

ಮಕ್ಕಳು ಮಾಡುವ ತಪ್ಪನ್ನು ತಿದ್ದಿ, ಬುದ್ಧಿ ಹೇಳಿ ಮುನ್ನಡೆಸುವವರು ಹಿರಿಯರು. ಅಂತಹವರು ಪ್ರತಿ ಮನೆಯಲ್ಲೂ ಇರಬೇಕು. ಆದರೆ, ಅಂತಹ ಹಿರಿಯರನ್ನು ವೃದ್ಧಾಶ್ರಮಗಳಿಗೆ ಅಟ್ಟುವ ಮಕ್ಕಳ ಸಂತತಿ ಹೆಚ್ಚುತ್ತಿದೆ. ಹೀಗೆ ಕುಟುಂಬ ಸದಸ್ಯರಿಂದ, ಮನೆಯಿಂದ ದೂರವಾಗುತ್ತಿರುವ ವೃದ್ಧರು ಅಲ್ಜೈಮರ್ ಎಂಬ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕುಟುಂಬ ಸದಸ್ಯರಿಂದ ದೂರವಾಗುತ್ತಿರುವ ಭಾವನೆ, ಆರೈಕೆ ಇಲ್ಲದಿರುವುದು, ಒಂಟಿತನದ ಮನೋಭಾವ ಹೆಚ್ಚಾದಂತೆ ಅಲ್ಜೈಮರ್ ಕಾಯಿಲೆಯ ಲಕ್ಷಣಗಳು ಕಾಣಿಸುತ್ತವೆ. ವೃದ್ಧಾಶ್ರಮಗಳಲ್ಲಿ ಹಿರಿಯರ ಆರೈಕೆಯಲ್ಲಿ ಪಳಗಿದವರ ಕೊರತೆ. ಇದನ್ನು ನೀಗಿಸಲೆಂದು ಪುಟ್ಟದೊಂದು ಪ್ರಯತ್ನ ಆರಂಭಿಸಿದೆ 'ನೈಟಿಂಗೇಲ್ಸ್'.
ನೈಟಿಂಗೇಲ್ಸ್ ಸ್ವಯಂ ಸೇವಾ ಸಂಸ್ಥೆ. ವಯೋವೃದ್ಧರನ್ನು ತಮ್ಮ ಕೊನೆಯ ದಿನಗಳಲ್ಲಿ ನೋಡಿಕೊಳ್ಳುವುದು ಹೇಗೆ? ಅವರ ಆರೋಗ್ಯ ಸಮಸ್ಯೆ ನಿರ್ವಹಿಸುವುದು ಹೇಗೆ ಎಂಬಿತ್ಯಾದಿ ವಿಚಾರಗಳ ಕುರಿತು ತರಬೇತಿ ನೀಡುತ್ತಿದೆ. ನೈಟಿಂಗೇಲ್ಸ್ ಸಂಸ್ಥೆಯ ಮುಖ್ಯಕಚೇರಿ ಬೆಂಗಳೂರಿನ ಆರ್.ಟಿ.ನಗರದಲ್ಲಿದೆ. ಬಾಣಸವಾಡಿಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಡಿಫೆನ್ಸ್ ಸಂಸ್ಥೆ ಸಹಭಾಗಿತ್ವದಲ್ಲಿ ತರಬೇತಿ ನೀಡಲಾಗುತ್ತದೆ. ಡಾ. ರಾಧಾ ಎಸ್.ಮೂರ್ತಿ ಹಾಗೂ ಡಾ. ಪ್ರೇಮ್ಕುಮಾರ್ ರಾಜ್ ಇದರ ಸಂಸ್ಥಾಪಕರು.
ಬೆಂಗಳೂರು, ಮುಂಬೈ, ಕೊಚ್ಚಿ ಸೇರಿದಂತೆ ದೇಶದ ವಿವಿಧ ಮಹಾನಗರಗಳಲ್ಲಿ ತರಬೇತಿ ಲಭ್ಯ. ಪ್ರತಿ ದಿನ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ತರಬೇತಿ ಇರುತ್ತದೆ. ಹಿರಿಯರ ಸಂರಕ್ಷಣೆ, ಸೇವೆಗೆ ಉಚಿತ ತರಬೇತಿ. 3 ಹಾಗೂ 6 ತಿಂಗಳ ತರಬೇತಿ ಕಾರ್ಯಕ್ರಮ ಇರುತ್ತದೆ. ತರಬೇತಿಗೆ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರತಿವರ್ಷ ಸುಮಾರು 60 ಮಂದಿ ತರಬೇತಿ ಪಡೆಯುತ್ತಾರೆ. ಆಸಕ್ತರು, ಹಿರಿಯರ ಸೇವೆ ಮಾಡಲು ಇಚ್ಛೆಯುಳ್ಳ 18-45 ವಯೋವಾನದವರು(ಗಂ/ಹೆ) ನೈಟಿಂಗೇಲ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು.
ತರಬೇತಿ ಪಡೆಯುವ ನಿರುದ್ಯೋಗಿಗಳಿಗೆ ಸಂಸ್ಥೆಯಿಂದಲೇ ಕೆಲಸ ಕೊಡಿಸಲಾಗುತ್ತದೆ. ಮನೆಯಲ್ಲಿರುವ ಹಿರಿಯರನ್ನು ನೋಡಿಕೊಳ್ಳಲು ಇಚ್ಛಿಸುವವರು ಸಹ ತರಬೇತಿ ಪಡೆಯಬಹುದು. 7000ದಿಂದ 10 ಸಾವಿರ ಸಂಬಳ ಸಿಗುತ್ತದೆ.
ಉದ್ದೇಶ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ವಿದ್ಯಾವಂತರು ಪೋಷಕರನ್ನು ಬಿಟ್ಟು ವಿದೇಶಗಳಿಗೆ ಹೋಗುವುದು ಹೆಚ್ಚಾಗುತ್ತಿದೆ. ಈ ವೇಳೆ ವಯಸ್ಸಾದ ದಂಪತಿ ಮನೆಯಲ್ಲಿ ಇಬ್ಬರೇ ಇರುತ್ತಾರೆ. ಇದರಿಂದ ದಿನ ಅವರು ಒಂಟಿಯಾಗುತ್ತಾರೆ. ಅಸಹಾಯಕರಾಗುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾಗ ಚಿಕಿತ್ಸೆಗೆ ಹೋಗುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಸುಮಾರು 15 ವರ್ಷಗಳ ಹಿಂದೆ ನೈಟಿಂಗೇಲ್ಸ್ ವೃದ್ಧರನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿತ್ತು. ಆದರೆ, ಅಂತವರಿಗೆ ಆಶ್ರಯ ಹೆಚ್ಚು ಅಗತ್ಯವಿದ್ದ ಕಾರಣ ಈ ರೀತಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ನೈಟಿಂಗೇಲ್ಸ್ನ ಮುಖ್ಯಸ್ಥರು. ಹೆಚ್ಚಿನ ಮಾಹಿತಿಗಾಗಿ 9243737217/26, www.nightingaleseldercare.com.
ಮನೆಯಿಂದ ಹೊರಬರುವ ಹಾಗೂ ವೃದ್ಧಾಶ್ರಮ ಸೇರುತ್ತಿರುವ ಹಿರಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ, ಅವರು ಅಲ್ಜೈಮರ್ಗೆ ತುತ್ತಾಗುತ್ತಿರುವ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಬಿದ್ದು ಹೋಗುವ ಮರಗಳಿಗೊಂದಿಷ್ಟು ಪ್ರೀತಿಯನ್ನು ಎರೆಯುವ ಸಣ್ಣ ಪ್ರಯತ್ನ ಇದು.
- ಡಾ.ರಾಧಾ ಎಸ್.ಮೂರ್ತಿ,
ಮುಖ್ಯಸ್ಥರು, ನೈಟಿಂಗೇಲ್ಸ್.
ಪ್ರೀತಿಯಿಂದ ವಂಚಿತರಾಗುವ ಪ್ರತಿಯೊಬ್ಬರಿಗೂ ಇಂತಹ ಕಾಯಿಲೆ ಕಾಣಿಸಿಕೊಳ್ಳುವುದು ಸಹಜ. ಆದರೆ, ಯುವಕ/ಯುವತಿಯರಿಗೆ ಈ ಕಾಯಿಲೆ ಕಡಿಮೆ. ಸಾಮಾನ್ಯವಾಗಿ ವಯೋವೃದ್ಧರನ್ನು ಎಲ್ಲರೂ ನಿರ್ಲಕ್ಷ್ಯಿಸುತ್ತಾರೆ. ಹಾಗಾಗಿ ಅವರಲ್ಲಿ ಇಂತಹ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
- ಡಾ. ಸೌಮ್ಯಾ ಹೆಗಡೆ
ಮನೋವೈದ್ಯರು.
- ಶಾಂತ ತಮ್ಮಯ್ಯ