ಒಣಗಿದ ಮೀನು!

ಒಣಗಿದ ಮೀನು!
Updated on: 

ಕಡಲ ತೀರದಲ್ಲಿ ಬಲೆ ಬೀಸಿ ತಂದು ರಾಶಿ ಹಾಕಿದ ಮೀನು ನೋಡಲು ಮನೋಹರವಾಗಿದ್ದರೂ ಬಂದರಿನಲ್ಲಿ ಸ್ವಚ್ಛತೆಗೆ ಒತ್ತು ನೀಡುವುದೇ ಕಮ್ಮಿ. ಹೀಗಿರುವಾಗ ಮೀನನ್ನು ಒಣಗಿಸಲು ಮರಳಿನಲ್ಲೇ ಹರಡಿದರೆ ಹೇಗಿರಬೇಡ.
ಕರಾವಳಿಯುದ್ದಕ್ಕೂ ಮೀನನ್ನು ಹೀಗಿಯೇ ಹರಡಿಕೊಂಡು ಒಣಗಿಸುತ್ತಾರೆ. ಇದರಿಂದಾಗಿ ಬರೀ ಮೀನಿನ ವಾಸನೆ ಎಲ್ಲೆಡೆ ಪಸರಿಸುತ್ತದೆ. ಇದನ್ನು ವ್ಯವಸ್ಥಿತವಾಗಿ ಒಣಗಿಸುವ ವಿಧಾನ ಇದುವರೆಗೆ ಇಲ್ಲ.ಈ ತೊಂದರೆ ನಿವಾರಿಸಲು ಈಗ ಸೋಲಾರ್ ಚಾಲಿತ ಬಯೋವಾಸ್ ಹೈಬ್ರೀಡ್ ಡ್ರೈಯರ್ ಅನ್ನು ಸಂಶೋಧಿಸಲಾಗಿದೆ. ಮಂಗಳೂರಿನ ಮೀನುಗಾರಿಕಾ ವಿದ್ಯಾಲಯದ ತಾಂತ್ರಿಕ ವಿಭಾಗ ಇದನ್ನು ಅಭಿವೃದ್ಧಿಪಡಿಸಿದೆ.

13 ದೇಶಗಳ ಸಾಥ್
ಯುರೋಪಿಯನ್ ಯೂನಿಯನ್‌ನ 13 ರಾಷ್ಟ್ರಗಳು ಈ ಸಂಶೋಧನೆಗೆ ಸಾಥ್ ನೀಡಿವೆ. ಇದರ ವೆಚ್ಚ ಸುಮಾರು ರು. 10 ಲಕ್ಷ. ಇಂಗ್ಲೆಂಡ್, ಪೋರ್ಚುಗಲ್, ಹಾಲೆಂಡ್, ಕಿನ್ಯಾ, ಘಾನಾ, ನಮೀಬಿಯಾ, ಭಾರತ, ಮಲೇಷ್ಯಾ ಅಲ್ಲದೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ತಾಂತ್ರಿಕ ಸಹಕಾರ ನೀಡಿವೆ. ಪ್ರಸಕ್ತ ಕಡಲ ಕಿನಾರೆಯಲ್ಲಿ ಮೀನು ಒಣಗಿಸಲು ಮೂರ್ನಾಲ್ಕು ದಿನ ಬೇಕು. ಮುಕ್ತವಾಗಿ ಒಣಗಿಸುವುದರಿಂದ ಕ್ರಿಮಿಕೀಟಗಳು, ಹಕ್ಕಿಗಳ ಹಾವಳಿಯಿಂದ ರಕ್ಷಣೆ ಇಲ್ಲ. ರಫ್ತಿನ ಗುಣಮಟ್ಟ ಕಾಪಾಡಲು ಸಾಧ್ಯವಾಗುವುದಿಲ್ಲ. ಈಗ ಡ್ರೈಯರ್‌ನೊಳಗೆ ಟ್ರೇಯಲ್ಲಿ ಹಾಕಿದರೆ 20 ಗಂಟೆಯಲ್ಲಿ ಒಣಗುತ್ತದೆ. ಸೋಲಾರ್ ಉಪಯೋಗಿಸುವುದರಿಂದ ವಿದ್ಯುತ್ ವೆಚ್ಚವೂ ಇಲ್ಲ.

ಏನಿದು ಡ್ರೈಯರ್?
ಚಿತ್ರದಲ್ಲಿರುವಂತೆ ಸೋಲಾರ್ ಪ್ಯಾನೆಲ್ ಮಾದರಿಯಲ್ಲಿ ಪಾರದರ್ಶಕ ಗಾಜನ್ನು ಸಿದ್ಧಗೊಳಿಸಿ, ಅದನ್ನು ಜೇಡಿಮಣ್ಣು ಮಿಶ್ರಿತ ದೊಡ್ಡ ಡ್ರೈಯರ್‌ಗೆ ಜೋಡಿಸಬೇಕು. ಪ್ಯಾನೆಲ್‌ಗೆ ಬಿದ್ದ ಸೂರ್ಯನ ಶಾಖ ಡ್ರೈಯರ್‌ಗೆ ಹಾದು ಮೀನನ್ನು ಒಣಗಿಸುತ್ತದೆ. ಶಾಖ ಜಾಸ್ತಿಯಾಗದಂತೆ ನಿರ್ದಿಷ್ಟ ಉಷ್ಣತೆ ಕಾಯ್ದುಕೊಳ್ಳಲು ಪ್ಯಾನೆಲ್‌ನ ಇನ್ನೊಂದು ತುದಿಯಲ್ಲಿ ಫ್ಯಾನ್‌ಗಳನ್ನು ಚಾಲನೆಗೊಳಿಸಬೇಕಾಗುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತವರೆಗೆ ಹೀಗೆ ಮೀನನ್ನು ಒಣಗಿಸಬೇಕು. ರಾತ್ರಿ ತೆಂಗಿನ ಚಿಪ್ಪನ್ನು ಡ್ರೈಯರ್‌ನ ತಳಭಾಗದಲ್ಲಿ ಉರಿಸಿದರೆ, ಅದರ ಶಾಖದಲ್ಲೂ ಮೀನು ಒಣಗುತ್ತದೆ. ಇದರಿಂದ ಹಗಲಿರುಳು ನಿರಂತರ ಮೀನು ಒಣಗಿಸಲು ಸಾಧ್ಯ ಎಂಬುದನ್ನು ತಾಂತ್ರಿಕ ವಿಭಾಗ ಸಾಧಿಸಿ ತೋರಿಸಿದೆ.

ಪ್ಯಾನೆಲ್‌ಗೆ ಪಾಲಿಕಾರ್ಬನ್ ಶೀಟ್ ಬಳಸಿರುವುದರಿಂದ ಅತಿಯಾದ ಶಾಖ ಹೀರುತ್ತದೆ. ಆದ್ದರಿಂದ ಮೀನು ಒಂದೇ ರೀತಿಯ ಶಾಖದಲ್ಲಿ ಒಣಗುತ್ತದೆ. ಸದ್ಯ ನೂರು ಕೆಜಿ ಸಾಮರ್ಥ್ಯ ಹೊಂದಿದ್ದು, ಇದನ್ನು ಏಕಕಾಲದಲ್ಲಿ 500ರಿಂದ 600 ಕೆಜಿ ಮೀನು ಒಣಗಿಸುವಂತೆ ಸಾಮರ್ಥ್ಯ ವೃದ್ಧಿಸಬಹುದು.
- ಪ್ರೊ.ಶ್ಯಾಮಸುಂದರ್, ತಾಂತ್ರಿಕ ವಿಭಾಗ ಮುಖ್ಯಸ್ಥ

- ಆತ್ಮಭೂಷಣ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com