

ಪ್ರಕೃತಿಯಲ್ಲಿ ಬಣ್ಣಗಳ ಸಮ್ಮೇಳ. ಮಾವಿನ ಹೂ ಬಿಳುಪು, ಅಶ್ವತ್ಥ ಮರದ ಚಿಗುರೆಲೆಯ ನಸುಗೆಂಪು, ಬೋಗನ್‌ವಿಲ್ಲಾ, ಮೇಫ್ಲವರ್‌ಗಳ ಕೆಂಪು, ಟ್ಯುಬೀಬಿಯದ ಹಳದಿ ಪ್ರಕೃತಿಯ ಬಣ್ಣಗಳೊಂದಿಗೆ ಮೇಳೈಸಿದೆ.
ಉರಿಬಿಸಿಲಲ್ಲಿ ಈ ಮರಗಳೆಲ್ಲಾ ಚಿಗುರ್ತಾ ಇವೆ, ಹೂ ಬಿಡ್ತವೆ, ಕಾಯಾಗ್ತವೆ. ಅರ್ಥವಾಗದ ಸೋಜಿಗ. ಈ ಹೂಗಳಿಗೆ ಬಣ್ಣ ತುಂಬೋರು ಯಾರು? ಅದೂ ಒಂದೊಂದೂ ಬೇರೆ ಬೇರೆ ಬಣ್ಣ, ಬೇರೇ ಆಕಾರ. ನಾವೇ ಕಲಾವಿದರು ಅಂದ್ಕೋತೀವಿ, ಪ್ರಕೃತಿಗಿಂತ ದೊಡ್ಡ ಕಲಾವಿದ ಬೇರೆ ಇಲ್ಲ.
ಉರಿಬಿಸಿಲು ಶುರುವಾಗುತ್ತಿದ್ದಂತೆ ಬೀದಿಗಳಲ್ಲಿ, ಹೊಲಗಳ ಅಂಚಿನಲ್ಲಿ, ಗುಡ್ಡಗಳ ತಪ್ಪಲಲ್ಲಿ ಈ ಮರಗಳೆಲ್ಲಾ ಚಿಗುರಲು ಶುರುವಾಗಿರುತ್ತವೆ. ಸರಿಯಾಗಿ ವಸಂತಋತು ಬಂದಾಗ ಚಿಗುರಬೇಕು, ಹೂಬಿಡಬೇಕು ಅಂತೆಲ್ಲ ಇವುಗಳಿಗೆ ಹೇಗೆ ಗೊತ್ತಾಗುತ್ತದೆ? ಯಾರು ಸಂದೇಶ ಕಳುಹಿಸುತ್ತಾರೆ? ತನ್ನನ್ನು ನೋಡಿ ಯಾರಾದರೂ ಖುಷಿಪಡುತ್ತಾರಾ ಎಂಬ ಗೊಡವೆ ಇವುಗಳಿಗಿಲ್ಲ. ಕಡಿದಷ್ಟೂ ಚಿಗುರಿ ಬೆಳೆಯುತ್ತವೆ, ಹೂಬಿಡುತ್ತವೆ. ಇಲ್ಲಿ ಮನುಷ್ಯನಿಗೆ ಪಾಠವಾಗಬಲ್ಲ ಸ್ಫೂರ್ತಿಸೆಲೆ ಅಡಗಿದೆ. ಬೇವಿನೆಲೆಯ ಕಹಿಯಲಿ, ಮಾವಿನ ಚಿಗುರೆಲೆಯಲಿ, ಹೂವಿನ ಕಂಪಿನಲಿ, ನೆರಳ ತಂಪಿನಲಿ, ಬೆಲ್ಲದ ಸಿಹಿಯಲಿ ಹೊಸ ವರುಷದ ಹೊಸ ಹರುಷವಿದೆ. ಅದನ್ನು ಆಸ್ವಾದಿಸೋಣ...
- ಚಿತ್ರ ಲೇಖನ: ವೀಣಾ ಅನಂತ್