ಮಾತು-ಕತೆ

ಮಾತು-ಕತೆ
Updated on: 

ಮುಸ್ಸಂಜೆ ಹೊತ್ತಲ್ಲಿ
ಆಕಾಶಕ್ಕೆ ಮುಖಾಮುಖಿಯಾದ
ಇಬ್ಬರು ವೃದ್ಧೆಯರ ಭೆಟ್ಟಿ

ಅಕಸ್ಮಾತ್ತಾಗಿ
ನಾಲ್ಕು ಕಣ್ಣು ಒಂದಾಗಿ, ಹೊಳೆಯಾಯ್ತು
ಗಳಗಳನೆ ಕಣ್ಣೀರು
ಎಷ್ಟೊ ಹೊತ್ತು ಮೌನ
ಶುರು ಮಾತು

ನೀನು ಇನ್ನೂ ಹೋಗಲಿಲ್ಲವೆ?
ಕರೆದರಲ್ಲವೆ? ಪಾಪಿಗಳು ನಾವು,
ಕರೆವವರಿಲ್ಲ ಏನೇನು ನೋಡಬೇಕಾಗಿದೆಯೋ?
ಮೂರು ಸಲ ಬಾಗಿಲು ತಟ್ಟಿ ಬಂದೆ
ತೆರೆಯಲಿಲ್ಲ ಆತ
ಯಾರಿಗೂ ಬೇಡವಾಗಿದೆ ಜೀವ
ದಿನಾ ಕೈ ಮುಗಿವೆ, ಕರೆಸಿಕೋ,
ಬೆಳಗಾಯಿತು, ಸಂಜೆಯಾಯಿತು
ರಾತ್ರಿ ಒಂದು ನರಕ
ಹುಚ್ಚು ಕನಸುಗಳು ನನ್ನವರು ಕರೆದಂತೆ
ಏನೇನೋ ತಿನ್ನಬೇಕು ಅನ್ನಿಸುತ್ತೆ
ಏನು ಆಸೆಯೋ ಮುದುಕಿಗೆ, ಬೈತಾರೆ
ತಿನ್ನುವ ಚಟವೆಂದು
ಹರಿತ್ತು ಇಲ್ಲ, ಹಳದಿಯಾಗಿದೆ ಜೀವ
ಸಾಕಾಗಿ ಹೋಗಿದೆ
ನಮ್ಮನ್ನು ಆತ ಯಾಕೆ ಕರೆಯುತ್ತಿಲ್ಲ?
ನಮ್ಮಿಂದ ಏನಾಗಬೇಕಾಗಿದೆ?
ಮಂತ್ರಿಯೋ ರಾಷ್ಟ್ರಪತಿಯೋ ಆಗಬೇಕೆ?
ಏನೇನು ನೋಡಬೇಕೋ?
ಪ್ರಳಯ, ಸುನಾಮಿ, ಮೂರನೇ ಮಹಾಯುದ್ಧ
ಸಾಕಪ್ಪಾ ಸಾಕು, ಕೊಡಬಾರದೆ ಸಾವು?

ಹಾ! ನಿನಗೇನಾದರೂ ಆಸೆ ಉಳಿದಿತ್ತಾ?
ಅವರ ಜತೆಯೇ ಹೋದವಲ್ಲ, ಹೌದಲ್ಲ!
ಬರೆಯಲು ಕೈ ನಡುಗುತ್ತೆ
ಓದಲು ಅಕ್ಷರ ಕಾಣದಾಗಿದೆ
ಕೂಳು ದಂಡ!

ಅಷ್ಟರಲ್ಲಿ ಹೊರಗೆ ಗಲಾಟೆ
ಅಪಘಾತ ಬೈಕುಗಳದ್ದು, ಎರಡು ಸಾವು.
ಅದನ್ನು ನಮಗಾದರೂ ಕೊಡಬಾರದಿತ್ತೆ?
ಇವರ ಅಳಲು

ಇನ್ಯಾವಾಗ ಭೇಟಿ ಮತ್ತೆ?
ಬಹುಶಃ ಸ್ವರ್ಗದಲ್ಲೋ, ನರಕದಲ್ಲೋ
ಹತ್ತು ವರುಷಗಳ ಹಿಂದೆ ಹೀಗೆಯೇ ಹೇಳಿದ್ದೆ
ಕೊನೆಯ ಪ್ರಯತ್ನ
ಕೈಮುಗಿದು ಧನ್ಯವಾದ ಅರ್ಪಿಸೋಣ
ಇಷ್ಟು ವರ್ಷ ಜಗತ್ತು ನೋಡಲು
ಅವಕಾಶ ಇತ್ತಿದ್ದಕ್ಕೆ.
ನೂರು ಸಲ ಹೇಳೋಣ
ಕರೆಸಬಹುದು, ಆತ ಸರಿ, ಸರಿ.

ಮಾತೆಲ್ಲ ಮುಗಿದಿದೆ
ಮಾತುಗಳು, ಕತೆಯಾಗಿವೆ
ಎಲೆಗಳೆಲ್ಲ ಉದುರಿದೆ
ಶಿವನ ಪಾದ ಸೇರಿದೆ
ಶರತ್ಕಾಲ ಮುಗಿಯುತ್ತಾ
ವಸಂತ ಬಂದಿದೆ
ಹೊಸ ಚಿಗುರು
ವೃದ್ಧೆಯರಲ್ಲಿ ಹೊಸ ಜೀವಕ್ಕೆ
ತನು ನೀಡಿ
ತಟಸ್ಥವಾಗಿ ಇಳೆಯ
ಆಲಂಗಿಸಿದ್ದಾರೆ
ಅಂಗಳ ತುಂಬಾ
ನಿನ್ನೆಯದೇ
ಮಾತು-ಕತೆ

- ಊರ್ಮಿಳಾ ರಾವ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com