ಶ್ರೀಗಂಧ ನಿಧಾನವಾಗಿ ಬೆಳೆಯುವ ಅರೆ ಪರಾವಲಂಬಿ ಮರ. ಮಿಶ್ರ ತೋಟಗಾರಿಕೆ ಬೆಳೆಯಾಗಿ ಶ್ರೀಗಂಧ ಬೆಳೆಯುವುದರಿಂದ ರೈತನ ಬಾಳು ಬಂಗಾರವಾಗುವುದರಲ್ಲಿ ಅನುಮಾನವಿಲ್ಲ.
ಮಾವು, ಹಲಸು ಮತ್ತು ಸಪೋಟ ಮಧ್ಯೆ ಮಿಶ್ರ ಬೆಳೆಯಾಗಿ ಶ್ರೀಗಂಧ ಬೆಳೆಯಬಹುದು. ಇದರಿಂದ ಸಸ್ಯ ವೈವಿಧ್ಯತೆ ಕಾಪಾಡಬಹುದು. ಜೊತೆಗೆ ಗಿಡಗಳು ಬೆಳೆದಂತೆ ತೋಟದ ಮೌಲ್ಯ ಅಧಿಕವಾಗುತ್ತದೆ. 10- 20 ವರ್ಷಗಳಲ್ಲಿ ಅತ್ಯಧಿಕ ಲಾಭ ಗಳಿಸಬಹುದು.
ಬೆಳೆದವರ ಸ್ವತ್ತು
ಈ ಹಿಂದೆ ಶ್ರೀಗಂಧದ ಮರಗಳನ್ನು ಯಾವುದೇ ಪ್ರದೇಶದಲ್ಲಿ ಬೆಳೆದರೂ ಅದು ಸರ್ಕಾರದ ಸ್ವತ್ತಾಗಿರುತ್ತಿತ್ತು. ಆದರೆ, ಕರ್ನಾಟಕ ಅರಣ್ಯ ಕಾಯಿದೆ 2001 ಸೆಕ್ಷನ್ 83ರ ಪ್ರಕಾರ ಯಾರ ಜಮೀನಿನಲ್ಲಿ ಶ್ರೀಗಂಧದ ಮರವಿರುತ್ತಿತ್ತೋ ಅದು ಜಮೀನು ಮಾಲೀಕನ ಸ್ವತ್ತು ಎಂದು ತಿದ್ದುಪಡಿ ಮಾಡಿದೆ. ಇದರಿಂದ ರೈತರು ಯಾವುದೇ ಆತಂಕವಿಲ್ಲದೆ ಶ್ರೀಗಂಧ ಬೆಳೆಯಬಹುದು.
ಪ್ರೋತ್ಸಾಹ
ಶ್ರೀಗಂಧ ಬೆಳೆಯಲಿಚ್ಛಿಸುವ ರೈತರಿಗೆ ಅರಣ್ಯ ಇಲಾಖೆಯಿಂದ ಸಹಕಾರ ಸಿಗುತ್ತದೆ. ತೋಟಗಾರಿಕೆ ಇಲಾಖೆಯು ಕೇಂದ್ರ ವಲಯ ಔಷಧಿ ಮತ್ತು ಸುಗಂಧ ಬೆಳೆಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಪ್ರತಿ ಫಲಾನುಭವಿಗಳಿಗೆ ಉಚಿತವಾಗಿ ಗಂಧದ ಗಿಡ ನೀಡಲು ಯೋಜನೆ ಹಾಕಿಕೊಂಡಿದೆ. ಇದರಿಂದ ರೈತರು ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಶ್ರೀಗಂಧ ಬೆಳೆಯಬಹುದು.
ವರದಾನ
ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ರೈತರ ಆಸಕ್ತಿಗೆ ಅನುಗುಣವಾಗಿ ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯವರು ಶ್ರೀಗಂಧ ಗಿಡ ಸರಬರಾಜು ಮಾಡಿದ್ದಾರೆ. ನೀಲಗಿರಿ ಮರಗಳ ಹಾವಳಿ ತಪ್ಪಿಸಿ ಶ್ರೀಗಂಧ ಮರ ಬೆಳೆಸುವುದಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದೆ. ಅರಣ್ಯ ಇಲಾಖೆಯವರೇ ತಮ್ಮ ನರ್ಸರಿಗಳಲ್ಲಿ ಶ್ರೀಗಂಧ ಗಿಡ ಬೆಳೆಸಿ ನೋಂದಾಯಿತ ರೈತರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.
ಶ್ರೀಗಂಧದ ಗಿಡ ಕಾಯಲು ರಕ್ಷಣೆಯ ವ್ಯವಸ್ಥೆಯನ್ನು ಸರ್ಕಾರ ಒದಗಿಸಲ್ಲ. ಕಾವಲುಗಾರರ ನೇಮಿಸಲು ಸಹಾಯಧನ ನೀಡುವುದಿಲ್ಲ, ಐದಾರು ರೈತರು ಜೊತೆಗೂಡಿ ರಕ್ಷಣೆ ಮಾಡಿಕೊಳ್ಳುವುದಕ್ಕೆ ಖಾಸಗಿಯಾಗಿ ಕಾವಲುಗಾರರನ್ನು ನೇಮಿಸಬಹುದು.
ಬೇಡಿಕೆಗಿಂತ ಬೆಳೆ ಕಮ್ಮಿ
ಶ್ರೀಗಂಧದ ಮರದ ವಾರ್ಷಿಕ ಇಳುವರಿಯು ಭಾರತದಲ್ಲಿ ಸಾವಿರ ಟನ್‌ಗಿಂತ ಕಡಿಮೆ ಮತ್ತು ಇದರ ಎಣ್ಣೆಯ ಉತ್ಪಾದನೆ ವಾರ್ಷಿಕ 40 ಟನ್ ಮಾತ್ರ. ಆದರೆ, ಬೇಡಿಕೆ ಹೆಚ್ಚುತ್ತಿದೆ. ಗಂಧದ ಮರದ ಬೆಲೆಯು ಒಂದು ಟನ್‌ಗೆ 7.5 ಲಕ್ಷ. ಇದರ ಎಣ್ಣೆ ಕೆಜಿಗೆ 19,500 ರಿಂದ 20 ಸಾವಿರವರೆಗೆ ಮಾರಾಟವಾಗುತ್ತಿದೆ. ರೈತರು ನೀಲಗಿರಿಗೆ ಬದಲಾಗಿ ಶ್ರೀಗಂಧ ಬೆಳೆಯುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು. ಶ್ರೀಗಂಧದಲ್ಲಿ ಹೆಸರಿಸುವಂಥ ಯಾವುದೇ ತಳಿ ಇಲ್ಲ. ಆದರೆ, ಕರ್ನಾಟಕದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿರುವ ಜಾತಿಯು ಉತ್ಕೃಷ್ಟ ಪರಿಮಳದಿಂದ ಕೂಡಿರುವುದರಿಂದ ವಿಶ್ವವಿಖ್ಯಾತವಾಗಿದೆ. ಬೆಳೆಯುವ ವಿಧಾನ, ಔಷಧೋಪಚಾರ ಮತ್ತಿತರ ಸಲಹೆಗಳಿಗಾಗಿ ರೈತರು ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯಿಂದ ಉಚಿತ ಮಾಹಿತಿ ಪಡೆಯಬಹುದು.
ಬೆಳೆಯೋದು ಹೇಗೆ ಗೊತ್ತೆ?
ಶ್ರೀಗಂಧ ಸಸಿಗಳನ್ನು ಮಳೆಗಾಲದಲ್ಲಿ ನೆಟ್ಟರೆ ಬೇಸಿಗೆಯವರೆಗೂ ನೀರಿನ ಅವಶ್ಯಕತೆ ಇರದು. ಮೊದಲ ಮೂರು ವರ್ಷ ಬೇಸಿಗೆಯಲ್ಲಿ ನೀರು ಕೊಡಬೇಕು. ತೂತುಮಡಿಕೆ ನೀರಾವರಿ ಪದ್ಧತಿಯಲ್ಲಿ ಗಿಡಗಳನ್ನು ಬೇಸಿಗೆಯಲ್ಲಿ ಕಾಪಾಡಬಹುದು. ಸಪೋಟ ಅಥವಾ ಮಾವು ಫಸಲಿನಲ್ಲಿ ಪ್ರತಿ ಹೆಕ್ಟೇರ್‌ಗೆ 400 ಗಿಡ ಬೆಳೆಯಬಹುದು.
ಲಾಭ ಹೇಗೆ?
ಇಳುವರಿ 4ನೇ ವರ್ಷದಿಂದ ಪ್ರಾರಂಭವಾಗಿ 5ನೇ ವರ್ಷದಲ್ಲಿ ಪ್ರತಿ ಗಿಡದಿಂದ 250, 6ನೇ ವರ್ಷದಿಂದ 10ನೇ ವರ್ಷದವರೆಗೆ 500, 11ನೇ ವರ್ಷದಿಂದ 14ನೇ ವರ್ಷದವರೆಗೆ 750 ಹಾಗೂ 15ನೇ ವರ್ಷದಿಂದ 1000 ಆದಾಯ ನಿರೀಕ್ಷಿಸಬಹುದು. 5ನೇ ವರ್ಷದಲ್ಲಿ 300 ಗಂಧದ ಗಿಡಗಳನ್ನು ಬಿಳಿ ಮರ ಕಟಾವು ಮಾಡುವುದರಿಂದ ಪ್ರತಿ ಗಿಡದಿಂದ 10 ಕೆಜಿಯಂತೆ 300 ಗಿಡಗಳಿಂದ 3 ಸಾವಿರ ಕೆಜಿ ಬಿಳಿ ಮರದ ಇಳುವರಿ ಬರುತ್ತದೆ. ಪ್ರತಿ ಕೆಜಿಗೆ 40 ನಿಗದಿಪಡಿಸಿದರೂ 5ನೇ ವರ್ಷದಲ್ಲಿ ಗಂಧದ ಗಿಡದಿಂದ 1.20 ಲಕ್ಷ ಆದಾಯ ಸಿಗುತ್ತದೆ. ಉಳಿದ 100 ಗಿಡಗಳನ್ನು 15 ವರ್ಷಗಳವರೆಗೆ ಬೆಳೆಸಿ ಕಟಾವು ಮಾಡಿದಲ್ಲಿ ಪ್ರತಿ ಗಿಡದಿಂದ ಕನಿಷ್ಠ 25 ಕೆಜಿ ಹಾರ್ಟ್‌ವುಡ್‌ನ ಇಳುವರಿ ಬರುತ್ತದೆ. ಪ್ರತಿ ಕೆಜಿಗೆ ಈಗಿನ ಬೆಲೆಯಂತೆ 850 ರಿಂದ 950 ವರೆಗೆ ಮಾರಾಟ ಮಾಡಿದರೂ 100 ಗಿಡಗಳಿಂದ 21,25,000 ಗಳಿಂದ 23,75,000 ಆದಾಯ ಬರುತ್ತದೆ. ಹೀಗೆ ಮಿಶ್ರ ತೋಟಗಾರಿಕೆಯಲ್ಲಿ ಶ್ರೀಗಂಧ ಬೆಳೆದಾಗ 15 ವರ್ಷದಲ್ಲಿ 25,25,000 ನಿವ್ವಳ ಆದಾಯ ಬರುತ್ತದೆ. ಇದರಿಂದ ಶ್ರೀಗಂಧವು ರೈತರ ಬಾಳನ್ನು ಬಂಗಾರವಾಗಿಸುವುದರಲ್ಲಿ ಅನುಮಾನವಿಲ್ಲ.
- ಪಾ.ಶ್ರೀ. ಅನಂತರಾಮ್