

ಕಡ್ಡಿಯಂಥ ದೇಹ. ಲವಲವಿಕೆ ನಡಿಗೆ. ವಯಸ್ಸಾಗಲೇ 70ರ ಆಸುಪಾಸು. ಅಕ್ಷರ ಜ್ಞಾನದ ಸುಳಿವಿಲ್ಲದಿದ್ದರೂ ಲೆಕ್ಕದಲ್ಲಿ ಪಕ್ಕಾ. ಯಾರಿಗೂ ಎಂದಿಗೂ ಹೊರೆಯಾಗಬಾರದೆಂಬ ಆತ್ಮವಿಶ್ವಾಸ. ಅದಕ್ಕಾಗಿ ನೆಚ್ಚಿಕೊಂಡಿದ್ದು ಚುರುಮರಿ (ಮಂಡಕ್ಕಿ), ಅವಲಕ್ಕಿ ಮಾರುವ ಕಾಯಕ.
ಇದಿಷ್ಟು ಧಾರವಾಡದ ಮಲ್ಲಾರಿ ನಿಂಗಪ್ಪ ಲೋಂಡೆ ಜೀವನದ ಮೇಲ್ಪದರ. ಜೀವನದ ಸಂಧ್ಯಾಕಾಲದಲ್ಲಿ ತಾವು ಗಳಿಸಿದ, ಉಳಿಸಿದ ಹಣದಲ್ಲಿ ಹಾಯಾಗಿ ಊಟಮಾಡಿ ಸ್ನೇಹಿತರೊಂದಿಗೆ ಹರಟೆ ಹೊಡೆಯುವವರು, ತಮಗೆ ಮಕ್ಕಳಿದ್ದು ಯಾರೂ ನಮ್ಮನ್ನು ಕಾಳಜಿ ಮಾಡುತ್ತಿಲ್ಲ ಎಂಬ ಹತಾಶೆಯ ಮಾತುಗಳನ್ನು ಹೇಳುವವರು, ನಿವೃತ್ತಿ ವಯಸ್ಸಿನಲ್ಲಿ ಯಾವುದೇ ಕೆಲಸ ಮಾಡಲಾಗುವುದಿಲ್ಲ ಎಂದು ಕೈಚೆಲ್ಲಿ ಕೂರುವ ಇಂದಿನ ದಿನದಲ್ಲಿ ಲೋಂಡೆ ಮಾತ್ರ ಬೆವರು ಹರಿಸಿಯೇ ಜೀವನ ಹೊರೆಯುವ ಕಾಯಕಜೀವಿ.
ಧಾರವಾಡದ ಹೃದಯ ಭಾಗದಲ್ಲಿರುವ ಗಾಂಧಿಚೌಕ್ನ ದತ್ತಾತ್ರೇಯ ಮಂದಿರದ ಎದುರಿನ ಚಿಕ್ಕ, ಚೊಕ್ಕ ಮಂಡಕ್ಕಿ, ಅವಲಕ್ಕಿ ಅಂಗಡಿಯನ್ನು ಇವರೇ ನಡೆಸಿಕೊಂಡು ಹೋಗುತ್ತಾರೆ. ಅದೂ ಬರೋಬ್ಬರಿ 54 ವರ್ಷದಿಂದ! ಇವರಿಗೆ ಓದಲು, ಬರೆಯಲು ಬರುವುದಿಲ್ಲ. ಆದರೆ, ಲೆಕ್ಕದಲ್ಲಿ ಮಾತ್ರ ಪಕ್ಕ.
ದಿನಂಪ್ರತಿ ಇವರು 4- 5 ಸಾವಿರ ರುಪಾಯಿ ವ್ಯಾಪಾರ ಮಾಡುತ್ತಾರೆ. ಇವರ ಅಜ್ಜನ ಕಾಲದಿಂದಲೂ ಮಂಡಕ್ಕಿ ಮತ್ತು ಅವಲಕ್ಕಿ ವ್ಯಾಪಾರ ಲೋಂಡೆ ಕುಟುಂಬದ್ದು. ಈಗ 4ನೇ ತಲೆಮಾರಿನವರು ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ ಕುಲ ಕಸುಬನ್ನು ಮರೆತು, ಅನ್ಯ ಕೆಲಸ, ಸರ್ಕಾರಿ ಕೆಲಸಕ್ಕೆ ಹೋಗುವ ಇಂದಿನ ಕಾಲದಲ್ಲಿ 4 ತಲೆಮಾರುಗಳಿಂದ ಇದೇ ಕಾಯಕದಲ್ಲಿ ತೊಡಗಿರುವುದು ವಿಶೇಷ.
ಇವರ ಚುರುಮರಿ (ಮಂಡಕ್ಕಿ), ಪೇಪರ್ ಅವಲಕ್ಕಿ, ದಪ್ಪ ಅವಲಕ್ಕಿ, ಗುಜರಾತ್ ಅವಲಕ್ಕಿ, ಬೆಳಗಾವಿ ಚುರುಮರಿ ಎಂದರೆ ಧಾರವಾಡಿಗರಿಗೆ ಪಂಚಪ್ರಾಣ. ಉತ್ತಮ ಗುಣಮಟ್ಟದ, ಸ್ವಚ್ಛವಾಗಿರುವ, ಫ್ರೆಶ್ ಮಂಡಕ್ಕಿ ಮತ್ತು ಅವಲಕ್ಕಿ ಸಿಗುವುದರಿಂದ ಅಷ್ಟೊಂದು ಬೇಡಿಕೆ ಇದೆ. ಬೆಳಗಾದರೆ ಸಾಕು ಚುರುಮರಿ ಹಾಗೂ ಅವಲಕ್ಕಿ ಪ್ರಿಯರು ಖರೀದಿಗಾಗಿ ಕಾದು ಕುಳಿತಿರುತ್ತಾರೆ.
ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಸ್ವತಃ ಇವರೇ ಅಂಗಡಿಯಲ್ಲಿದ್ದು, ಬೇರೆ ಕಡೆಯಿಂದ ತಂದ ಚುರುಮರಿ, ಅವಲಕ್ಕಿ ಚೀಲಗಳನ್ನು ಬಿಚ್ಚಿ ಅವುಗಳ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುತ್ತಾರೆ. ಜೊತೆಜೊತೆಗೇ ಗಿರಾಕಿಗಳಿಗೆ ಅವಲಕ್ಕಿ, ಮಂಡಕ್ಕಿ ಕೊಡುತ್ತಾರೆ. ಬಹುಕಾಲದಿಂದ ಪರಿಚಯವಿರುವ, ಗಿರಾಕಿಗಳೊಂದಿಗೆ ಹರಟುತ್ತಲೇ ವ್ಯಾಪಾರ ಮಾಡುತ್ತಾರೆ. ಇವರ ಅಷ್ಟು ವರ್ಷಗಳ ಕಾಲದ ವ್ಯಾಪಾರದಲ್ಲಿ ಒಂದು ದಿನವೂ ಯಾರೊಂದಿಗೂ ಜಗಳ ಮಾಡಿದ್ದು, ಮೋಸ ಮಾಡಿದ ಉದಾಹರಣೆಗಳಿಲ್ಲ. ನನಗೆ ಮೊದಲಿನಿಂದಲೂ ಇದೇ ಕೆಲಸ ಮಾಡಿ ರೂಢಿಯಾಗಿದೆ. ಈ ವ್ಯಾಪಾರದಿಂದಲೇ ನಾನು ಎಲ್ಲವನ್ನೂ ಕಂಡುಕೊಂಡಿದ್ದೇನೆ. ಒಂದೇ ಒಂದು ದಿನ ಈ ಕೆಲಸ ಮಾಡದಿದ್ದರೆ ನನಗೆ ಸಮಾಧಾನವಾಗುವುದಿಲ್ಲ ಎನ್ನುತ್ತಾರೆ ಮಲ್ಲಾರಿ ಲೋಂಡೆ.
ಧಾರವಾಡದ್ ಬಾಳ ಮಂದಿ ನನ್ ಕಡೆ ಬಂದು ಚುರುಮರಿ, ಅವಲಕ್ಕಿ ತೊಗೊಂಡು ಹೋಗ್ತಾರ. ಹಿಂಗಾಗಿ ನನಗ ಚೊಲೋ ಲಾಭ ಆಗ್ತಾದ. ಮಾನ್ಯಾಗ ಮಕ್ಳು ಅದಾರ. ಅಲ್ರೂ ದುಡೀತಾರ. ಆದ್ರ ಮನ್ಯಾಗ ಕಾಲಿ ಕೂಡ್ಬಾರ್ದು ಅಂತ ಅಂಗಡ್ಯಾಗ ಕುಂತು ಚುರುಮರಿ ಮಾರ್ತೇನ್ರೀ.
- ಮಲ್ಲಾರಿ ನಿಂಗಪ್ಪ ಲೋಂಡೆ
- ಬಸವರಾಜ ಕರ್ಕಿಹಳ್ಳಿ
basavarajpk85@gmail.com
ಚಿತ್ರಗಳು: ಬಸವರಾಜ ಅಳಗವಾಡಿ