ಬಿಲ್ವ ಬಣ

ಬಿಲ್ವ ಬಣ
Updated on: 

ಒಂದೆಡೆ ಶಾಸಕರು, ಮಂತ್ರಿಗಳು, ಅಧಿಕಾರಿಗಳು, ಗಣ್ಯರು ವನಮಹೋತ್ಸವ ಎಂಬ ವಾರ್ಷಿಕ ಪ್ರಹಸನದಲ್ಲಿ ಕೈಯಲ್ಲೊಂದು ಗಿಡ ಹಿಡಿದು ಫೊಟೋಗೆ ಪೋಸು ಕೊಡುತ್ತಾ, ಉದ್ದುದ್ದ ಭಾಷಣ ಬಿಗಿದು ಪ್ರಚಾರದ ಕೂಪಕ್ಕೆ ಬಿದ್ದಿದ್ದಾರೆ. ಇನ್ನೊಂದೆಡೆ ಇದೇ ಮಂದಿ ಭಾರಿ ಉದ್ದಿಮೆಗಳನ್ನು ತಂದು ಹಾಕಿ ಕರಾವಳಿ ಜಿಲ್ಲೆಗಳ ಸಾವಿರಾರು ಎಕರೆ ಹಸಿರಿನ ನಾಶಕ್ಕೆ ಕಾರಣರಾಗಿದ್ದಾರೆ.

ಈ ವೈರುಧ್ಯದ ನಡುವೆಯೂ ಇಲ್ಲೊಂದು ಸಂಘಟನೆ ಹುಟ್ಟಿಕೊಂಡಿದೆ. ಅದು 'ಗ್ರೀನ್ ಇಂಡಿಯಾ ಮೂವ್‌ಮೆಂಟ್‌'. ಇದರ ಉದ್ದೇಶ ಹಸಿರು ಬೆಳೆಸುವುದು, ಉಳಿಸುವುದು. ಪರಿಸರದ ಬಗ್ಗೆ ಅನೇಕ ಅತ್ಯಮೂಲ್ಯ ಪುಸ್ತಕಗಳನ್ನು ಬರೆದಿರುವ ಮುನಿಯಾಲ್ ಗಣೇಶ್ ಶೆಣೈ ನೇತೃತ್ವದಲ್ಲಿ ಹತ್ತಿಪ್ಪತ್ತು ಯುವ ಹಸಿರುಪ್ರಿಯರು ಈ ಸಂಘಟನೆ ಹುಟ್ಟಿಗೆ ಶ್ರಮಿಸಿದ್ದಾರೆ. ಆರಂಭದಲ್ಲಿ, ಈ ಮಳೆಗಾಲದಲ್ಲಿ 2,000 ಬಿಲ್ವಪತ್ರೆ ಗಿಡಗಳನ್ನು ನೆಟ್ಟು ಬೆಳೆಸುವ ಗುರಿ ಹಾಕಿಕೊಂಡಿದ್ದಾರೆ. ಅದಕ್ಕಾಗಿ 'ಬಿಲ್ವ ವೃಕ್ಷ ಆಂದೋಲನ' ಆರಂಭಿಸಿ ಈಗಾಗಲೇ 3 ತಿಂಗಳಲ್ಲಿ 1,200 ಗಿಡ ನೆಟ್ಟಿದ್ದಾರೆ.

ದಾಖಲೀಕರಣ, ಪರಿಶೀಲನೆ
ಗಿಡ ನೆಡುವುದು ಮಾತ್ರವಲ್ಲ. ಪ್ರತಿ ಗಿಡವನ್ನೂ ದಾಖಲೀಕರಿಸಲಾಗಿದೆ. ಆಗಾಗ್ಗೆ ಅವುಗಳನ್ನು ಪರಿಶೀಲಿಸಲಾಗುತ್ತದೆ. ಅದರ ಮಾಲೀಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಸಂಘಟನೆಯ ಮುಂದಿನ ಕೆಲಸವಾಗಿದೆ.

ಕುಂದಾಪುರದಲ್ಲಿ ಆರಂಭವಾದ ಈ ಸಂಘಟನೆ ಈಗಾಗಲೇ ಸಿದ್ದಾಪುರ ಎಂಬಲ್ಲಿ ಶಾಖೆ ಹೊಂದಿದೆ. ಕೆಲವೇ ದಿನಗಳಲ್ಲಿ ಕಾರ್ಕಳ ತಾಲೂಕಿನ ಹೆಬ್ರಿ, ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಶಾಖೆಗಳು ಆರಂಭವಾಗಲಿವೆ ಮತ್ತು ನೂರಾರು ಬಗೆಯ ಔಷಧ ಗಿಡಗಳನ್ನು ನೆಟ್ಟು ಬೆಳೆಸುವುದಕ್ಕೆ ಸಿದ್ಧತೆಗಳಾಗಿವೆ. ನಾಡಿನಾದ್ಯಂತ ಈ ಆಂದೋಲನ ಹಬ್ಬಬೇಕೆಂಬುದು ಅಧ್ಯಕ್ಷ ಗಣೇಶ್ ಮುನಿಯಾಲ್ ಹೆಬ್ಬಯಕೆ.

ಪ್ರಸ್ತುತ ಕುಂದಾಪುರ ತಾಲೂಕಿನ ಸುಮಾರು 15ಕ್ಕೂ ಹೆಚ್ಚು ಶಾಲಾ ಕಾಲೇಜು, 50ಕ್ಕೂ ಹೆಚ್ಚು ದೇಗುಲ ಆವರಣಗಳಲ್ಲಿ ಮತ್ತು ಆಸಕ್ತಿ ಇರುವ 300 ಮನೆಗಳಲ್ಲಿ ಈ ಸಂಘಟನೆ ಬಿಲ್ವ ಗಿಡಗಳನ್ನು ನೆಟ್ಟಿದೆ. ಬೆಳ್ತಂಗಡಿಯಿಂದ ಹಣ ಕೊಟ್ಟು ಗಿಡಗಳನ್ನು ಖರೀದಿಸಿ ಉಚಿತವಾಗಿ ವಿತರಿಸುತ್ತಿದೆ.

ಕೋಟೇಶ್ವರನ ಲಕ್ಷ ಅರ್ಚನೆಗೂ ಬಿಲ್ವ ಸಿಕ್ಕಲಿಲ್ಲ!
ಗ್ರೀನ್ ಇಂಡಿಯಾ ಮೂವ್‌ಮೆಂಟ್ ಮೂಲಕ ಗಿಡಗಳನ್ನು ನೆಡುವುದಕ್ಕೆ ಉದ್ದೇಶಿಸಿದ್ದೇನೋ ನಿಜ. ಆದರೆ ಬಿಲ್ವ ಗಿಡವೇ ಯಾಕೆ? ಅದರ ಹಿಂದೆಯೂ ಒಂದು ಕುತೂಹಲಕರ ಘಟನೆ ಇದೆ.
ಈಶ್ವರನಿಗೆ ಬಿಲ್ವಪತ್ರೆಯಿಂದ ಪೂಜಿಸುವುದು ಬಹಳ ಶ್ರೇಷ್ಠ. ಕಳೆದವರ್ಷ ಕುಂದಾಪುರದ ಕೋಟೇಶ್ವರ ದೇಗುಲದಲ್ಲಿ ಲಕ್ಷ ಬಿಲ್ವ ಅರ್ಚನೆ ಮಾಡುವುದಕ್ಕೆ ನಿರ್ಧರಿಸಲಾಯಿತು. ಅದಕ್ಕೆ 3 ಎಲೆಗಳಿರುವ 1 ಲಕ್ಷ ಬಿಲ್ಪಪತ್ರೆಗಳು ಬೇಕಾಗಿತ್ತು. ಕೋಟೇಶ್ವರ, ಕುಂದಾಪುರ ತಾಲೂಕಿನಲ್ಲೆಲ್ಲಾ ತಿರುಗಾಡಿದರೂ 1 ಲಕ್ಷ ಬಿಲ್ಪಪತ್ರೆ ಸಂಗ್ರಹಿಸುವುದಕ್ಕೆ ಕಷ್ಟವಾಯಿತು. ಯಾಕೆಂದರೆ ಬಿಲ್ಪವೃಕ್ಷಗಳೇ ಇಲ್ಲ, ಇದ್ದರೂ ಅವುಗಳಲ್ಲಿ ಎಲೆಗಳಿರುವುದಿಲ್ಲ. ಸಂಪ್ರದಾಯ ಎಂಬಂತೆ ಈಶ್ವರನ ದೇವಾಲಯಗಳಲ್ಲಿ 1 ಬಿಲ್ಪ ವೃಕ್ಷವನ್ನು
ಬೆಳೆಸಿರುತ್ತಾರೆ, ದೇವಸ್ಥಾನಕ್ಕೆ ಬರುವ ಭಕ್ತರು ಗಿಡದಲ್ಲಿದ್ದ ಎಲೆಗಳನ್ನು ಕಿತ್ತು ಗಿಡ ಬೋಳಾಗಿರುತ್ತದೆ. ಆದ್ದರಿಂದ ಪ್ರತಿ ದೇಗುಲದಲ್ಲಿ ಒಂದೊಂದು ಬಿಲ್ಪವೃಕ್ಷಗಳನ್ನು ನೆಟ್ಟು, ಅದನ್ನು ಒಳ್ಳೆಯ ರೀತಿಯಲ್ಲಿ ಪೋಷಿಸಬೇಕು ಎನ್ನುವ ಸಂಕಲ್ಪವನ್ನು ಅಂದೇ ಕೈಗೊಂಡಿದ್ದೆವು. ಅದರಂತೆ ಈ ಸಂಘಟನೆ ಮೊದಲ ಆಂದೋಲನವನ್ನು ಬಿಲ್ವವೃಕ್ಷಾರೋಪಣದಿಂದ ಶುರು ಮಾಡಿದೆವು ಎನ್ನುತ್ತಾರೆ ಸಂಘಟನೆಯ ಸದಸ್ಯರಲ್ಲೊಬ್ಬರಾದ ಸಂತೋಷ್ ಕೋಣಿ. ಮಾಹಿತಿಗೆ ಸಂಪರ್ಕಿಸಿ- 9341839965.

ಸಂಘಟನೆಯ ಗುರಿ
ಅಳಿವಿನಂಚಿನಲ್ಲಿರುವ ಅಮೂಲ್ಯ ಗಿಡಗಳನ್ನು ಗುರುತಿಸುವುದು, ಅವುಗಳನ್ನು ನೆಟ್ಟು ಬೆಳೆಸುವುದು ಮತ್ತು ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸುವುದು ಸಂಘಟನೆಯ ಗುರಿ. ಶಾಲೆ ಆವರಣದಲ್ಲಿ ಮಕ್ಕಳು ತಿನ್ನುವ ನೆಲ್ಲಿ, ನೆರಳೆ ಗಿಡಗಳ ಜೊತೆಗೆ, ಪ್ರಾಣಿ ಪಕ್ಷಿಗಳಿಗೂ ಈ ಮರಗಿಡಗಳಿಂದ ಪ್ರಯೋಜನವಾಗಬೇಕು. ಆದ್ದರಿಂದ ಪ್ರಾಣಿ ಪಕ್ಷಿಗಳು ತಿನ್ನುವ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವುದು ಉದ್ದೇಶ.
- ಮುನಿಯಾಲ್ ಗಣೇಶ್ ಶೆಣೈ, ಅಧ್ಯಕ್ಷ, ಗ್ರೀನ್ ಇಂಡಿಯಾ ಮೂವ್‌ಮೆಂಟ್

- ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com