಗೆಯೇ ಬರಹಗಾರ ಶ್ರೀನಿವಾಸರಾಜು ಅವರ ಮನೆಗೆ ಹೋಗಿ ಕುಶಲ ವಿಚಾರಿಸಿದರು. ಸ್ವಲ್ಪ ಸಾಹಿತ್ಯ ಚರ್ಚೆಯೂ ಆಯಿತು. ರಾಜು ಅವರ ಮನೆಯಿಂದ ಹೊರಗೆ ಕಾಲಿಟ್ಟಾಗ ರಾಜರತ್ನಂ 'ಗೇಟು ಹಾಕ್ಕೊಂಡು ಹೋಗಪ್ಪ. ಬೀದಿ ದನಗಳೆಲ್ಲ ಮನೆಯೊಳಗೆ ಬಂದ್ಬುಡುತ್ವೆ' ಎಂದರಂತೆ!
ಡಾ. ಮಾಸ್ತಿಯವರು ಮೊನಚು ನುಡಿಗೆ ಹೆಸರಾದವರು. ಅವರ 60ನೆಯ ಹುಟ್ಟುಹಬ್ಬದ ಸಮಾರಂಭದಲ್ಲಿ ಸಾಹಿತಿಯೊಬ್ಬರು ಇಂಗ್ಲಿಷಿನಲ್ಲಿ ಸ್ವಾಗತ ಭಾಷಣ ಮಾಡುವುದೇ? ಮಾಸ್ತಿಯವರಿಗೆ ಅದೂ ವ್ಯಾಕರಣವಿಲ್ಲದೆ ಆತ ಇಂಗ್ಲಿಷಿನಲ್ಲಿ ಮಾತಾಡಿದ್ದು ತುಂಬಾನೇ ಕೆರಳಿಸಿತ್ತು. ತಮ್ಮ ಮಾತಿನ ಸರದಿಯಲ್ಲಿ ಮಾಸ್ತಿ ಆ ಮಹಾನುಭಾವನಿಗೆ ಸರಿಯಾಗಿಯೇ ಚಾಟಿ ಬೀಸಿದ್ದು ಹೀಗೆ, 'ಅಯ್ಯಾ ಪುಣ್ಯಾತ್ಮ, ನೀನು ಇಂಗ್ಲಿಷಿನಲ್ಲಿ ಮಾಡಿದ ತಪ್ಪನ್ನು ನಮ್ಮ ಕನ್ನಡದಲ್ಲೇ ಮಾಡಿದ್ದರೆ ಆಗುತ್ತಿರಲಿಲ್ಲವೆ?' 'ಇಂಗ್ಲಿಷ್ಪ್ರಿಯ' ಬೇಸ್ತು.
ಶತಾಯುಷಿಗಳಾಗಿ ಬಾಳಿ ಅಮೋಘ ವೈಚಾರಿಕತೆಯನ್ನು ಜನರಲ್ಲಿ ಬಿತ್ತಿದ ಪ್ರೊ. ಎ.ಎನ್. ಮೂರ್ತಿರಾಯರ ವಿನೋದವೇ ವಿಶಿಷ್ಟ. ಸೂಕ್ಷ್ಮವಾಗಿ ಗ್ರಹಿಸಿದರೆ ಮಾತ್ರ ಅದರಲ್ಲಿನ ತಿರುಳು ಎಟುಕುತ್ತಿತ್ತು. 104 ವರ್ಷ ದಾಟಿದ ಸಂದರ್ಭದಲ್ಲಿ ಅವರು 'ನಾನಂತೂ ಯಾವತ್ತೂ ಯಮನಲ್ಲಿ ಬೇಗನೇ ನನ್ನನ್ನು ಕರೆಸಿಕೊ ಅಂತ ಗೋಗರೆಯುವುದಿಲ್ಲ. ನನಗೆ ಅವನ ಲೋಕಕ್ಕಿಂತ ಇಲ್ಲೇ ಆರಾಮವೆನ್ನಿಸಿದೆ. ನಿಮ್ಮ ಸಹಕಾರವಿರಲಿ...' ಎಂದು ಉದ್ಗರಿಸಿದಾಗ ಕರತಾಡನದ ಶಬ್ದ ಸೂರು ಹಾರಿಹೋಗುವಂತಿತ್ತು. ಅದೇ ದಿನ ಸಭೆ ಮುಗಿದ ನಂತರ ಸುಮಾರು 75ರ ವೃದ್ಧರು ರಾಯರ ಬಳಿ ಬಂದು 'ಸಾರ್, ನಾನು ತಮ್ಮ ವಿದ್ಯಾರ್ಥಿಯಾಗಿದ್ದವ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ. ತಾವು ಮ್ಯಾಕ್ಬೆತ್ ಪಾಠ ಹೇಳುತ್ತಿದ್ದಿರಿ' ಎಂದರು. ರಾಯರು 'ಹೌದೇನಪ್ಪ. ಇದರಲ್ಲಿ ನನ್ನ ತಪ್ಪೇನಿಲ್ಲಪ್ಪ. ಪ್ರಿನ್ಸಿಪಾಲರು ಹೇಳಿದಂತೆ ನಡೆದುಕೊಳ್ಳದೇ ವಿಧಿಯಿರಲಿಲ್ಲ' ಎಂದಾಗ ಅವರ ಸುತ್ತ ಜಮಾಯಿಸಿದ್ದವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಪ್ರೊ. ಸಿ.ಡಿ. ನರಸಿಂಹಯ್ಯನವರ ಹಾಸ್ಯಪ್ರವೃತ್ತಿ ನಡೆನುಡಿಗಳಲ್ಲಿ ವ್ಯಕ್ತಗೊಳ್ಳುತ್ತಿತ್ತು. ಒಮ್ಮೆ ಅವರು ತರಗತಿ ಪ್ರವೇಶಿಸುತ್ತಿದ್ದಂತೆ ಮುಜುಗರಗೊಂಡರು. ಏಕೆಂದರೆ ಬೋರ್ಡ್ ಪೂರ್ತಿ ಹುಡುಗರು ಚಿತ್ರವಿಚಿತ್ರವಾಗಿ ಗೀಚಿದ್ದರು. ಸಿಟ್ಟಾಗದೆ ಅವರು ಸಂಯಮ ವಹಿಸಿದರು. ತಮ್ಮ ಕೋಟಿನ ಕಿಸೆಯಿಂದ ಕರವಸ್ತ್ರ ಹೊರತೆಗೆದರು, 'ಛೆ! ಹೀಗೆಲ್ಲ ಬೋರ್ಡ್ ಮೇಲೆ ಬರೀಬಾರ್ದಪ್ಪ. ಬೋರ್ಡ್ ಕ್ಲೀನಾಗಿದ್ರೆ ಎಷ್ಟು ಚೆನ್ನಾಗಿರುತ್ತೆ ನೋಡಿ' ಎನ್ನುತ್ತಲೇ ಅಳಿಸಿ ಸ್ವಚ್ಛಗೊಳಿಸಿದ್ದರು.
ನಮ್ಮ ಬೀದಿಯ ಮೂಲೆಮನೆ ನಿವಾಸಿ ಚೆನ್ನಜ್ಜ ಇಳಿವಯಸ್ಸಿನಲ್ಲೂ ಸಂಬಂಧಿಕರೊಂದಿಗೆ, ಹಳೆಯ ಗೆಳೆಯರೊಂದಿಗೆ ಪತ್ರ ವ್ಯವಹಾರ ಇಟ್ಟುಕೊಂಡಿದ್ದಾರೆ. ಕಿರಿಯರಿಗೆ ಮಾದರಿಯಾಗುವ ಅವರದೊಂದು ಪ್ರವೃತ್ತಿಯೆಂದರೆ, ಬರೆದ ನಂತರ ಏನು ಬರೆಯಲಾಗಿರುವುದೋ ಅದನ್ನು ಮತ್ತೆ ಓದುವುದು. 'ಹೌದು, ನಮಗೇ ತಿಳಿಯದಂತೆ ಎಲ್ಲಾದರೂ ತಪ್ಪು ನುಸುಳಿರುವ ಸಾಧ್ಯತೆಯಿದ್ದೇ ಇರುತ್ತದೆ ಕಣಯ್ಯ. ಅದಕ್ಕೇ ಪುನಃ ಕಣ್ಣಾಡಿಸ್ತೀನಿ. ಲೋಪಮುಕ್ತ ಅಂತ ಖಾತರಿಪಡಿಸಿಕೊಂಡರೆ ಏನೋ ಸಮಾಧಾನ ಅಲ್ವೇನಪ್ಪ ದೊರೆ?' ಎಂದವರು ಪ್ರಶ್ನಿಸುತ್ತಾರೆ.
ಆ ವೃತ್ತಾಂತ ಅತ್ಯಂತ ಸೊಗಸಾಗಿ ಸಂವೇದನೆ, ಭಾವನಾತ್ಮಕ ನಂಟನ್ನು ಬಿಂಬಿಸುತ್ತದೆ. ಮಗ, ಸೊಸೆ, ಮೊಮ್ಮಕ್ಕಳಿಂದ ಅಜ್ಜ ನಿತ್ಯ ಮೂದಲಿಕೆಗೊಳಗಾಗುತ್ತಿರುತ್ತಾರೆ. ವಿಷಯ ಸರಳವೆ. ಅಜ್ಜ ಇಂದಿಗೂ ಇಪ್ಪತ್ತು ವರ್ಷಗಳಿಗೂ ಹಿಂದೆ ಹೊಲಿಸಿದ್ದ ಕೋಟನ್ನು ಧರಿಸಿ ಬೆಳಗಿನ ವಾಕಿಂಗ್ಗೆ ಹೋಗುವುದು ಅವರ್ಯಾರಿಗೂ ಇಷ್ಟವಾಗುತ್ತಿರಲಿಲ್ಲ. ನಮಗೆಲ್ಲ ಅದು ಅವಮಾನ. ಅಕ್ಕಪಕ್ಕದವರೆಲ್ಲ ಹಾಸ್ಯ ಮಾಡ್ತಾರೆ. ಈಗ್ಲೂ ಆ ಓಬಿರಾಯನ ಕಾಲದ ಲಗೇಜು ಹೊರಬೇಕೆ? ಇದು ಕೇವಲ ಪೋಷಾಕಲ್ಲ. ಅದರ ಹಿಂದೆ ಶ್ರೀಮಂತ ಸಂವೇದನೆಗಳಿವೆ. ಪ್ರಾಮಾಣಿಕ ಸೇವೆ ಸಲ್ಲಿಸಿದ್ದಕ್ಕೆ ಬಡ್ತಿಯಾಗಿದ್ದು. ಕಚೇರಿಗೆ ಹಿರಿಯ ಕವಿಯೊಬ್ಬರು ಅಚಾನಕ್ಕಾಗಿ ಆಗಮಿಸಿ ಬೆನ್ನು ತಟ್ಟಿದ್ದು. ಅಧಿಕೃತ ಸಿಂಗಾಪುರ ಪ್ರವಾಸಕ್ಕೆ ಹೋದಾಗ ಅಲ್ಲಿನ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು... ಇದೇ ಕೋಟು ತೊಟ್ಟಿದ್ದಾಗಲೇ! ಹುಡುಗರೊಂದಿಗೆ ಏಕಿನ್ನು ಭಿನ್ನಾಭಿಪ್ರಾಯ. ಸೋತುಬಿಡೋಣ ಅನ್ನಿಸಿತು ಅಜ್ಜನಿಗೆ. ಆದರೆ ಸಂವೇದನೆಯನ್ನೂ ಉಳಿಸಿಕೊಳ್ಳಬೇಕು. ಉಪಾಯ ಹೇಗೆ? ಪ್ರತಿದಿನ ಹಾಲು ತರುವ ಈರಪ್ಪನನ್ನು ಅಜ್ಜ ಮಹಡಿ ಮೇಲಕ್ಕೆ ಕರೆದು ಹೇಳಿದ್ದು; 'ಈರ, ತಗೊ, ಹಳೆಯ ಕೋಟೆಂದು ಬೇಜಾರು ಬೇಡ. ಚಳಿಯಲ್ಲಿ ಮನೆಮನೆಗೆ ಹಾಲು ತರುತ್ತೀಯ. ಇದನ್ನು ಹಾಕಿಕೊಂಡು ಬರುವುದನ್ನು ಮರೆಯಬೇಡ. ನಾನದನ್ನು ನಿತ್ಯ ನೋಡಬೇಕು...'.
- ಬಿಂಡಿಗನವಿಲೆ ಭಗವಾನ್