ಪ್ರಯೋಗ ಕೃಷಿಕ

ಪ್ರಯೋಗ ಕೃಷಿಕ
Updated on: 

ದಿನಪತ್ರಿಕೆಗಳು ಕೃಷಿ ಪುರವಣಿಗಳನ್ನು ನೀಡಿದರೂ ಅದನ್ನು ಓದಿ, ರದ್ದಿ ಮಾಡುವವರೇ ಹೆಚ್ಚು. ಆದರೆ ಕೃಷಿ ಪುರವಣಿಗಳನ್ನು ಸಂಗ್ರಹಿಸಿ ಉತ್ತಮ ಸಲಹೆ ಮಾಹಿತಿಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಿಕೊಳ್ಳುವ ಕೃಷಿಕರು ನಮ್ಮಲ್ಲಿಯೇ ಇದ್ದು ಎಲೆಮರೆಯ ಕಾಯಿಯಂತೆ ಸಾಧನೆ ಮಾಡುತ್ತಲೇ ಇರುತ್ತಾರೆ. ಅಂಥವರಲ್ಲಿ ಶಿವರಾಮ ಹೆಗಡೆ ಒಬ್ಬರು.
ಉ. ಕ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಂಡಿಮನೆಯ ನಿವಾಸಿಯಾದ ಶಿವರಾಮ ನಾರಾಯಣ ಹೆಗಡೆ ಪ್ರಗತಿಪರ ಕೃಷಿಕರು. ಕಳೆದ 4 ದಶಕದಿಂದ ಪೂರ್ಣಾವಧಿ ಕೃಷಿಯಲ್ಲಿಯೇ ತೊಡಗಿಸಿಕೊಂಡು, ನೆಮ್ಮದಿಯಿಂದ ಜೀವನ ನಡೆಸುತ್ತಿರುವ ಅವರು ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದವರು. ಅನೇಕ ವಿಷಯಗಳನ್ನು ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನು ನೋಡಿ ಅದರ ಬಗ್ಗೆ ಪೂರಕ ಮಾಹಿತಿಗಳನ್ನು ಪಡೆದು ತಮ್ಮ ಕೃಷಿ ಭೂಮಿಯಲ್ಲಿ ಅನುಷ್ಠಾನ ಮಾಡಿಕೊಂಡಿರುವ ಉತ್ಸಾಹಿ ಕೃಷಿಕರಿವರು.
ಶಿವರಾಮ ಹೆಗಡೆ ಕೃಷಿ ಸಾಗುವಳಿ ಜತೆಗೆ ವಿವಿಧ ಪತ್ರಿಕೆಗಳಲ್ಲಿ ಬರುವ ಕೃಷಿ ಲೇಖನಗಳನ್ನು ಸಂಗ್ರಹಿಸುವುದರಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು 2001ರಿಂದ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಕೃಷಿ ಪುರವಣಿ ಮತ್ತು ಇನ್ನಿತರ ವಿಶೇಷ ಪುರವಣಿಗಳನ್ನು ಸಂಗ್ರಹಿಸಿ ಸುವ್ಯವಸ್ಥಿತವಾಗಿ ಪುಸ್ತಕ ರೂಪದಲ್ಲಿ ಇಟ್ಟುಕೊಂಡಿರುವುದು ಗಮನಾರ್ಹ.
ಅವರು ಎರೆಹುಳ ಕೊಬ್ಬರ ಮತ್ತು ದಡ್ಡಿಗೊಬ್ಬರ ನೀರಾವರಿ ವ್ಯವಸ್ಥೆ, ಜೇನು, ಕಬ್ಬು, ವೀಳ್ಯದ ಎಲೆ, ಗೋವು-ಪಂಚಗವ್ಯ, ಹುಲ್ಲು, ಹಣ್ಣು, ತೆಂಗು, ದ್ರಾಕ್ಷಿ-ಶೇಂಗಾ, ಹೂವು, ಮಾವು, ಬಾಳೆ, ಭತ್ತ, ಔಷಧಿ ಸಸ್ಯ, ಇಂಧನ, ಸಸ್ಯಾಭಿವೃದ್ಧಿ, (ನರ್ಸರಿ) ಮಾಡುವುದು, ಕೃಷಿಯ ಕಷ್ಟ-ಸುಖ, ರಾಸಾಯನಿಕ ಗೊಬ್ಬರ, ಕಾಯಿಪಲ್ಯೆ, ಅಡಕೆ  ಹೀಗೆ ವಿಭಿನ್ನ ವಿಷಯಗಳಲ್ಲಿ ಮೂಡಿಬರುವ ಸಮಗ್ರ ಲೇಖನಗಳನ್ನು ಪ್ರತ್ಯೇಕವಾಗಿ ಪುಸ್ತಕ ಮಾಡಿಟ್ಟಿದ್ದಾರೆ.
'ಈ ಕೃಷಿ ಲೇಖನಗಳನ್ನು ಸಂಗ್ರಹಿಸುವುದರಿಂದ ನನ್ನ ಕೃಷಿ ಸುಧಾರಣೆಗೆ ಅನುಕೂಲವಾಯಿತು. ಲೇಖನಗಳಲ್ಲಿ ಬರುವ ಹೊಸ ಹೊಸ ವಿಚಾರಗಳನ್ನು ಓದಿ ಮನನ ಮಾಡಿಕೊಂಡು ಉತ್ತಮ ಕೃಷಿ ಮಾಡುತ್ತಿರುವ ರೈತರನ್ನು ಸಂಪರ್ಕಿಸಿ, ಅವರಿಂದ ಸಮಗ್ರ ಮಾಹಿತಿ ಪಡೆದುಕೊಂಡು ಕೃಷಿ ಮಾಡಿದ್ದೇನೆ' ಎಂದು ಶಿವರಾಮ ಹೆಗಡೆ ನುಡಿಯುತ್ತಾರೆ.
ಪತ್ರಿಕೆಯಲ್ಲಿ ಎರೆಹುಳು ಗೊಬ್ಬರದ ಬಗ್ಗೆ ಬಂದ ವಿಷಯಗಳನ್ನು ಓದಿದಾಗ ಅದನ್ನು ತಯಾರಿಸಲು ಆಸಕ್ತಿ ವಹಿಸಿದೆ. ಆಮೇಲೆ ಆ ಗೊಬ್ಬರವನ್ನು ತಯಾರಿಸುವ ರೈತರನ್ನು ಸಂಪರ್ಕಿಸಿ ಮಾಹಿತಿ ಪಡೆದು, ತೋಟದಲ್ಲಿ ಸಿಗುವ ಕಚ್ಚಾ ಸಾಮಗ್ರಿಯಿಂದಲೇ ಗೊಬ್ಬರ ತಯಾರಿಸಿದೆ. ಹೀಗೆ ಸಿದ್ಧಪಡಿಸಿದ ಎರೆ ಗೊಬ್ಬರವನ್ನು ತಮ್ಮ ತೋಟಕ್ಕೆ ಹಾಕಿ ಹೆಚ್ಚಾದ ಎರೆಗೊಬ್ಬರವನ್ನು ಮಾರಾಟ ಮಾಡಿ ಸುಮಾರು 70 ಸಾವಿರ ರು. ಗಳಿಸಲು ಸಾಧ್ಯವಾಯಿತು. ಇದಕ್ಕೆಲ್ಲ ಪತ್ರಿಕೆಯಲ್ಲಿ ಬಂದಿರುವ ಲೇಖನವೇ ನನಗೆ ಸ್ಫೂರ್ತಿ ಎಂದು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ ಶಿವರಾಮ ಹೆಗಡೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com