

ಸಾಂಸ್ಕೃತಿಕ ನಗರಿ ಧಾರವಾಡ ಎಂದರೆ ಸರ್ವ ಕಲೆಗಳ ಸಂಗಮ. ಹಾಗೇ ರಂಗಭೂಮಿಯ ಕಡೆ ಕಣ್ಣು ಹಾಯಿಸಿದರೆ ಹಲವು ಹೆಸರುಗಳ ಜತೆಗೆ ಮುಂಚೂಣಿಯಲ್ಲಿ ಕೇಳುವುದು ಗೋಪಾಲ ಉಣಕಲ್.
ಓದಿದ್ದು ಐಟಿಐ ಆದರೂ, ಮಾಡುತ್ತಿರುವುದು ಆಟೋ ವೃತ್ತಿ. ಆದರೆ ಇವರಿಗೆ ಹೆಚ್ಚು ಖುಷಿ ಕೊಟ್ಟಿದ್ದು ರಂಗಭೂಮಿ.
1990ರಲ್ಲಿ ಅಭಿನಯ ಭಾರತಿ ಸಂಸ್ಥೆ ಆಯೋಜಿಸಿದ್ದ ಅಭಿನಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿ, ಭಾಗವಹಿಸಿ ಪ್ರಮೋದ ಶಿಗ್ಗಾಂವ ಅವರ ನಿರ್ದೇಶನದಲ್ಲಿ ನಟಿಸುವ ಮುಖಾಂತರ ಅಭಿನಯದ ಆಟ ಪ್ರಾರಂಭಿಸಿದರು. ನಂತರ ಅಭಿನಯ ಭಾರತಿ ತಂಡದಲ್ಲೇ 3-4 ವರ್ಷ ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿದರು. ಅಭಿನಯಿಸಿದ ನಾಟಕಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜನಪ್ರಿಯತೆ ಹೆಚ್ಚಾಯಿತು. ಆದರೆ ಜನಪ್ರಿಯತೆ ಹೊಟ್ಟೆ ತುಂಬಿಸುವುದಿಲ್ಲವೆಂದು ಗೊತ್ತಾದಾಗ, ಆಟೋ ವೃತ್ತಿ ಆರಂಭಿಸಿದರು. ನಾಟಕದ ಗೀಳು ಮುಂದುವರೆದಿತ್ತು.
ಆಗಲೇ ಏಣಗಿ ನಟರಾಜ ಅವರ ಸಹಾಯದಿಂದ ಸೀರಿಯಲ್ ಮತ್ತು ಸಿನೆಮಾಗಳಿಗೆ ಪರಿಚಯವಾದರು. 'ಮಹಾನವಮಿ', 'ಕಿನ್ನರಿ', 'ಇದು ಎಂಥಾ ಲೋಕವಯ್ಯಾ' ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. 'ನೀಲಾ', 'ಸಿಂಗಾರವ್ವಾ', 'ನಂದಾದೀಪ' ಮುಂತಾದ ಸಿನೆಮಾಗಳಿಗೆ ಬಣ್ಣ ಹಚ್ಚುವಂತಾಗಿತು. ರಂಗಭೂಮಿಯ ಹೆಸರಾಂತ ನಿರ್ದೇಶಕರಾದ ಜಯತೀರ್ಥ ಜೋಶಿ, ಸುಲೋಚನಾ ಕೊಟೂರ, ಸಿ. ಬಸವಲಿಂಗಯ್ಯ, ಪ್ರಕಾಶ ಗರುಡ, ರವಿ ಕುಲಕರ್ಣಿ ಮುಂತಾದವರ ಗರಡಿಯಲ್ಲಿ ಪಳಗಿ ಸಾಕಷ್ಟು ಹೆಸರಾಂತ ನಾಟಕಗಳಿಗೆ ಸಾರಥಿಯಾಗಿದ್ದಾರೆ. ಇಲ್ಲಿಯವರೆಗೆ 300ರಿಂದ 400 ಪ್ರಯೋಗಗಳಿಗೆ ಸಾಕ್ಷಿಯಾಗಿ, ಇನ್ನೂ ಇವರ ಕಲೆ ಬತ್ತದೆ, ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸೆಲೆ ಒಡೆಯುತ್ತಿದೆ.
ಒಬ್ಬ ಕಲಾವಿದ ಕಲೆಯ ಹಿಂದೆ ಬೆನ್ನು ಹತ್ತಿದಾಗ ತನ್ನ ಕುಟುಂಬದ ಎಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತಾನೆ. ಕಲೆಯನ್ನು ಬಿಟ್ಟು ಕುಟುಂಬದ ಕಡೆ ಹೆಚ್ಚು ಗಮನ ಕೊಟ್ಟರೆ ಕಲೆ ನಾಶವಾಗುತ್ತದೆ. ಹಾಗಾಗಿ ನಾನು ಎರಡನ್ನೂ ಸಮನಾಗಿ ತೂಗಿಸಿಕೊಂಡು ಹೋಗುತ್ತಿದ್ದೇನೆ. ಅದೊಂದು ಸವಾಲೂ ಹೌದು, ಮಾನಸಿಕ ಹಿಂಸೆಯು ಹೌದು. ಆಟೋ ವೃತ್ತಿ ಜೀವನ ಆರ್ಥಿಕವಾಗಿ ಬದುಕು ನಡೆಸೋದಕ್ಕೆ ದಾರಿ ಮಾಡಿಕೊಟ್ಟರೆ, ರಂಗಭೂಮಿಯ ಪಯಣ ಮಾನಸಿಕ ತೃಪ್ತಿ ಕೊಡುತ್ತದೆ ಎನ್ನುತ್ತಾರೆ ಗೋಪಾಲ ಉಣಕಲ್ (ಮೊ.9945423735).
-ಚಿತ್ರ-ಬರಹ: ನಾಗರಾಜ ಪಾಟೀಲ