

ಕಣ್ಣಲ್ಲಿ ನೋಡಿದ್ದು, ಕಲ್ಪನೆಯಲ್ಲಿ ಮೂಡಿದ ದೃಶ್ಯವನ್ನು ತಮ್ಮ ಕೈಚಳಕದಲ್ಲಿ ಮೂಲವಸ್ತುವಿಗೆ ಧಕ್ಕೆ ಆಗದಂತೆ ಆಕರ್ಷಕವಾಗಿ ಚಿತ್ರಿಸುವುದು ಚಿಟಿಕೆ ಹೊಡೆದಷ್ಟು ಸುಲಭವಲ್ಲ. ಆ ಘನ ಕಾರ್ಯವನ್ನು ಸಮರ್ಥವಾಗಿ ಅಭಿವ್ಯಕ್ತಿ ಪಡಿಸುವುದಕ್ಕೆ ಕೌಶಲ್ಯ ಬೇಕು. ಶಾಸ್ತ್ರಬದ್ಧ ಅಧ್ಯಯನವೂ ಅಗತ್ಯ. ಈ ಮಾತಿಗೆ ಚಿತ್ರ ಕಲಾವಿದ, ನಿವೃತ್ತ ಶಿಕ್ಷಕ ಜಿ. ಎಂ. ಹೆಗಡೆ ಉತ್ತಮ ನಿದರ್ಶನ.
ಇವರು ಶಿರಸಿ ತಾಲೂಕಿನ ತಾರಗೋಡಿನ ನಿವಾಸಿ. ಗದಗದಲ್ಲಿ ಕಲಾ ಶಿಕ್ಷಣದ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿ, ಅಲ್ಲಿಯೇ ಆರ್ಟ್ ಮಾಸ್ಟರ್ ಪದವಿ ಗಿಟ್ಟಿಸಿಕೊಂಡರು. 1982ರಲ್ಲಿ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕಲಾ ಶಿಕ್ಷಕರಾಗಿ 2006ರಲ್ಲಿ ನಿವೃತ್ತರಾದರು.
ಜಿ.ಎಂ. ಹೆಗಡೆ ಚಿತ್ರಕಲೆಯನ್ನು ತಮ್ಮ ಹೃದಯದಷ್ಟೇ ಪ್ರೀತಿಸಿ ಮೆಚ್ಚಿಕೊಂಡವರು. ನಾಡಿನಾದ್ಯಂತ ತಮ್ಮ ಕೈಚಳಕದ ಹೆಗ್ಗುರುತನ್ನು ಮುದ್ರಿಸಿದ ಹೆಗ್ಗಳಿಕೆ ಇವರದ್ದು. ಕಲಾವಿದರ ಕುಟುಂಬದಲ್ಲಿ ಜನಿಸಿದ ಇವರ ಅಜ್ಜ ಮಣ್ಣಿನ ಮೂರ್ತಿ ನಿರ್ಮಿಸುವುದರಲ್ಲಿ ತೊಡಗಿಕೊಂಡಿದ್ದರೆ, ತಂದೆ ಮಹಾಬಲೇಶ್ವರ ಹೆಗಡೆ ಯಕ್ಷಪಟು ಆಗಿದ್ದರು. ಅದೇ ಸ್ಫೂರ್ತಿಯಾಗಿ ಪ್ರೌಢಶಾಲಾ ಹಂತದಲ್ಲೇ ನಾಟಕ, ಚಿತ್ರಕಲೆಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಯಿತು. ಎಂ.ಎ.ಚೆಟ್ಟಿ ಮತ್ತು ಟಿ.ಪಿ. ಅಕ್ಕಿ ಅವರಿಂದ ಚಿತ್ರಕಲೆಯ ಬಗ್ಗೆ ಆಳವಾಗಿ ಅಭ್ಯಸಿಸಿದರು. ಅಂತಾರಾಷ್ಟ್ರೀಯ ಕಲಾವಿದ ದಿ. ಎಂ.ಒ.ವಿ. ಆಚಾರ್ಯರ ಮಾರ್ಗದರ್ಶನ ಪಡೆದು, ಚಿತ್ರಕಲೆಯಲ್ಲೇ ತಳವೂರಿದರು.
ಮಲೆನಾಡಿನ ಪ್ರಕೃತಿಯ ಸೌಂದರ್ಯ, ಸೊಬಗಿನಲ್ಲಿ ಹುಟ್ಟಿ, ಕುಣಿದಾಡಿದ ಇವರಿಗೆ, ನಿಸರ್ಗದ ವೈಭವವೇ ಕಲಾ ವಿಷಯವಾಗಿ ಮಾರ್ಪಟ್ಟಿತು. ಹೆಗಡೆ ಏಕ ಪ್ರಕಾರದ ಕಲೆಗೆ ಅಂಟಿಕೊಂಡವರಲ್ಲ. ಚಿತ್ರಕಲಾ ಮಾಧ್ಯಮದಲ್ಲಿ ಹೊಸತನ್ನು ಶೋಧಿಸುತ್ತಾ ಸಾಂಪ್ರದಾಯಿಕ ಚಿತ್ರಕಲೆ, ನವ್ಯ ಮಾಧ್ಯಮದ ಕಲೆ, ಶಿಲ್ಪ ಕಲಾಕೃತಿ... ಹೀಗೆ ವಿವಿಧ ಪ್ರಕಾರಗಳಲ್ಲಿ ಸೊಗಸಾದ ಕಲಾಕೃತಿಗಳನ್ನು ಅಭಿವ್ಯಕ್ತಿ ಪಡಿಸಿ ಕಲಾಸಕ್ತರ ಪ್ರಶಂಸೆಗೆ ಪಾತ್ರರಾದವರು.
ಇವರು ಜಲವರ್ಣ ಮಾಧ್ಯಮದಲ್ಲಿ ರಚಿಸಿದ ವಿಶ್ವಾಮಿತ್ರ ಮೇನಕೆ, ಶಬರಾರ್ಜುನ, ದುಶ್ಯಂತ- ಶಾಕುಂತಲೆ, ವಿಧುರ, ರುಕ್ಮಾಂಗದ ಮೋಹಿನಿಯಂಥ ಪೌರಾಣಿಕ ಕೃತಿಗಳು ಜನಪ್ರಿಯವಾಗಿವೆ.
ಹಂಪೆಯ ಕಲ್ಲಿನ ರಥ, ಉ.ಕ. ಜಿಲ್ಲೆಯ ಹಲವು ದೇಗುಲಗಳು, ಜಲಪಾತಗಳು, ಐತಿಹಾಸಿಕ ಸ್ಥಳಗಳು ಇವರ ಕೈಚಳಕದಲ್ಲಿ ಸುಂದರವಾಗಿ ಮೂಡಿಬಂದಿವೆ. ವೀರ ಅಶ್ವತ್ಥಾಮ, ವಾಲಿ-ಸುಗ್ರೀವ ಕಾಳಗ, ಕೀಚಕ ವಧೆ, ದುಶ್ಯಾಸನ ವಧೆ ಮುಂತಾದ ತೈಲ ಕೃತಿಗಳು, ದ್ವಾದಶ ರಾಶಿಯ ಚಿಹ್ನೆಗಳನ್ನು ಬಳಸಿ ರಚಿಸಿದ ಶ್ರೀ ಗಣೇಶ, ಇಕ್ಕೇರಿಯ ನಂದಿ ಮಂಟಪ ಸೇರಿದಂತೆ ವೈವಿಧ್ಯಮಯ ಕಲಾಕೃತಿಗಳು ಇವರ ಕುಂಚದಿಂದ ಅರಳಿವೆ.
ಉತ್ತಮ ಚಿತ್ರ ಕಲಾವಿದರೆಂದು ಗುರುತಿಸಿಕೊಂಡ ಜಿ.ಎಂ. ಹೆಗಡೆ 1969ರಿಂದ ನಿರಂತರ ವಿವಿಧ ಶಿಬಿರ, ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. 1982ರಲ್ಲಿ ಮೈಸೂರಿನ ಮಾನಸ ಗಂಗೋತ್ರಿ ವಿವಿಯಲ್ಲಿ ಪ್ರಪ್ರಥಮ ಬಾರಿಗೆ ಏಕವ್ಯಕ್ತಿ ಕಲಾ ಪ್ರದರ್ಶನ ಮಾಡುವುದರ ಮೂಲಕ ರಾಜ್ಯದ ಕಲಾ ಕ್ಷೇತ್ರಕ್ಕೆ ಧುಮುಕಿದರು.
ವರ್ಣ ಕಲಾ ಪ್ರತಿಷ್ಠಾನವನ್ನು ಹುಟ್ಟು ಹಾಕಿಕೊಂಡಿರುವ ಇವರು, ಅದರ ಮೂಲಕ ಅನೇಕ ಕಡೆಗಳಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದಾರೆ. ಇವರು ಚಿತ್ರಿಸಿದ ಹತ್ತಾರು ಕಲಾಕೃತಿಗಳು, ಮುಂಬೈ, ಜರ್ಮನಿ ಮುಂದೆಡೆ ಪ್ರದರ್ಶನಗೊಂಡಿವೆ. ಹೆಗಡೆಯವರಿಗೆ ನೀವೂ ಹಲೋ ಹೇಳಿ, ಮೊ. 94498 20822.
ಹಲವು ಗೌರವ
ಜಿ.ಎಂ. ಹೆಗಡೆ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ, ಕಲಾಶ್ರೀ ಪುರಸ್ಕಾರ, ವಿಶಾಲ ಕರ್ನಾಟಕ ಭೂಷಣ್ತ, ಆರ್ಯಭಟ, ರಾಷ್ಟ್ರಭೂಷಣ, 2006ರಲ್ಲಿ ನಾಡರತ್ನ ಪಿ. ಲಂಕೇಶ್ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಶ್ರೇಷ್ಠ ರತ್ನ ಪ್ರಶಸ್ತಿ, ಸುವರ್ಣ ಕರ್ನಾಟಕ ಪತಂಜಲಿ ಪ್ರಶಸ್ತಿ, ಶಿರಡಿ ಸಾಯಿಬಾಬಾ ಪ್ರಶಸ್ತಿ ಲಭಿಸಿವೆ.
- ಚಿತ್ರ, ಬರಹ: ಗಣಪತಿ ಹಾಸ್ಪುರ