

ತನ್ನ ಸಂತತಿಯ ಸುಭದ್ರತೆ, ಅವುಗಳಿಗೆ ಉತ್ತಮ ಬದುಕು ಕಲ್ಪಿಸುವ ಇರಾದೆ ಎಲ್ಲ ಜೀವಿಗಳಲ್ಲೂ ಇರುತ್ತದೆ. ಮನುಷ್ಯ ತನ್ನ ಮಕ್ಕಳು, ಮರಿಮಕ್ಕಳ ಸುಖ ಬಯಸುತ್ತಾನೆ, ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾನೆ, ಉಜ್ವಲ ಭವಿಷ್ಯ ಕಲ್ಪಿಸಲು ಹೆಣಗಾಡುತ್ತಾನೆ. ಪ್ರಾಣಿಗಳೂ ಅಷ್ಟೆ. ಮಗುವಿಗೆ ಜನ್ಮ ನೀಡಿದೊಡನೆ ಕೆಲವು ಪ್ರಾಣಿಗಳು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಿ, ಮರಿಗಳಿಗೆ ಸಂಕಷ್ಟ ಎದುರಾಗದಂತೆ ಬೆಳೆಸುತ್ತವೆ. ಮತ್ತೆ ಕೆಲವು ಮೊಟ್ಟೆಯಿಡಲು ಸಾವಕಾಶವಾದ ಪ್ರದೇಶ ಹುಡುಕಿ ಅಲ್ಲೇ ಮೊಟ್ಟೆಗೆ ಕಾವು ಕೊಡುತ್ತವೆ. ಮರಿಗಳಿಗೆ ಸಮೃದ್ಧ ಆಹಾರ ಸಿಗುವ ಜಾಗವನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಪ್ರಾಣಿಗಳ ಕಥೆ ಹೀಗಾದರೆ ಸಸ್ಯಗಳ ಪಾಡೇನು? ಪಾಪ, ಅವುಗಳಿಗೆ ಒಂದು ಕಡೆಯಿಂದ ಇನ್ನೊಂದೆಡೆಗೆ ತೆರಳಲು ಸಾಧ್ಯವಿದೆಯೇ? ತನ್ನ ಬೀಜಗಳು ಕುಡಿಯೊಡೆದು ಫಲಭರಿತ ಸಸ್ಯವಾಗಬೇಕೆಂಬ ಆಸೆ ಅವುಗಳಿಗೂ ಇರಲಿಕ್ಕಿಲ್ಲವೇ?
ಖಂಡಿತಾ ಇದೆ. ಹೆಚ್ಚಿನ ಗಿಡಗಳು ವಿಶೇಷವಾದ ಬಾಹ್ಯ ತಂತ್ರಗಳ ಮೂಲಕ ಬೀಜಗಳನ್ನು ಚದುರಿಸಿ ಉತ್ತಮ ಸ್ಥಳದಲ್ಲಿ ಅವುಗಳು ಮೊಳಕೆಯೊಡೆಯುವಂತೆ ಮಾಡುತ್ತವೆ. ಅಂಥ ತಂತ್ರಗಳೆಂದರೆ...
ಗಾಳಿ
ಹಲವು ಗಿಡ, ಮರಗಳು ಗಾಳಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಕೆಲವು ಗಿಡಗಳ ಬೀಜಗಳು ಕೂದಲಿನ ಗೊಂಚಲಿನಂತೆ ಕಾಣುತ್ತವೆ. ಇವುಗಳು ಅತಿ ಹಗುರವಾಗಿದ್ದು, ಇವುಗಳನ್ನು ಗಾಳಿಯು ಬೀಸುವಾಗ ತನ್ನೊಂದಿಗೆ ಒಂದು ಪ್ರದೇಶದಿಂದ ಮತ್ತೊಂದೆಡೆಗೆ ಒಯ್ಯುತ್ತದೆ. ಹೊಸ ಸ್ಥಳದಲ್ಲಿ ಬೀಜ ಕುಡಿಯೊಡೆಯುತ್ತದೆ. ಉದಾ: ಕಾಡು ಸೇವಂತಿಗೆ, ಕಣಗಿಲು (ರೋಸ್ಬೇ), ಸಿಕಮೋರ್ ಹಾಗೂ ಮೇಪಲ್ ಮರಗಳು.
ಅಂಟು
ಕೆಲವೊಂದು ಗಿಡಗಳಲ್ಲಿನ ಬೀಜಗಳ ಹೊರಗಿನ ಭಾಗ ಅಂಟಂಟಾಗಿ ಅಥವಾ ಜಿಗುಟಾಗಿರುತ್ತವೆ. ಯಾವುದಾದರೂ ಪ್ರಾಣಿ ಆ ಗಿಡದ ಪಕ್ಕದಲ್ಲಿ ಹಾದುಹೋದಾಗ ಪ್ರಾಣಿಯ ಮೈಗೆ ಬೀಜ ಅಂಟಿಕೊಳ್ಳುತ್ತದೆ. ವೆಲ್ಕ್ರೋದಂತೆ ಪ್ರಾಣಿ ಮೈಗೆ ಅಂಟಿಕೊಂಡ ಬೀಜವು ಮತ್ತೊಂದು ಪ್ರದೇಶಕ್ಕೆ ಹೋಗಿ ಮೊಳಕೆಯೊಡೆಯುತ್ತದೆ. ಕೆಲವೊಂದು ಗಿಡಗಂಟಿಗಳ ನಡುವೆ ಹಾದುಹೋಗುವಾಗ ಬಟ್ಟೆಗೆ ಬೀಜಗಳು ಅಂಟಿಕೊಂಡ ಅನುಭವ ನಿಮಗೆ ಆಗಿರಬಹುದು. ಅದೂ ಬೀಜ ಚದುರಿಸುವಿಕೆಯ ತಂತ್ರವೇ. ಉದಾ: ಬರ್- ರೀಡ್, ಗೂಸ್ಗಾರಸ್ (ಕ್ಲೀವರ್), ಆಫ್ರಿಕನ್ ಗ್ರಾಪಲ್ ಗಿಡ ಇತ್ಯಾದಿ.
ನೀರು
ನದಿ, ತೊರೆಗಳ ಬದಿಯಲ್ಲಿ ಹುಟ್ಟಿಕೊಳ್ಳುವ ಸಸ್ಯಗಳು ಹೆಚ್ಚಾಗಿ ನೀರಿನಲ್ಲಿ ತೇಲುವಂಥ ಬೀಜಗಳನ್ನು ಹೊಂದಿರುತ್ತವೆ. ಏಕೆಂದರೆ, ಈ ಬೀಜಗಳು ನೇರವಾಗಿ ನೀರಿಗೆ ಬಿದ್ದು, ಹರಿದುಕೊಂಡು ಹೋಗಿ ಬೇರೆಲ್ಲಾದರೂ ಹುಟ್ಟಲಿ ಎಂದು. ಸಮುದ್ರ ತೀರದ ಗಿಡ, ಮರಗಳು ಸಮುದ್ರದ ಅಲೆಗಳು ಹಾಗೂ ಕಡಲಿನ ಸೆಳೆತಗಳನ್ನು ಬಳಸಿಕೊಂಡು ತನ್ನ ಬೀಜವನ್ನು ಚದುರಿಸುತ್ತವೆ. ತೆಂಗಿನಮರದಿಂದ ಬೀಳುವ ಕಾಯಿಗಳು ಸಮುದ್ರದಲ್ಲಿ ಎಷ್ಟೋ ದೂರದವರೆಗೆ ಹೋಗುತ್ತವೆ ಎಂಬುದು ನಿಮಗೆ ಗೊತ್ತಿರಬಹುದು. ಇಂಥ ಮತ್ತೊಂದಿಷ್ಟು ಸಸ್ಯಗಳೆಂದರೆ, ಸ್ಯಾಂಫೈರ್ (ಸೀ-ಬೀನ್), ಹಿಮಾಲಯನ್ ಬಾಲ್ಸಮ್.
ಹೂತುಹೋದ ಆಹಾರ
ಕೆಲವು ಬೀಜಗಳು ತೈಲಮಯ ಹಾಗೂ ತಿನ್ನಲು ಯೋಗ್ಯವಾದ ಕವರ್ ಹೊಂದಿರುತ್ತವೆ. ಇರುವೆಗಳು ಇಂಥ ಬೀಜಗಳನ್ನು ಗೂಡಿಗೆ ಹೊತ್ತುಕೊಂಡು ಹೋಗುತ್ತವೆ. ಪೌಷ್ಟಿಕಯುಕ್ತ ಬಾಹ್ಯ ಕವರ್ ಅನ್ನು ತಿನ್ನುತ್ತವೆ. ಒಳಗಿನ ಬೀಜವನ್ನು ಕೆಳಕ್ಕೆ ಹಾಕುತ್ತವೆ. ಅವು ಅಲ್ಲಿಯೇ ಚಿಗುರೊಡೆಯುತ್ತವೆ. ಅಂತೆಯೇ ಅಳಿಲುಗಳೂ ಚಳಿಗಾಲಕ್ಕೆಂದು ಕೆಲವು ಬೀಜಗಳನ್ನು ಮಣ್ಣಿನಡಿ ಸಂಗ್ರಹಿಸಿಡುತ್ತವೆ. ಅವುಗಳಲ್ಲಿ ಕೆಲವನ್ನು ತಿಂದರೆ, ಮತ್ತೆ ಕೆಲವನ್ನು ಅಲ್ಲಿಯೇ ಬಿಟ್ಟುಬಿಡುತ್ತವೆ. ಆ ಬೀಜಗಳಿಗೆ ಅಲ್ಲೇ ಕುಡಿಯೊಡೆಯುವ ಅವಕಾಶ. ಉದಾ: ಹರಳೆಣ್ಣೆ ಗಿಡ, ಹಾಲುಸೊಪ್ಪು (ಪಾಲಿಗಲ ಕುಲದ ಗಿಡ), ಓಕ್ ಮರ.
ಪಚನಗೊಂಡ ಆಹಾರ
ಇಂಥ ರಿಸ್ಕ್ ತೆಗೆದುಕೊಂಡೂ ಕೆಲ ಸಸ್ಯಗಳು ತನ್ನ ಮರಿಬೀಜಗಳಿಗೆ ಜೀವ ನೀಡಲು ಹಾತೊರೆಯುತ್ತವೆ. ಅದು ಹೇಗೆ ಗೊತ್ತಾ? ಈ ಗಿಡಗಳು ಸೇವನೆ ಯೋಗ್ಯ ಹಣ್ಣುಗಳನ್ನು ಉತ್ಪತ್ತಿ ಮಾಡುತ್ತವೆ. ಪ್ರಾಣಿಗಳು ಹಣ್ಣನ್ನು ತಿನ್ನುತ್ತವೆ. ಬೀಜಗಳು ಪ್ರಾಣಿಯ ದೇಹದೊಳಗೆ ಪಚನಕ್ರಿಯೆಗೆ ಒಳಗಾಗುತ್ತವೆ. ನಂತರ ಪ್ರಾಣಿಯು ಮಲ ವಿಸರ್ಜಿಸುವಾಗ ಅದರೊಂದಿಗೆ ಪೌಷ್ಟಿಕಯುಕ್ತವಾಗಿ ಹೊರಬರುವ ಬೀಜಗಳು ನಂತರ ಅಲ್ಲೇ ಕುಡಿಯೊಡೆಯುತ್ತವೆ. ಉದಾ: ಸೇಬಿನ ಮರ, ಸ್ಟ್ರಾಬೆರಿ, ಟೊಮೆಟೋ ಇತ್ಯಾದಿ.
ಸ್ಫೋಟ/ ಚಿಮ್ಮುವಿಕೆ
ಕೆಲ ಮರ/ ಗಿಡಗಳ ಹಣ್ಣುಗಳು ಒಣಗಿ ಅವುಗಳ ಹೊರಪದರ ಒಮ್ಮೆಗೇ ಹೋಳಾಗುತ್ತವೆ. ಆಗ ಆ ಬೀಜಗಳು ದೂರ ಹಾರಿ ಚಿಗುರೊಡೆಯಲು ಆರಂಭವಾಗುತ್ತವೆ. ಉದಾಹರಣೆಗೆ ಹೇಳುವುದಾದರೆ ಸೌತೆಕಾಯಿ. ಇದು ಪೂರ್ತಿ ಹಣ್ಣಾದ ಬಳಿಕ ತಾನಾಗಿಯೇ ಒಡೆಯುತ್ತದೆ. ಆಗ ಅದರೊಳಗಿನ ಬೀಜಗಳು ಸ್ಫೋಟಗೊಂಡು, 6 ಮೀಟರ್ನಷ್ಟು ದೂರಕ್ಕೆ ಹಾರುತ್ತವೆ. ಮಿಕ್ಕ ಉದಾ: ಬ್ರೂಮ್ ಗಿಡ (ಹಳದಿ ಹೂವಿನ ಕುರುಚಲು ಗಿಡ), ಕ್ರೇನ್ಸ್ಬಿಲ್ ಜರೇನಿಯಂ, ಬಿಸೀ-ಲಿಜ್ಜೀಸ್.
- ದಿಯಾ