

ಇದೊಂದು ಅ'ಮರ' ಕಥೆ. ಸುಮಾರು ಮೂರು ಶತಮಾನಗಳ ಇತಿಹಾಸವನ್ನು ತನ್ನೊಡಲಲ್ಲಿ ಇಟ್ಟುಕೊಂಡು ಬಾಳಿದ ಮರ, ಕಾಲದ ಕರೆಗೆ ಓಗೊಟ್ಟು ಒಣಗಿನಿಂತ ಮೇಲೂ ವಿಶೇಷವೆನಿಸಿಕೊಂಡಿದೆ. ಬೆಲೆಬಾಳುವ ಈ ಬೀಟೆ ಮರ ಬರೋಬ್ಬರಿ 293 ವರ್ಷ ತೊನೆದಾಡುತ್ತಿತ್ತು.
ಉತ್ತರ ಕನ್ನಡ ಜಿಲ್ಲೆಯ ದಟ್ಟ ಅಡವಿಯಿಂದ ಕೂಡಿದ ತಾಲೂಕು ಜೋಯಿಡಾ. ಇಲ್ಲಿನ ಪಾಂಜೇಲಿ ಎಂಬಲ್ಲಿನ ಪಾಟೆ ಅರಣ್ಯದಲ್ಲಿದ ಬೃಹತ್ ಬೀಟೆ ಮರ ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ಅದರಲ್ಲೂ ದಟ್ಟ ಕಾಡಿನಲ್ಲಿ ನೆಲಕ್ಕೊರಗಿದ್ದ ಈ ಮರವನ್ನು ಕತ್ತರಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಸುತ್ತಮುತ್ತಲಿನ ಮರಗಳನ್ನೆಲ್ಲ ಕಡಿಯಲಾಗಿದ್ದರೂ ಈ ಮರವನ್ನು ಮಾತ್ರ ಹಾಗೆಯೇ ಬಿಡಲಾಗಿತ್ತು.
ಈ ಭಾರಿ ಗಾತ್ರದ ಮರದ ಬಗ್ಗೆ ಪರಿಸರ ಬರಹಗಾರ ಶಿವಾನಂದ ಕಳವೆ 1985ರಲ್ಲಿ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಪತ್ರ ಬರೆದು ಈ ಮರವನ್ನು ಜಿಲ್ಲೆಯ ವೃಕ್ಷ ಸ್ಮಾರಕವಾಗಿ ರಕ್ಷಿಸುವಂತೆ ವಿನಂತಿಸಿದ್ದರು.
ಮತ್ತೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಮರ ಕತ್ತರಿಸಲು ಮುಂದಾದರು. ಆದರೆ, ಹಾಗೆ ಕತ್ತರಿಸುವುದು ಮಾತ್ರ ಭಾರಿ ಸವಾಲಾಗಿತ್ತು. ಇದಕ್ಕೆಂದೇ ಕೋಲ್ಕತಾದಿಂದ 12 ಅಡಿಗೂ ಹೆಚ್ಚು ಉದ್ದದ ಗರಗಸವನ್ನು ತರಿಸಲಾಯಿತು. 25ಕ್ಕೂ ಹೆಚ್ಚು ಕಾರ್ಮಿಕರು ಕ್ರೇನ್ ಸಹಾಯದಿಂದ ಮರ ಕತ್ತರಿಸುವ ಕೆಲಸ ಆರಂಭಿಸಿದರು. ಅಂತೂ ಹರಸಾಹಸ ಪಟ್ಟು ಕತ್ತರಿಸಿದ ಮೇಲೆ ಜೋಯಿಡಾ ಕಟ್ಟಿಗೆ ಡಿಪೋಗೆ ತಂದು ಹರಾಜಿಗಿಟ್ಟರು. ಬರೋಬ್ಬರಿ 15 ಅಡಿ ಸುತ್ತಳತೆ ಹೊಂದಿದ್ದ ಈ ಮರ 1986ರ ಸುಮಾರಿಗೆ 8.30 ಲಕ್ಷ ರು.ಗೆ ಹರಾಜಾಯಿತು.
ಈ ಮರದ ದಿಮ್ಮಿಯ ಒಂದೆರಡು ಸೀಳನ್ನು ಪ್ರದರ್ಶಿನಕ್ಕಿಡುವ ದೃಷ್ಟಿಯಿಂದ ಕತ್ತರಿಸುವ ಪ್ರಯತ್ನ ನಡೆಯಿತು. ಮಂಗಳೂರಿನ ಕಟ್ಟಿಗೆ ಮಿಲ್ನಲ್ಲಿ ಕತ್ತರಿಸಲಾಯಿತು. ಈ ಮರದ ಉಂಗುರಗಳನ್ನು ನೋಡಿ ಮರಕ್ಕೆ 293 ವರ್ಷವಾಗಿರಬೇಕೆಂದು ತಿಳಿಯಲಾಯಿತು. ಈ ಉಂಗುರಗಳ ದಾಖಲೆಯನ್ನು ಅಭ್ಯಸಿಸಿದರೆ ಹಲವು ಮಹತ್ವದ ಸಂಗತಿಗಳು ಹೊರಬೀಳಲು ಸಾಧ್ಯವಿದೆ. ಡೆಂಡ್ರಾಕ್ರೋನಾಲಜಿ ವಿಧಾನದಿಂದ ಜೋಯಿಡಾದ ಮೂರು ಶತಮಾನಗಳ ಹವಾಮಾನ ಮತ್ತಿತರ ವಿವರಗಳನ್ನು ತಿಳಿದುಕೊಳ್ಳಬಹುದು.
ಈ ಮರ ಹುಟ್ಟುವಾಗ ಆ ಪ್ರದೇಶದಲ್ಲಿ ಸೋದೆ ಅರಸರು ರಾಜ್ಯಭಾರ ಮಾಡುತ್ತಿದ್ದರು. ಮರ ಧರೆಗುರುಳುವಾಗ ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕ ಕಳೆದಿತ್ತು. ಅರಣ್ಯ ಬಿಕ್ಕಟ್ಟಿನ ಈ ದಿನಗಳಲ್ಲಿ ಇಂಥ ಮರಗಳು ಕಾಣಸಿಗಬಹುದೇ ಎಂಬ ಪ್ರಶ್ನೆಯನ್ನೂ ಈ ಮರ ಹುಟ್ಟುಹಾಕಿದೆ.
ಸದ್ಯ ಮರದ ಸೀಳನ್ನು ಕಾರವಾರದ ವಿಜ್ಞಾನ ಕೇಂದ್ರದ ಎದುರು ಪ್ರದರ್ಶನಕ್ಕಿಡಲಾಗಿದೆ.
- ವಸಂತಕುಮಾರ್ ಕತಗಾಲ
vasant800@gmail.com