

'ರಿಪೇರಿಯಮ್ಮಾ... ಹಳೇ ಕೊಡೆ ರಿಪೇರಿ.... ಛತ್ರಿ ರಿಪೇರಿ....' ಎಂದು ನಮ್ಮೂರ ಬೀದಿಗುಂಟ ಕೂಗುತ್ತಾ ಸಾಗುತ್ತಿದ್ದ ಕೊಡೆ ರಿಪೇರಿಯವರು ಇಂದು ಮಾಯವಾಗಿದ್ದಾರೆ. ಇಂಥವರನು ನಾವೆಲ್ಲಾ ಚಿಕ್ಕಹುಡುಗರಾಗಿದ್ದಾಗ ಕುತೂಹಲದಿಂದ ನೋಡುತ್ತಿದ್ದುದುಂಟು. ನಾವೆಲ್ಲ ಸುತ್ತುವರಿದು ವೀಕ್ಷಿಸಿದ್ದು ನೆನಪಿದೆ. ಆದರೆ, ಇಂದು ಅಂಥ ಕೊಡೆ ರಿಪೇರಿ ಮಾಡುತ್ತಿರುವ ಅಜ್ಜಂದಿರು ಕಾಣಿಸುತ್ತಲೇ ಇಲ್ಲ. ಅದೆಲ್ಲಿ ಮಾಯ ವಾಗಿದ್ದಾರೋ ಗೊತ್ತಿಲ್ಲ.
ತಿಂಗಳ ಹಿಂದೆ ಕೆಲಸದ ನಿಮಿತ್ತ ನನೂರಿಗೆ ಹೋಗುತ್ತಿದ್ದಾಗ ಹೊಂಗನೂರು ಕೆರೆಯ ಏರಿ ಮೇಲೆ ಸೈಕಲ್ಲಿನ ಮೇಲೆ ಹೋಗುತ್ತಿದ್ದ ಕೊಡೆ ರಿಪೇರಿಯವನನು ಕಂಡವನೇ ಅವನ ಫೋಟೋ ಕ್ಲಿಕ್ಕಿಸಿ, ಮಾತಿಗೆಳೆದು ಕುಳಿತೆ.
ಅವನ ಬಯೋಡೇಟಾ ಹೀಗಿದೆ...
ಸುಮಾರು 50ರ ಪ್ರಾಯ ಅವನದು. ಹೆಸರು ನಾರಾಯಣ ಸ್ವಾಮಿ. ಕಾಡುಗೊಲ್ಲರ ಜನಾಂಗಕ್ಕೆ ಸೇರಿದವ. ಈತನ ಮೂಲ ಗುಬ್ಬಿ ತಾಲೂಕಿನ ಹಾಗಲವಾಡಿ. ಆದರೆ ಈತನ ತಾತನ ಕಾಲದಲ್ಲಿಯೇ ಇವರು ಆ ಊರನು ತೊರೆದು ಚನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿಯ ದೇವರಹಳ್ಳಿಯ ಗೋಮಾಳದಲ್ಲಿ ಗುಡಿಸಲು ನಿರ್ಮಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಮೂಲ ಕಸುಬು ಕುರಿಸಾಕಣೆಯಾದರೂ ಈತ ಎಂದಿಗೂ ಆ ಕೆಲಸ ಮಾಡಿದವನಲ್ಲ. ಚಿಕ್ಕವನಿರುವಾಗಲೇ ತಂದೆಯ ಅಣತಿಯಂತೆ ಮಾಗಡಿ ಮುಖ್ಯರಸ್ತೆ ಬಳಿಯ ಅಂದ್ರಹಳ್ಳಿಯ ಮುನಿಯಪ್ಪ ಎಂಬವರಿಂದಲೇ ಈತ ಕೊಡೆ ರಿಪೇರಿ ಮಾಡುವುದನು ಕಲಿತನಂತೆ. ಈಗ ಅದೇ ವಿದ್ಯೆ ಈತನ ತುತ್ತಿನ ಮೂಲವಾಗಿದೆ. ಕೊಡೆ ರಿಪೇರಿಯಲ್ಲಿ ಈತನಿಗೆ 25 ವರ್ಷದ ಅನುಭವವಿದೆ. ಹೆಂಡತಿ ಮತ್ತು 3 ಗಂಡುಮಕ್ಕಳು ಸೇರಿದಂತೆ ಐವರನು ಸಾಕುತ್ತಿದ್ದಾನೆ.
ಕಸುಬಿನ ಬಗ್ಗೆ ಹೀಗಂತಾನೆ...
'ನೋಡಿ, ಸ್ವಾಮಿ. ನಮ್ಮಪ್ಪನ ಮಾತಂತೆ ನಮ್ಮ ನೆಂಟೇ ಆಗಿದ್ ಅಂದ್ರಳ್ಳಿ ಮುನ್ಯಪ್ಪಂತಾವ ಈ ರಿಪೇರಿ ಕೆಲ್ಸಾ ಕಲ್ತೆ. ಅದಾದ್ಮ್ಯಾಲೆ ಅವತ್ತಿಂದ್ ಇವತ್ತಿನ್ ತನ್ಕಾವೇ ಈ ಕೆಲ್ಸ ಮಾಡ್ತಾ ಇವಿ... ಆದ್ರೆ, ಜೀವದಾಗೆ ಆರುಕ್ಕೇರ್ಲಿಲ್ಲ, ಮೂರುಕ್ಕಿಳೀಲಿಲ್ಲ. ಆದ್ರೆ, ವಟ್ಟೆ-ಬಟ್ಟೆಗೇನೂ ತ್ವಂದ್ರೆ ಏನೂ ಆಗಿಲ್ಲ. ಈ ಕಸ್ಬು ನಂಬ್ಕೊಂಡೇಯಾ ಮದ್ವಿನೂ ಆದೆ. ಮೂರ್ಗಂಡ್ಮಕ್ಳೂ ಆದ್ವು. ಅವೀಗ್ ದೊಡ್ಡವಾಗಿ ಕೂಲಿಗ್ಹೋಯ್ತಾವೇ. ಅವುಕ್ಕೆ ಕಲಿಸೋಕ್ ನೋಡುದ್ರೆ, ಅವುಕ್ ಇಸ್ಟ ಇಲ್ವಂತೆ. ಅದ್ಕೇಯಾ ಅವು ಗಾರೆ ಕೆಲ್ಸುಕ್ ವೋಯ್ತಾ ಅವೆ.'
ಕೆಲಸದ ಬಗ್ಗೆ ಹೇಳಿದ...
'ಇನು ಕೆಲ್ಸುದ್ ಮಾತೇಳ್ಬೇಕಂದ್ರೆ, ವತ್ತಾರೆದ್ದು ವಟ್ಟೆಗೊಸಿ ಉಣ್ಕಂಡ್ ಮನೆಬಿಟ್ರೆ... ಇನೇನಿದ್ರೂ ವತ್ ಮುಳುಗುದ್ಮ್ಯಾಲೇಯಾ ಮನೆ ಸೇರೂದು. ಮೊದ್ಲಿನಂಗೇ ಇವತ್ತನ್ ಕಾಲ್ದೋರು ಕೊಡೆ ರಿಪೇರಿ ಮಾಡ್ಸೋರ್ ಕಮ್ಮಿಯೇ. ಅದೂ ಅಲ್ದೆ, ನಮ್ತಾಕೇ ರಿಪೇರಿಗ್ ಬರೂದಿಲ್ಲ.. ಏನಿದ್ರೂ ಸೋರೂಮ್ಗೆ ಹೋಯ್ತಾರೆ. ಆದ್ರೂವೆ ನಮ್ ಕಾಯಂ ಗಿರಾಕಿಗೊಳ್ ನನ್ಹತ್ರೂವೆ ರಿಪೇರಿ ಮಾಡುಸ್ತಾರೆ. ಅವರೇ ನಮ್ ಧಣಿಗೊಳು. ಅವ್ರಿಂದಾನೆ ನಮ್ ಜೀವ ನಡೀತಿರೋದು.'
ಆದಾಯದ ಬಗ್ಗೆ ಹೀಗಂದ...
'ಇದ್ರಲ್ ಅದೇನ್ ಆದಾಯ್ವೂ ಇಲ್ಲ. ದಿನಾ ಸುತ್ತಾಡಿದ್ರೂ 150 ರುಪಾಯಿ ಉಟ್ಟೋದಿಲ್ಲ. ಒಂದೊಂದಿನ 250 ರುಪಾಯಿಂದ್ 400 ರುಪಾಯ್‌ಗುಂಟಾ ಸಂಪಾದೇ ಆಯ್ತದೆ ಅಸ್ಟೆ. 150 ರುಪಾಯ್ ಸಂಪಾದೆ ಆದ್ರೂ ಕರ್ಚೆಲ್ಲಾ ಕಳ್ದು 50 ರುಪಾಯ್ ಲಾಭ ಸಿಗ್ತದೆ, ಅಸ್ಟೆಯಾ. ಆದ್ರೂ ಕೂಲಿಗೀಲಿಗ್ಹೋದ್ರೆ 300 ರುಪಾಯ್ಗೇನೂ ಮೋಸಿಲ್ಲ. ಆದ್ರೆ ಅದೇನೋ ನಂಗೆ ಈ ಕಸುಬು ಬಿಟ್ ಬ್ಯಾರೇ ಕೆಲ್ಸ ಬರೊಲ್ತು. ಅದ್ಕೇಯಾ ಎಸ್ಟೆ ಕಸ್ಟ ಆದ್ರೂ ಇದೇ ಕಸುಬ್ ಮಾಡ್ಕೊಂಡವೀ. ಒಟಲ್ಲಿ ಈ ಕಸುಬಾ ಯಾರಾದ್ರೂ ಕಲಿಸ್ಕೊಡಿ ಅಂತ್ ಬಂದ್ರೆ ನಾ ಕಲಿಸ್ಕೊಡೋಕ್ ರೆಡಿಯಿವೀ.
ಅವನದ್ದೂ ಒಂದು ಬದುಕು
ಈ ನಾರಾಯಣಸ್ವಾಮಿ ಪಾಲಿಗೆ ಆಶ್ರಯ ಮನೆ ಇನೂ ಗಗನ ಕುಸುಮವಾಗಿಯೇ ಉಳಿದಿದ್ದು, ಈ ಬಗ್ಗೆ ಸ್ಥಳೀಯ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಆದರೆ, ಇವರಿಗೆ ಈಗಾಗಲೇ ಪಡಿತರ ಚೀಟಿ, ಮತದಾರರ ಚೀಟಿಗಳು ಸಿಕ್ಕಿವೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನು ಕೇಳಲಿಲ್ಲವೇ ಅಂದರೆ, 'ಅಯ್ಯೋ ಸ್ವಾಮಿ, ನಮ್ಮೂರ್ ಗ್ರಾಮಪಂಚಾಯ್ತಿ ಸದಸ್ಯರನು ಮನೆ ಕೊಡಿಸಿ ಸ್ವಾಮಿ ಅಂತ ಕೇಳುದ್ರೆ, ನೀನೆಲ್ಲಿಂದನೋ ಬಂದ್ ಇಲ್ಲಿ ಸೇರ್ಕೊಂಡಿದೀಯಾ. ನಿನಗ್ಯಾವ್ ಮನೆ, ಸೈಟು ಕೊಡೋದ್. ಹೋಗಯ್ಯೋ ಹೋಗು' ಅಂತ ಮೂಗ್ ಮುರೀತಾರೆ ಸ್ವಾಮಿ' ಎಂದ.
ಅದೇನೆ ಇರಲಿ, ಕೊಡೆ ರಿಪೇರಿಯೇ ಜೀವನಕ್ಕೆ ಆಧಾರ ಅಂತ ನಂಬಿಕೊಂಡಿರುವ ಇಂಥವರದ್ದು ಸವಾಲಿನ ಬದುಕು. ನಿರ್ದಿಷ್ಟ ಆದಾಯವಿಲ್ಲ. ವಾಸಕ್ಕೆ ಮನೆಯಿಲ್ಲ. ಮುರಿದ ಹೋದ ಕೊಡೆಗಳನು ರಿಪೇರಿ ಮಾಡುತ್ತಾರೋ, ಇವರ ಬದುಕನು ರಿಪೇರಿ ಮಾಡುತ್ತಾರೋ... ಭಗವಂತನಿಗೇ ಪ್ರೀತಿ. ಏನೇ ಆಗಲಿ, ಇವರಿಗೆ ಕೊಡೆ ನೆರಳಾಗಿದೆ.
ಈಗ ನಾರಾಯಣ ಸ್ವಾಮಿಗೆ ಆತಂಕ ಶುರುವಾಗಿದೆ. ಮಳೆಗಾಲ ಇಷ್ಟು ಬೇಗ ಮುಗಿಯಿತಲ್ಲ ಅಂತ!
- ರೇಷ್ಮಾ ಎಚ್. ಗೌಡ