ಗುಂಡ: ಗರ್ಲ್‌ಫ್ರೆಂಡ್‌ಗಿಂತ ಹೆಂಡತೀನೆ ವಾಸಿ...
ತಿಮ್ಮ: ಹೇಗೆ?
ಗುಂಡ: ಗರ್ಲ್‌ಫ್ರೆಂಡ್ ಅಂದ್ರೆ, ಪಿಜ್ಜಾ ಇದ್ದ ಹಾಗೆ... ಸಹವಾಸ ರುಚಿಯಾಗಿ, ಸ್ಪೈಸಿಯಾಗಿರುತ್ತೆ.
ತಿಮ್ಮ: ಮತ್ತೆ ಹೆಂಡತಿ?
ಗುಂಡ: ರಾಗಿ ಮುದ್ದೆ ಇದ್ದ ಹಾಗೆ... ಸಹವಾಸ ಅಷ್ಟು ರುಚಿಯಾಗಿರಲ್ಲಾ... ಅದ್ರೆ ಜೀವಕ್ಕೆ ಒಳ್ಳೇದು.
=
ಗಂಡ ಮತ್ತು ಹೆಂಡತಿ ನಡುವೆ ಯಾವುದೋ ವಾದ ವಿವಾದ ಬೆಳೆದು ಗಂಡ ತನ್ನ ಪತ್ನಿಯ ಕೆನ್ನೆಗೆ ಎರಡು ಹೊಡೀತಾನೆ. ಇದರಿಂದ ನೊಂದ ಆಕೆ ಕಣ್ಣೀರಿಡುತ್ತಿದ್ದಾಗ...
ಗಂಡ: ಬೇಜಾರ್ ಮಾಡಿಕೊಳ್ಳಬೇಡ... ಕೆನ್ನೆಗೆ ಹೊಡೆಯೋದು ಪ್ರೀತಿಯ ಸಂಕೇತ.
ಈ ಮಾತು ಕೇಳಿ ತಕ್ಷಣ ಎದ್ದ ಹೆಂಡತಿ ತನ್ನ ಪತಿಯ ಕೆನ್ನೆಗೆ ಹೊಡೆದು, 'ನನಗೇನೂ ನಿಮ್ಮ ಮೇಲೆ ಪ್ರೀತಿ ಇಲ್ಲ ಅಂದ್ಕೊಂಡ್ರಾ?' ಅಂದಳು.
=
ತಿಮ್ಮ: ಅವನು ನನ್ನನ್ನು ಹುಚ್ಚ ಅಂತಾನೆ ಕಣೋ...
ಗುಂಡ: ನಿನ್ನನ್ನು ಯಾರಾದ್ರೂ ಹುಚ್ಚಾಂದ್ರೆ ನೀನು ಕನ್‌ಫ್ಯೂಸ್ ಆಗಬೇಡ, ಬೇಜಾರು ಮಾಡಿಕೊಳ್ಳಬೇಡ, ಸಿಟ್ಟೂ ಮಾಡ್ಕೋಬೇಡ, ಧೈರ್ಯದಿಂದ ನೀನು ಅವನನ್ನು ಕೇಳು; 'ನಿನಗೆ ಹೇಗೆ ಗೊತ್ತಾಯಿತು?' ಅಂತ.
=
ಗುಂಡ ಮತ್ತು ತಿಮ್ಮ ಪ್ರಾಣ ಸ್ನೇಹಿತರು. ಒಂದು ದಿನ ತಿಮ್ಮ ಇದ್ದಕ್ಕಿದ್ದಂತೆ ಸತ್ತುಹೋದ.
ಪೊಲೀಸರಿಗೆ ಅನುಮಾನ ಬಂದು ಕೇಸ್ ದಾಖಲಿಸಿದರು. ಪೊಲೀಸರು ಗುಂಡನನ್ನು ವಿಚಾರಿಸಿದಾಗ...
ಪೊಲೀಸ್: ನೀನು ಮತ್ತು ತಿಮ್ಮ ಪ್ರಾಣ ಸ್ನೇಹಿತರು ತಾನೇ?
ಗುಂಡ: ಹೌದು ಸಾರ್, ಡೌಟೇ ಬೇಡ.
ಪೊಲೀಸ್: ನಿಜ ಹೇಳು, ಅವ್ನು ಹೇಗೆ ಸತ್ತ?
ಗುಂಡ: ಹೊಟ್ಟೆಯೊಳಗೆ ಇಲಿ ಓಡಾಡಿದ ಹಾಗೆ ಆಗುತ್ತೆ ಅಂದ ಸಾರ್... ಅದಕ್ಕೆ...
ಪೊಲೀಸ್: ಅದಕ್ಕೆ ನೀನೇನು ಮಾಡ್ದೆ?
ಗುಂಡ: ಮೆಡಿಕಲ್ ಸ್ಟೋರಿಗೆ ಓಡಿಹೋಗಿ ಇಲಿ ಪಾಷಾಣ ತಂದುಕೊಟ್ಬಿಟ್ಟೆ ಸಾರ್...
=
ಮರಿಗುಂಡ: ನನ್ನಪ್ಪ ಮಹಾ ಹೆದರು ಪುಕ್ಲ ಕಣೋ?
ಮರಿತಿಮ್ಮ: ಅದು ಹೇಗೆ?
ಮರಿಗುಂಡ: ರೋಡ್ ಕ್ರಾಸ್ ಮಾಡುವಾಗಲೆಲ್ಲ ನನ್ನ ಕೈ ಹಿಡ್ಕೊಂಡೇ ಇರ್ತಾರೆ ಕಣೋ!
=
ಒಂದು ಕಾರನ್ನು ಹರಾಜಿಗೆ ಕೂಗುತ್ತಿದ್ದರು. 1 ಲಕ್ಷ, 2 ಲಕ್ಷ, 3 ಲಕ್ಷ... ಗಾಬರಿಗೆ ಬಿದ್ದ ನಾರಾಯಣ ಅಂಥದ್ದೇನಿದೆ ಈ ಕಾರಿನಲ್ಲಿ ಎಂದು ಅಮಾಯಕವಾಗಿ ಪ್ರಶ್ನಿಸಿದ. ಇದು 5 ಬಾರಿ ಆ್ಯಕ್ಸಿಡೆಂಟ್ ಆಗಿದೆ ಸಾರ್. ಐದು ಬಾರಿಯೂ ಹೆಂಡತಿ ಮಾತ್ರ ಸತ್ತಿದ್ದಾಳೆ ಎಂದ ಬ್ರೋಕರ್.
ನಾರಾಯಣ ಮರುಮಾತನಾಡದೆ 8 ಲಕ್ಷ ರು.ಗೆ ಹರಾಜು ಕೂಗಿ, ಈ ಕಾರು ನನಗಿರಲಿ ಎಂದ.
--
ನ್ಯಾನೋ ಕಥೆಗಳು
ಆತ ಅವಳನ್ನು ತುಂಬಾ ಲವ್ ಮಾಡ್ತಿದ್ದ. ಆದ್ರೆ ಹೇಳೋಕೆ ಧೈರ್ಯವಿರಲಿಲ್ಲ. ಹೇಗೆ ಹೇಳೋದು ಅಂತ ಯೋಚ್ನೆ ಮಾಡಿ ಕೊನೆಗೆ ಸಾರ್ವಜನಿಕ ಶೌಚಾಲಯದಲ್ಲಿ 'ಐ ಲವ್ ಯು' ಅಂತ ಬರೆದ. ಅವನು ಬರೆದಿದ್ದನ್ನು ಅವಳು ಓದಲೂ ಇಲ್ಲ, ಇವನ ಪ್ರೀತಿ ಫಲಿಸಲೂ ಇಲ್ಲ.
=
ಗಂಡನಿಗೆ ಹೆಂಡತಿ ಮೇಲೆ ಅನುಮಾನ. ಹೆಂಡತಿಗೆ ಗಂಡನ ಮೇಲೆ ಅನುಮಾನ. ಇದೇ ವಿಷಯಕ್ಕೆ ಇಬ್ಬರಿಗೂ ಸದಾ ಜಗಳವಾಗುತ್ತಿತ್ತು. ನಾನು 'ಆಫೀಸಿಗೆ ಹೋದ ಮರುಗಳಿಗೆಯೇ ಹೆಂಡತಿ ತಿರುಗಲು ಹೋಗುತ್ತಾಳೆ' ಅಂತ ಇವನು, 'ಗಂಡ ಆಫೀಸಿಗೆ ಹೋಗದೆ ಬೇರೆಲ್ಲೋ ಹೋಗುತ್ತಾನೆ' ಅಂತ ಇವಳು. ಇಬ್ಬರೂ ಒಬ್ಬರನ್ನೊಬ್ಬರು ರೆಡ್‌ಹ್ಯಾಂಡ್ ಆಗಿ ಹಿಡಿಯಲು ಯೋಜನೆ ರೂಪಿಸಿದರು. ಆ ದಿನ ಗಂಡ ಆಫೀಸಿಗೆ ಬೇಗನೆ ಹೊರಟ. ಅವನು ಹೊರಟ ಸ್ವಲ್ಪ ಹೊತ್ತಾದ ನಂತರ ಹೆಂಡತಿ ಅವನು ಆಫೀಸಿಗೆ ಹೋಗಿದ್ದಾನೋ ಇಲ್ಲವೋ ಎಂದು ನೋಡಲು ಅವನ ಆಫೀಸಿಗೆ ಹೋದಳು. ಅಲ್ಲಿ ಅವನಿರಲಿಲ್ಲ. ಇತ್ತ ಗಂಡ ಆಫೀಸಿಗೆ ಹೋಗದೆ ಹೆಂಡತಿ ಮನೆಯಲ್ಲಿದ್ದಾಳೋ ಇಲ್ಲವೋ ಅಂತ ನೋಡಲು ಮನೆಗೆ ಬಂದಿದ್ದ. ಅಲ್ಲಿ ಅವಳಿರಲಿಲ್ಲ. ಇಬ್ಬರ ಅನುಮಾನಕ್ಕೂ ಪುಷ್ಠಿ ದೊರೆಯಿತು. ಇಬ್ಬರೂ ವಿಚ್ಛೇದನ ಪಡೆದುಕೊಂಡರು.
=
ಜನಪ್ರತಿನಿಧಿಯಾದರೂ ಜನರ ಕೆಲಸ ಮಾಡಿಕೊಡದ ರಾಜಕಾರಣಿಯೊಬ್ಬರು ಮತ್ತೊಮ್ಮೆ ಆಯ್ಕೆ ಬಯಸಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಇನ್ನೇನು ಭಾಷಣ ಶುರುಮಾಡಬೇಕು ಅನ್ನುವಷ್ಟರಲ್ಲಿ ನೆರೆದಿದ್ದ ಜನರ ಕೈಯಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಯಾವುದೋ ವಸ್ತುವಿರುವುದು ಗೊತ್ತಾಯಿತು. ಕೂಡಲೇ ಆ ರಾಜಕಾರಣಿ ಅಲ್ಲಿದ್ದ ಸಂಘಟಕರನ್ನು ಕರೆದು ಅದೇನೆಂದು ಕೇಳಿದರು. ಆಗ ಸಂಘಟಕರು ಹೇಳಿದ್ದು; ನೋಡಿ ಸಾರ್ ನಮ್ಮ ದಡ್ಡ ಜನಗಳನ್ನು... ಇವರು ಯಾವಾಗ ಬುದ್ಧಿ ಕಲಿಯುತ್ತಾರೋ... ಟೊಮೇಟೊ ಮತ್ತು ಮೊಟ್ಟೆಗಳನ್ನು ನಿಮ್ಮ ಭಾಷಣ ಮುಗಿದ ಮೇಲೆ ಹೊರ ತೆಗೆಯಬೇಕು ಅಂದಿದ್ದೆವು... ಇವರು ಈಗಲೇ ತೆಗೆದುಕೊಂಡು ಕೂತಿದ್ದಾರೆ...!
= ಮಧು ಮಾಲ್ವೆ, ಸಾಗರ