ರಂಗದ ಜತೆ ರಾಜಿ

ರಂಗದ ಜತೆ ರಾಜಿ
Updated on: 

ನಾಟಕದ ನಾನಾ ವಿಭಾಗಗಳೂ ಅವರಿಗೆ ಪರಿಚಿತ. ನಿರ್ದೇಶನ ಗೊತ್ತು, ನೃತ್ಯ ಸಂಯೋಜನೆ ಮಾಡ್ತಾರೆ, ವಸ್ತ್ರ ಮತ್ತು ಬೆಳಕು ವಿನ್ಯಾಸ ಅದ್ಭುತ, ಪ್ರಸಾದನದಲ್ಲಿ ಎತ್ತಿದ ಕೈ... ಇದು ಧಾರವಾಡದ ರಾಜೇಶ್ವರಿ ಎನ್. ಸುಳ್ಯ ಅವರ ರಂಗಸಾಧನೆ. ಇವರ ತಂದೆ ಯಕ್ಷಗಾನ ಕಲಾವಿದರಾಗಿದ್ದರಿಂದಲೋ ಏನೋ, ದ್ವಿತೀಯ ಪಿಯುಸಿ ಮುಗಿಯುತ್ತಿದ್ದಂತೆ ಇವರನ್ನು ಆಕರ್ಷಿಸಿದ್ದು ರಂಗಭೂಮಿ.
ನೀನಾಸಂ ರಂಗ ಶಿಕ್ಷಣದಲ್ಲಿ ರಂಗಾಭ್ಯಾಸ ಪ್ರಾರಂಭಿಸಿ ತಿರುಗಾಟದಲ್ಲಿ ಮುಖ್ಯ ನಟಿಯಾಗಿ ಹತ್ತು ವರ್ಷ ದುಡಿದ ರಾಜಿ ರಂಗಭೂಮಿಯೊಂದಿಗೆ ಅಲಿಖಿತ ರಾಜಿ ಮಾಡಿಕೊಂಡಿದ್ದಾರೆ. ರಂಗ ಶಿಕ್ಷಣ ಅಧ್ಯಯನಕ್ಕಾಗಿ ಸ್ವೀಡಾ ಸ್ವೀಡಿಶ್ ಐಟಿಐ ಮಕ್ಕಳ ರಂಗಭೂಮಿ ಯೋಜನೆ ಅಡಿಯಲ್ಲಿ ಸ್ವೀಡನ್ನಿನ್ನಲ್ಲಿ ನಡೆದ ಯುವ ರಂಗೋತ್ಸವದಲ್ಲಿ ಹೆಚ್ಚಿನ ಪರಿಣತಿ ಪಡೆದಿದ್ದಾರೆ.
ಥಿಯೇಟರ್ ಥೆರಪಿ
ಇದನ್ನೇ ಪೂರ್ಣಾವಧಿ ವೃತ್ತಿಯನ್ನಾಗಿ ತೆಗೆದುಕೊಂಡು, 'ರಂಗಪಯಣ' ಸಂಸ್ಥೆ ಕಟ್ಟಿಕೊಂಡು ಥಿಯೇಟರ್ ಥೆರಪಿ ಹೆಸರಿನಲ್ಲಿ ಅಂಗವಿಕಲರಿಗೆ, ಬುದ್ಧಿಮಾಂದ್ಯ ಮಕ್ಕಳಿಗೆ, ಅಂಧ ಮಕ್ಕಳಿಗೆ ರಂಗ ಚಿಕಿತ್ಸೆ ಎಂಬ ಪ್ರಯೋಗದ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಅವರ ಆರೋಗ್ಯ ಸುಧಾರಿಸುವ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಹೊಸ ಹೊಸ ವೈವಿಧ್ಯಮಯ ರಂಗ ಪ್ರಯೋಗಗಳನ್ನು ತಯಾರಿಸಿ, ರಾಜ್ಯಾದ್ಯಂತ ಬಹುತೇಕ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಪ್ರದರ್ಶನ ನೀಡಿದ್ದಲ್ಲದೆ, ದೆಹಲಿ, ಉದಯಪುರ, ಗುವಾಹಟಿ, ಚೆನ್ನೈ, ತಂಜಾವೂರ್, ತಿರುಪತಿ, ಮುಂಬೈ ಹೀಗೆ ಹಲವಾರು ರಾಜ್ಯಗಳನ್ನು ಸುತ್ತಿ, ಕನ್ನಡ ಅಲ್ಲದೇ ತುಳು ನಾಟಕಗಳಲ್ಲೂ ಪಾತ್ರಧಾರಿಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
'ದೂತವಾಕ್ಯ', 'ಮಧ್ಯಮಯುಗ', 'ಸಾಹೇಬರು ಬರುತ್ತಾರೆ', 'ಅಂಧಯುಗ', 'ಚಿತ್ರಪಟ', 'ಪಂಜರಶಾಲೆ', 'ಬಾಬಾ ಚಂದಿರ', 'ಏಕಲವ್ಯ', 'ಬಿರುಗಾಳಿ', 'ಜನಪದ ರಾಮಾಯಣ' ಮುಂತಾದ ನಾಟಕಗಳಿಗೆ ನಿರ್ದೇಶನದ ಜೊತೆಗೆ ರಂಗ ವಿನ್ಯಾಸವನ್ನೂ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿಯವರೆಗೆ ಸಾಕಷ್ಟು ಹಿರಿಯ ರಂಗ ಜೀವಿಗಳ ನಿರ್ದೇಶನದಲ್ಲಿ 'ನಾಗಮಂಡಲ', 'ದಿವ್ಯದರ್ಶನ', 'ಸಾಂಬಶಿವ ಪ್ರಹಸನ', 'ತಲೆದಂಡ', 'ಚಿರೇ ಬಂದಿವಾಡೆ', 'ಸಂಗ್ಯಾ-ಬಾಳ್ಯಾ', 'ಮೀಡಿಯಾ', 'ಬೆರಳ್‌ಗೆ ಕೊರಳ್‌', 'ರೋಡ್ ಟು ಮೆಕ್ಕಾ', 'ಮುಗಿಲ ಮಿಂಚು' ಇನ್ನೂ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವೆಲ್ಲವುದರ ಜೊತೆಗೆ ಬಾಲ್ಯವಿವಾಹ, ಸಾಕ್ಷರತಾ ಆಂದೋಲನ, ಬಾಲಕಾರ್ಮಿಕ ಮುಂತಾದ ವಿಷಯವುಳ್ಳ ಬೀದಿ ನಾಟಕವನ್ನು ನಿರ್ದೇಶಿಸಿ, ಅಭಿನಯಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಸದ್ಯ ಬಿಡುವಿಲ್ಲದ ರಂಗ ಚಟುವಟಿಕೆಗಳ ನಡುವೆಯೂ ಧಾರವಾಡದಲ್ಲಿ ಸಣ್ಣದೊಂದು ಅಂಗಡಿ ನಡೆಸುತ್ತಿದ್ದಾರೆ. ವಿಶೇಷವೆಂದರೆ ಸ್ಟೇಷನರಿ ವಸ್ತುಗಳ ಜತೆಗೆ ಯಕ್ಷಗಾನಕ್ಕೆ ಸಂಬಂಧಿಸಿದ ವಸ್ತುಗಳು, ನಾಟಕದ ಪರಿಕರಗಳು ಇವರ ಅಂಗಡಿಯಲ್ಲಿ ದೊರೆಯುತ್ತವೆ.

ತಂದೆಯಿಂದ ಯಕ್ಷಗಾನದ ಹೆಜ್ಜೆಗಾರಿಕೆ ಕಲಿತೆ. ಬಿ.ವಿ. ಕಾರಂತ, ಕೆ.ವಿ. ಸುಬ್ಬಣ್ಣ, ಅಕ್ಷರ, ಚಿದಂಬರರಾವ್ ಜಂಬೆ, ಲಿಂಗದೇವರು ಹಳೆಮನೆ ಮುಂತಾದ ರಂಗ ಸಾಧಕರ ಕೈಯಲ್ಲಿ ಕೆಲಸ ಮಾಡಿ ಗಟ್ಟಿಯಾದೆ. ರಂಗಭೂಮಿಯೊಳಗೆ ಸದಾ ಕ್ರಿಯಾಶೀಲವಾಗಿರಬೇಕು.
= ರಾಜೇಶ್ವರಿ


= ನಾಗರಾಜ ಪಾಟೀಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com