

ಶೈಶವದಲ್ಲಿ ಅಪ್ಪ- ಅಮ್ಮಂದಿರ ಅನುರಾಗದಲ್ಲಿ
ಬಾಲ್ಯದಲ್ಲಿ ಆಟ- ಪಾಠಗಳಲ್ಲಿ ಮೈಮರೆತೆವು
ವಿದ್ಯಾರ್ಥಿಗಳಾಗಿದ್ದಾಗ ರ್ಯಾಂಕಿಗಾಗಿ
ಹಗಲೂ- ರಾತ್ರಿ ಅಭ್ಯಾಸನಿರತರಾದೆವು
ಹರೆಯದಲ್ಲಿ ಸಂಪ್ರದಾಯದಂತೆ ಪಾಣಿಗ್ರಹಣ ಮಾಡಿ
ಮೂವತ್ತರ ಹೊತ್ತಿಗೆ ಮುದ್ದಾದ ಮಕ್ಕಳ ಪಡೆದು
ಆನಂದ ಸಾಗರದಲಿ ತೇಲಾಡಿದೆವು
ನಲವತ್ತರಲ್ಲಿ ದುಡಿಮೆಯ ಹಳವಂಡದಲ್ಲಿ ಮುಪ್ಪಾದೆವು
ಐವತ್ತರಲ್ಲಿ ಮಕ್ಕಳ ಮುಂದಿನ ಬದುಕ ರೂಪಿಸಲು ಹೆಣಗಾಡಿದೆವು
ಅರವತ್ತರಲ್ಲಿ ಆಸೆಗಳ ಏಣಿಯೇರಿ ಏರಿ ಆಯಾಸಗೊಂಡೆವು
ಉಳಿತಾಯ ಮಾಡಿದ್ದೆಲ್ಲ ಹೆಂಡತಿ-ಮಕ್ಕಳ ಪಾಲಾಯಿತು
ಹೆತ್ತ ಮಕ್ಕಳ ಮಾತು ಅಪರೂಪವಾಯಿತು
ಅವರ ಮೇಲಿರಿಸಿದ ಭರವಸೆಗಳು ಮಾಯವಾದವು
ಆರ್ಥಿಕ ಪರಾಧೀನತೆಯಿಂದ ಅರ್ಧಾಂಗಿಯೂ ಬೇಸರಗೊಂಡಳು
ಸಪ್ತಪದಿಯ ಬಾಂಧವ್ಯವೂ ಹಂಗಾಯಿತು
ಕರುಳ ಕುಡಿಗಳು ಕರುಳ ಕತ್ತರಿಸಿ ದೂರ ಸರಿದರು
ಈ ಮುದುಕರ ಬದುಕು ದಂಡವೆಂದರು
ನಮ್ಮನ್ನು ಗುಜರಿ ವಸ್ತುಗಳೆಂದು
ವೃದ್ಧಾಶ್ರಮಕೆ ಸೇರಿಸಿದರು.
ಸರ್ಕಾರಿ ಕಚೇರಿಯಲಿ ನಮ್ಮ ಹೆಸರಿಲ್ಲ
ಬಸ್-ರೈಲುಗಳಲ್ಲಿ ನಮಗೆ ಮೀಸಲಿಲ್ಲ
ಸರ್ಕಾರದ ಆಸ್ಪತ್ರೆಯಲ್ಲಿ ಅಸಡ್ಡೆ ನಮದಾಯಿತು
ನಮ್ಮನ್ನು ನಾವೇ ಸಂತೈಸಬೇಕು
ನಮ್ಮನ್ನು ನಾವೇ ಗೌರವಿಸಬೇಕು
ಈ ಗೌರವವೇ ನಮ್ಮ ಬದುಕಿಗೆ ಅಭಯವಾಗಬೇಕು
- ಗುರುಮೂರ್ತಿ ಪೆಂಡಕೂರು