

ಹೊರಗೆ ಹೆಜ್ಜೆಯೂರಲೂ ಅಸಾಧ್ಯವೆನುವಂಥ ಮಳೆಗಾಲ. ಟಿವಿ, ಮೊಬೈಲುಗಳ ರಗಳೆ ಅಂದಿರಲಿಲ್ಲ. ಆಗ ಮೊಮ್ಮಕ್ಕಳ ಮನರಂಜನೆಗಾಗಿ ಅಜ್ಜಿಯೂ ಜೊತೆಯಾಗುತ್ತಿದ್ದರು. ಹೊಂಗಾರಕ ಮರದ ಕಾಯಿಯನು ಬಳಸಿ ಆಡುವ ಚನ್ನೆಮಣೆ ಆಗ ಅತಿಪ್ರಿಯವಾದ ಆಟ. ಇದು ರಾಜ ಮಹಾರಾಜರ ಕಾಲದಿಂದಲೂ ಚಾಲ್ತಿಯಲ್ಲಿರುವ ಆಟ. ಚೆಸ್ಸಿನಂತೆ ಬುದ್ಧಿಶಕ್ತಿಗೊಂದು ಸವಾಲೂ ಹೌದು. ಆದರೆ, ಈಗದು ದಿಢೀರ್ ನಾಪತ್ತೆ. ಇದು ಅಜ್ಜಿಗೂ ಬೇಜಾರಾಗಿದೆ. ಮೊಮ್ಮಗನ ಕೈಯಲ್ಲಿ ವಿಡಿಯೋ ಗೇಮ್ ಬಂದಿದೆ.
ಹೀಗಿತ್ತು ಚನ್ನೆಮಣೆ...
'ಒಂದು ಎರಡು ಮೂರು ನಾಲ್ಕು ಮತ್ತೆ ತೆಗೆ, ಹಾಕು ಒಂದು ಎರಡು ಮೂರು ನಾಲ್ಕು...' ಹೀಗೆ ಮುಂದುವರಿಯುತ್ತದೆ ಆಟ. ಎದುರು ಬದುರು ಕುಳಿತು ಆಡುವ ಈ ಆಟದಲ್ಲಿ ಒಬ್ಬರಿಗೆ ಎದುರಿನ ಏಳು ಗುಳಿಗಳು (ಮನೆಗಳು). ಪ್ರತಿ ಗುಳಿಯಲ್ಲಿ ನಾಲ್ಕು ಕಾಯಿಗಳು. ಮೊದಲು ಆಟ ಶುರು ಮಾಡಿದವ ತನ ಏಳು ಮನೆಗಳಲ್ಲಿ ಯಾವುದಾದರೂ ಒಂದು ಮನೆಯಿಂದ ಕಾಯಿಗಳನು ಎತ್ತಿ ಪ್ರತಿ ಮನೆಗೆ ಹಂಚಬೇಕು. ಕಾಯಿ ಖಾಲಿಯಾದಾಗ ಮುಂದಿನ ಮನೆಯ ಕಾಯಿಗಳನು ಎತ್ತಿ ಹಂಚಬೇಕು. ಒಮ್ಮೆ ತೆಗೆದ ಮನೆಯಲ್ಲಿ ಪುನಃ ನಾಲ್ಕು ಕಾಯಿಗಳು ಒಟ್ಟು ಸೇರಿದರೆ ಕರು ಹಾಕಿದೆ ಎಂದರ್ಥ.
ಈ ಕಾಯಿಗಳು ಮನೆಯ ಯಜಮಾನನಿಗೆ ಸಿಗುತ್ತವೆ. ಆಟಗಾರನ ಆಟ ಕೊನೆಯಾಗುವುದು ಖಾಲಿ ಮನೆ ಸಿಕ್ಕಾಗ. ಖಾಲಿ ಮನೆಯ ಮುಂದಿನ ಮನೆಯಲ್ಲಿನ ಕಾಯಿಗಳು ಆಟ ಕೊನೆಗೊಂಡ ಆಟಗಾರನಿಗೆ ಸಿಗುತ್ತದೆ. ಇದರಲ್ಲಿ ಇಬ್ಬರು ಆಡುವ ಜೋಡುಗುಣಿ ಆಟ, ಮೂವರು ಆಡುವ ಅರಸಾಟ, ಪೆರ್ಗ- ಹೀಗೆ ಹಲವು ಬಗೆಯ ಆಟಗಳಿವೆ. ಇದನು ಹಣ ಇಟ್ಟು ಜೂಜಿನ ಆಟವಾಗಿಯೂ ಆಡುವರು.
ಒಂದು ನಂಬಿಕೆ...
ಚನ್ನೆಮಣೆ ಆಟವನು ಅಕ್ಕ-ತಂಗಿ , ಗಂಡ-ಹೆಂಡತಿ ಆಡುವಂತಿಲ್ಲ. ಚನ್ನೆಕಾಯಿಯನ್ನು ಬಳಸಿಯೇ ಆಟ ಆಡಬೇಕು. ಕಲ್ಲು ಹಾಗೂ ಇತರ ವಸ್ತುಗಳನು ಬಳಸುವಂತಿಲ್ಲ. ಮುಸ್ಸಂಜೆಯ ಹೊತ್ತಿನಲ್ಲೂ ಆಡುವಂತಿಲ್ಲ- ಇವೆಲ್ಲ ಈ ಆಟದ ಸುತ್ತ ಬೆಳೆದ ನಂಬಿಕೆ.
ಉತ್ಸಾಹ ತುಂಬುವ ಈ ಆಟ, ತಂತ್ರಜ್ಞಾನದ ದಾಳಿಗೆ ತತ್ತರಿಸಿ ಕಾಲ್ಕಿತ್ತಿದೆ. ಮೊಮ್ಮಕ್ಕಳಿಗೆ ಹೋಂವರ್ಕಿನ ಒತ್ತಡ, ಆಧುನಿಕ ಆಟೋಪಕರಣಗಳ ಮೇಲಿನ ಮೋಹ ಈ ಆಟವನು ಬದಿಗೆ ಸರಿಸಿದೆ. ಆದರೆ, ಅಜ್ಜಿ ಮಾತ್ರ ಆ ಆಟದ ನೆನಪಿನಲ್ಲೇ ಇದ್ದಾಳೆ.
- ಸುಮಂಗಲ