ನಿಮ್ ಜತೆ ನಾವು

ನಿಮ್ ಜತೆ ನಾವು
Updated on: 

ಮನುಷ್ಯ ಸಂಘಜೀವಿ. ಅವನು ಒಂಟಿಯಾಗಿ ಜೀವಿಸಲಾರ. ತನ್ನ ಸುಖ ದುಃಖವನ್ನು ಹೇಳಿಕೊಳ್ಳಲು, ಮಾತನಾಡಲು ಜನರು ಬೇಕು. ಹಿಂದೆ ಅವಿಭಕ್ತ ಕುಟುಂಬದಲ್ಲಿ ಈ ಸಮಸ್ಯೆ ಇರಲಿಲ್ಲ. ಒಟ್ಟು ಕುಟುಂಬದ ಕೆಲಸಗಳಲ್ಲಿ ಹೊತ್ತುಹೋದುದೇ ತಿಳಿಯುತ್ತಿರಲಿಲ್ಲ. ಕಷ್ಟ ಸುಖಗಳಲ್ಲಿ ಒಬ್ಬರಿಗೊಬ್ಬರು ಆಸರೆ ಇರುತ್ತಿತ್ತು.
ಈಗ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಇದ್ದ ಒಂದೆರಡು ಮಕ್ಕಳು ಉದ್ಯೋಗ ಅರಸಿ ನಗರ, ವಿದೇಶವಾಸಿಗಳಾಗಿದ್ದಾರೆ. ಮನೆಯಲ್ಲಿ ಇಳಿವಯಸ್ಸಿನ ತಂದೆ ತಾಯಿ ಮಾತ್ರ. ಎಷ್ಟೋ ಕುಟುಂಬಗಳಲ್ಲಿ ಕೇವಲ ಒಬ್ಬರು ಮಾತ್ರ ಸ್ವಂತ ಮನೆ, ಕೈತುಂಬಾ ಹಣ ಇದ್ದರೂ ಒಂಟಿ ಬದುಕು ಅನಿವಾರ್ಯವಾಗುತ್ತಿದೆ.
ಇಂಥ ಹಿರಿಯರ ಬದುಕಿನಲ್ಲಿ ಸ್ವಲ್ಪವಾದರೂ ನಗುಮೂಡಿಸಲು ಸ್ಥಾಪಿತವಾದ ಸಂಸ್ಥೆ ಡಿಗ್ನಿಟಿ ಫೌಂಡೇಷನ್. ಇದೊಂದು ಸರ್ಕಾರೇತರ ಸಂಸ್ಥೆ (ಎನ್‌ಜಿಒ). ಸುಮಾರು ಹದಿನೆಂಟು ವರ್ಷಗಳ ಹಿಂದೆ ಮುಂಬೈನಲ್ಲಿ ಆರಂಭವಾದ ಈ ಸಂಸ್ಥೆಯ ಶಾಖೆಗಳು ಕೋಲ್ಕತಾ, ಚೆನ್ನೈ, ಪುಣೆ, ಗೋವಾ ಮತ್ತು ಬೆಂಗಳೂರಿನಲ್ಲಿದೆ. ಡಿಗ್ನಿಟಿ ಫೌಂಡೇಷನ್ ಬೆಂಗಳೂರಿನಲ್ಲಿ ಪ್ರಾರಂಭವಾಗಿ ಏಳು ವರ್ಷಗಳೇ ಕಳೆದಿವೆ. ಬೆಂಗಳೂರಿನ ವಿದ್ಯಾರಣ್ಯಪುರ, ವಿಜಯನಗರ, ಹೆಬ್ಬಾಳ, ಹಲಸೂರು, ಜೆ.ಪಿ. ನಗರ ಮತ್ತು ಜಯನಗರದಲ್ಲಿ ಇದರ ಶಾಖೆಗಳಿವೆ.
50 ವರ್ಷ ದಾಟಿದವರು ಈ ಸಂಸ್ಥೆಯ ಸದಸ್ಯರಾಗಬಹುದು. ಸದಸ್ಯತ್ವದ ಶುಲ್ಕ ವರ್ಷಕ್ಕೆ 1200 ರುಪಾಯಿ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 4-6 ಗಂಟೆಯವರೆಗೆ ಇಲ್ಲಿಗೆ ಬರಬಹುದು. ಒಂದೇ ವಯಸ್ಸಿನವರೊಂದಿಗೆ ಬೆರೆತು ಕುಳಿತು ಮಾತನಾಡಬಹುದು. ಕಷ್ಟ-ಸುಖ ಹಂಚಿಕೊಳ್ಳಬಹುದು. ಕ್ರೀಡಾಸಕ್ತರಿಗೆ ಶಟಲ್‌ಕಾಕ್, ಬ್ಯಾಡ್ಮಿಂಟನ್, ಕೇರಂ, ಚೆಸ್ ಮುಂತಾದ ಆಟಗಳಿವೆ. ಸಂಗೀತಾಸಕ್ತರು ಭಾವಗೀತೆ ಅಥವಾ ದೇವರನಾಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಇದ್ಯಾವುದೂ ಬೇಡವೆಂದರೆ ಬಿಸಿಬಿಸಿಯಾಗಿ ಕಾಫಿ ಕುಡಿಯುತ್ತಾ ಇತರ ಸದಸ್ಯರೊಂದಿಗೆ ಹರಟಬಹುದು. ಈ ಸಂಸ್ಥೆಯ ಸದಸ್ಯರಾಗಲು ಜಾತಿ, ಮತ, ಹೆಣ್ಣು, ಗಂಡು ಎಂಬ ಯಾವ ಭೇದವೂ ಇಲ್ಲ. ಪ್ರತಿ ತಿಂಗಳ ಕೊನೆಯ ದಿನ ಆ ತಿಂಗಳಿನಲ್ಲಿ ಹುಟ್ಟಿದವರ ಹುಟ್ಟುಹಬ್ಬ ಆಚರಿಸುತ್ತಾರೆ.
'ವಿಶ್ವ ಹಿರಿಯರ ದಿನ'ವನ್ನು ಇಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ತಿಂಗಳ 6ನೇ ತಾರೀಕು ರೇಶನ್ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದರೆ, ಅವತ್ತು ಎಲ್ಲ ಸದಸ್ಯರೂ ಮನೆಯಿಂದ ತಮಗೆ ಇಷ್ಟಬಂದ ತಿನಿಸುಗಳನ್ನು ಮಾಡಿಕೊಂಡು ಬಂದು, ಹಂಚಿಕೊಂಡು ತಿನ್ನುತ್ತಾರೆ.
ಮನೆಯಲ್ಲಿ ತಮ್ಮನ್ನು ಕೇಳುವವರಿಲ್ಲ, ಮಾತನಾಡಿಸುವವರಿಲ್ಲವೆಂದು ಬೇಸರಿಸಿಕೊಳ್ಳುವ ಬದಲು ನಿತ್ಯ ಸಂಜೆ ಇಲ್ಲಿಗೆ ಬಂದು ಒಬ್ಬರಿಗೊಬ್ಬರು ಮನಸ್ಸಿನ ಭಾವನೆಗಳನ್ನು ಹಂಚಿಕೊಂಡು ಹಗುರ ಮನಸ್ಸಿನಿಂದ ಮನೆಗೆ ಹೋಗಬಹುದು.
'ನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೆ ಒಬ್ಬಳೇ ಮನೆಯಲ್ಲಿದ್ದು ತುಂಬಾ ಬೇಜಾರಾಗ್ತಿತ್ತು. ಕೆಲಸದಿಂದ ಬಂದ ಮಗ-ಸೊಸೆಗೆ ಆಯಾಸವಾಗಿರುತ್ತೆ. ನನ್ನ ಹತ್ತಿರ ಮಾತನಾಡಲಿಕ್ಕೆ ಅವರಿಗೆ ಸಮಯ ಇರೋದಿಲ್ಲ. ಈ ಸಂಸ್ಥೆಯ ಸದಸ್ಯಳಾದ ಮೇಲೆ ದಿನಾ ಸಂಜೆ 4 ಗಂಟೆ ಯಾವಾಗ ಆಗುತ್ತೋ ಅಂತ ಕಾಯ್ತಿರ್ತೇನೆ. ಒಂದೇ ವಯಸ್ಸಿನವರು ಒಟ್ಟಿಗೆ ಸೇರ್ತೇವೆ, ಕಷ್ಟ-ಸುಖ ಹಂಚಿಕೊಳ್ತೇವೆ. ಎಲ್ಲರಿಗೂ ನಮ್ಮ ಹಾಗೆ ಸಮಸ್ಯೆ ಇದೆ ಅಂತ ಗೊತ್ತಾದಾಗ ನಮ್ಮ ಬೇಸರ ಕಡಿಮೆಯಾಗುತ್ತೆ'- ಹಿರಿಯ ಸದಸ್ಯೆಯೊಬ್ಬರ ಮನದಾಳದ ಮಾತುಗಳಿವು.
ಈ ಸಂಸ್ಥೆಯ ಸದಸ್ಯರಾದವರಿಗೆ ಆಸ್ಪತ್ರೆಗಳಲ್ಲಿ ಪಡೆಯುವ ವೈದ್ಯಕೀಯ ಸೌಲಭ್ಯಗಳಲ್ಲಿ ರಿಯಾಯಿತಿ ಸಿಗುತ್ತದೆ. ಕಾನೂನು ಸಲಹೆ ಪಡೆಯಬೇಕಾದಲ್ಲಿ ಇಲ್ಲಿ ವಕೀಲರ ತಂಡವಿದೆ. ಆರೋಗ್ಯ ವಿಮೆ ಮಾಡಿಸಲು ಏಜೆಂಟರನ್ನು ಹುಡುಕಿಕೊಂಡು ಹೋಗಬೇಕಾದ ಅಗತ್ಯವಿಲ್ಲ. ಹಿರಿಯ ನಾಗರಿಕರ ಕಾರ್ಡ್ ಮಾಡಿಸಲು ಪರದಾಡಬೇಕಾಗಿಲ್ಲ. ಸಂಸ್ಥೆಯವರೇ ಇದನ್ನು ಮಾಡಿಸಿಕೊಡುತ್ತಾರೆ. ಖಿನ್ನತೆಗೊಳಗಾದ ಹಿರಿಯರಿಗೆ ಇಲ್ಲಿ ಕೌನ್ಸೆಲಿಂಗ್ ಕೂಡ ಮಾಡಲಾಗುತ್ತದೆ.
ಅನಾರೋಗ್ಯದಿಂದ ಸಂಸ್ಥೆಗೆ ಬರಲು ಸಾಧ್ಯವಾಗದ ಸದಸ್ಯರ ಮನೆಗೆ (ಅವರು ಬಯಸಿದಲ್ಲಿ) ಫೌಂಡೇಷನ್‌ನ ಕಾರ್ಯಕರ್ತರು ಬರುತ್ತಾರೆ. ಎರಡು ಗಂಟೆ ಸದಸ್ಯರೊಂದಿಗೆ ಮನೆಯಲ್ಲಿದ್ದು ಮಾತನಾಡಿ, ಅವರ ಮನಸ್ಸಿಗೆ ಖುಷಿ ಕೊಡುವ, ಉಲ್ಲಾಸ ತುಂಬುವ ಪ್ರಯತ್ನ ಮಾಡುತ್ತಾರೆ.
ಒಟ್ಟಾರೆ, ಕುಟುಂಬದಲ್ಲಿ ತಮಗೆ ಗೌರವ ಇಲ್ಲ, ತಮ್ಮ ಮಾತಿಗೆ ಮನ್ನಣೆ ಇಲ್ಲ, ತಮ್ಮನ್ನು ಕೇಳುವವರಿಲ್ಲ ಎಂದು ಹಿರಿಯರು ಕೊರಗುತ್ತ ಕೂರುವ ಬದಲು 'ಡಿಗ್ನಿಟಿ ಫೌಂಡೇಷನ್‌'ನ ಸದಸ್ಯರಾದರೆ, ಡಿಗ್ನಿಫೈಡ್ ಆಗಿ ನಿತ್ಯ ಸಂಸ್ಥೆಗೆ ಬಂದು ಹೋಗಿ ಉತ್ಸಾಹದಿಂದ ಜೀವನ ಸಾಗಿಸಲು ಸಾಧ್ಯ. ಡಿಗ್ನಿಟಿ ಫೌಂಡೇಷನ್ (ಜಯನಗರ)- 808-41511307.

- ಶ್ರೀದೇವಿ ರಾಜನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com