Why ವಯಾಗ್ರ?

Why ವಯಾಗ್ರ?
Updated on: 

ವಯಸ್ಸಾದಂತೆ ರಕ್ತನಾಳಗಳ ಒಳಮೈಯ್ಯಲ್ಲಿ ರಕ್ತದೊಂದಿಗೆ ಸಂಚರಿಸುತ್ತಿರುವ ಕೊಬ್ಬು ಶೇಖರಗೊಳ್ಳತೊಡಗುತ್ತದೆ. ಹೀಗಾಗಿ ರಕ್ತನಾಳಗಳ ಒಳಾವರಣ ಚಿಕ್ಕದಾಗುವುದು. ಪರಿಣಾಮ, ರಕ್ತದ ಸರಬರಾಜು ಅಂಗಾಂಗಗಳಿಗೆ ಕುಂಠಿತಗೊಳ್ಳುವುದು. ಜೊತೆಗೆ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳ ಪ್ರಮಾಣದಲ್ಲೂ ಇಳಿಮುಖವಾಗುವುದು.
ಲೈಂಗಿಕಾಸಕ್ತಿಗೆ ಸಂಬಂಧಪಟ್ಟ ರಸದೂತ ಟೆಸ್ಟೋಸ್ಟಿರೋನ್ ಸ್ರವಿಕೆಯೂ ಕುಗ್ಗುವುದು. ಒಂದು ಸಂಶೋಧನೆಯ ಪ್ರಕಾರ, ವಯಸ್ಸಾದ ನಂತರ ಕಾಡುವ ಸುಸ್ತು, ಖಿನ್ನತೆ, ಲೈಂಗಿಕ ನಿರಾಸಕ್ತಿಗೆ ಟೆಸ್ಟೋಸ್ಟಿರೋನ್ ಕಡಿಮೆಯಾಗುವುದೇ ಕಾರಣ. ಮತ್ತು ಅದನ್ನು ಪುರುಷ ಮುಟ್ಟು ನಿಲ್ಲುವಿಕೆ ಎಂದು ಪರಿಗಣಿಸಲಾಗುತ್ತದೆ.
ಮಾಂಸಖಂಡಗಳಿಗೆ ರಕ್ತ ಪೂರೈಕೆ ಕಡಿಮೆಯಾದಾಗ ಗಡಸುತನ ಕಡಿಮೆಯಾಗುವುದು. ಇದಕ್ಕೆ ಗಂಡಸರ ಲೈಂಗಿಕ ಅಂಗವೂ ಹೊರತಾಗಿಲ್ಲ. ಹೀಗಾಗಿ ನಲವತ್ತರ ನಂತರ ರಕ್ತ ಪೂರೈಕೆ ಮತ್ತು ಟೆಸ್ಟೋಸ್ಟಿರಾನ್ ಸ್ರವಿಕೆ ಕಡಿಮೆಯಾಗುವದರ ಸಮ್ಮೀಕೃತ ಪರಿಣಾಮವಾಗಿ ಲೈಂಗಿಕಾಸಕ್ತಿ ಕುಗ್ಗುವುದು. ಆದರೆ ಚಿಂತಿಸದಿರಿ, ಹುಣಸೆಮರ ಮುಪ್ಪಾದರೆ ಹುಳಿ ಮುಪ್ಪಾಗಬೇಕಿಲ್ಲ. ಈ ಏರುಪೇರುಗಳನ್ನು ಸರಿಪಡಿಸುವ ಶಕ್ತಿ ವ್ಯಾಯಾಮಕ್ಕಿದೆ.
ವ್ಯಾಯಾಮದಿಂದ ಲೈಂಗಿಕಾಸಕ್ತಿ
ವ್ಯಾಯಾಮದಿಂದ ರಕ್ತದ ಸರಬರಾಜು, ರಸದೂತಗಳ ಸ್ರವಿಕೆ ಹೆಚ್ಚುವುದು. ಇದು ನೈಸರ್ಗಿಕವಾಗಿ ನಡೆಯುವುದರಿಂದ, ಯಾವುದೇ ಅಡ್ಡಪರಿಣಾಮಗಳು ಕಂಡುಬರುವುದಿಲ್ಲ. ಇದೇ ಪರಿಣಾಮಗಳನ್ನು ಔಷಧ ಸೇವನೆಯಿಂದ ಪಡೆಯಬಹುದಲ್ಲಾ ಎಂದು ನೀವು ಕೇಳಬಹುದು. ಆದರೆ ನೆನಪಿಡಿ, ಅಡ್ಡಪರಿಣಾಮ ಬೀರದ ಯಾವುದೇ ಔಷಧ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ!
60 ಸಂವತ್ಸರ ಕಳೆದ ಮೇಲೂ ಸಂಸಾರ ಸಾಗರದೊಳಗೆ ಈಜಿ (ಇಲ್ಲವೆ ಓಡಿ) ಜಯಿಸಬೇಕೆನ್ನುವವರು ದಿನವೂ ವ್ಯಾಯಾಮ ಮಾಡುತ್ತಿದ್ದರೆ ಯಾವ ವಯಾಗ್ರಾವೂ ಬೇಡ ಎಂದು ಬ್ರಿಟನ್ನಿನ ನ್ಯೂಕ್ಯಾಸ್ ವಿವಿಯ ತಜ್ಞರು ಹೇಳಿದ್ದಾರೆ.
ಈ ತಜ್ಞರು ತಮ್ಮ ಸಮೀಕ್ಷೆಗೆಂದು ಅರವತ್ತರ ಹರೆಯದ ಹತ್ತು ಅಜ್ಜಂದಿರನ್ನು ಓಟಕ್ಕೆ ಅಥ್ಲೆಟಿಕ್ ಕ್ಲಬ್‌ನಿಂದ  ಆಯ್ಕೆ ಮಾಡಿಕೊಂಡರು. ಅವರ ಜತೆ ಹೋಲಿಕೆ ಮಾಡಲೆಂದು (ಓಡುವ ಅಭ್ಯಾಸ ಇಲ್ಲದ, ಆದರೆ ಆರೋಗ್ಯ ಚೆನ್ನಾಗಿದ್ದ) ಇನ್ನೂ ಹತ್ತು ಹಿರಿಯ ನಾಗರಿಕರನ್ನು ಆರಿಸಿದರು. ಎರಡೂ ತಂಡಕ್ಕೆ ದಿನವೂ ವ್ಯಾಯಾಮ ಮಾಡಿಸಿದರು.
ವಾರದ ನಂತರ ಹಾರ್ಮೋನ್ ಮಟ್ಟ ಪರೀಕ್ಷಿಸಿದಾಗ, ಹಿಂದಿನಿಂದಲೂ ನಿಯಮಿತವಾಗಿ ವ್ಯಾಯಾಮ ಮಾಡಿದವರ ಸರಾಸರಿ ಗ್ರೋಥ್ ಹಾರ್ಮೋನ್ ಮಟ್ಟ ನಾಲ್ಕು ಪಟ್ಟು ಹೆಚ್ಚಾಗಿತ್ತು. ಅವರ ಟೆಸ್ಟೋಸ್ಟಿರಾನ್ ಪ್ರಮಾಣ (ಅಂದರೆ ಲೈಂಗಿಕ ಶಕ್ತಿ) ಕೂಡ ಶೇ.25ರಷ್ಟು ಹೆಚ್ಚಾಗಿತ್ತು. ಹೊಸದಾಗಿ ವ್ಯಾಯಾಮ ಆರಂಭಿಸಿದ ಹಿರಿಯರಲ್ಲಿ ಈ ಹಾರ್ಮೋನುಗಳ ಮಟ್ಟ ತುಸು ಮಾತ್ರ ಹೆಚ್ಚಾಗಿತ್ತು. ಅಂತೂ ನಿತ್ಯವೂ ವ್ಯಾಯಾಮ ಮಾಡುವವರು ಕುಣಿದಾಡುವಂತಿತ್ತು ಫಲಿತಾಂಶ.
ಅಯ್ಯೋ ಒಂದ್ನಿಮಿಷ, ಈಗಲೇ ಓಡಲು ಹೋಗಬೇಡಿ. ನಿಮ್ಮ ವೈದ್ಯರೊಡನೆ ಸಮಾಲೋಚಿಸಿ ಮುಂದುವರಿಯಿರಿ. ಹಾಗೇ ನಿಮ್ಮ ಸಂಗಾತಿಯ ಜತೆಗೂ ಒಮ್ಮೆ ಸಮಾಲೋಚಿಸಿ.

- ಡಾ. ಕರವೀರಪ್ರಭು ಕ್ಯಾಸಕೊಂಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com