

ವಾಷಿಂಗ್ ಟನ್: ತೀವ್ರ ಕುತೂಹಲ ಕೆರಳಿಸಿದ್ದ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಟೈನಲ್ಲಿ ಅಂತ್ಯವಾಗಿದ್ದು, ಇಂಡೋ ಅಮೆರಿಕನ್ ವನ್ಯಾ ಶಿವಶಂಕರ್ ಮತ್ತು ಗೋಕುಲ್ ವೆಂಕಟಾಚಲಂ ಅವರು ಜಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಈ ಬಾರಿಯ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಕೂಡ ಟೈನಲ್ಲಿ ಅಂತ್ಯಗೊಂಡಿದ್ದು, 13 ವರ್ಷದ ವನ್ಯಾ ಶಿವಶಂಕರ್ ಮತ್ತು 14 ವರ್ಷದ ಗೋಕುಲ್ ವೆಂಕಟಾಚಲಂ ಅವರು ಜಂಟಿಯಾಗಿ ಚಿನ್ನದ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಈ ಬಾರಿ ಜಂಟಿ ಪ್ರಥಮ ಸ್ಥಾನದಲ್ಲಿರುವ ವನ್ಯಾ ಶಿವಶಂಕರ್ 2009ರಲ್ಲಿ ನಡೆದಿದ್ದ ಇದೇ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದ ಕಾವ್ಯ ಶಿವಶಂಕರ್ ಅವರ ಸಹೋದರಿ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಕಾನ್ ಸಾಸ್ ನಿವಾಸಿಯಾಗಿರುವ ವನ್ಯಾ ಶಿವಶಂಕರ್ ಅಕ್ಕನ ಸಾಧನೆಯನ್ನು ಈಗ ಸರಿಗಟ್ಟಿದ್ದಾಳೆ.
ಅಮೆರಿಕದ ಚೆಸ್ಟರ್ ಫೀಲ್ಡ್ ನಿವಾಸಿ ಗೋಕುಲ್ ವೆಂಕಟಾಚಲಂ ಅವರಿಗೂ ಇದು ಕೊನೆಯ ಅವಕಾಶವಾಗಿತ್ತು. ಇಬ್ಬರು ಸ್ಫರ್ಧಾಳುಗಳು ಐದನೇ ಬಾರಿ ಸ್ಪೆಲ್ಲಿಂಗ್ ಬೀ ನಲ್ಲಿ ಭಾಗಿಯಾಗಿದ್ದರು.
ಇನ್ನು ಈ ಜಂಟಿ ವಿಜಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವನ್ಯಾ ಶಿವಕುಮಾರ್ ತನ್ನ ಗೆಲುವನ್ನು ತನ್ನ ಅಜ್ಜಿಗೆ ಅರ್ಪಿಸಿದ್ದಾಳೆ. "ಕಠಿಣ ಪರಿಶ್ರಮ ಈ ಸಾಧನೆಗೆ ಕಾರಣವಾಯಿತು. ಕೊನೆಯ ಸುತ್ತು ಎಂದು ನಾನು ಮೊದಲು ಸ್ವಲ್ಪ ಆತ್ಮವಿಶ್ವಾಸ ಕಳೆದುಕೊಂಡಿದ್ದೆ. ಆದರೆ ನಂತರ ಸ್ಪರ್ಧೆಯಲ್ಲಿ ಗಂಭೀರವಾದೆ" ಎಂದು ಗೋಕುಲ್ ಹೇಳಿದ್ದಾರೆ. ಅಂತಿಮ ಸುತ್ತಿನಲ್ಲಿ ವನ್ಯಾ ಮತ್ತು ಗೋಕುಲ್ ನಡುವೆ 10 ಸುತ್ತುಗಳು ನಡೆದವು. ಆದರೆ ಅಂತಿವಾಗಿ ಒಂದೊಂದು ಶಬ್ದದ ಅರ್ಥ ವಿವರಣೆ ನೀಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಪ್ರಶಸ್ತಿ ಹಂಚಿಕೊಂಡರು.