ಜೀವಿ @ ಕರ್ನಾಟಕ

ಕರ್ನಾಟಕ ತನ್ನ ಅಪರೂಪದ ಜೀವವೈವಿಧ್ಯಕ್ಕೂ ಹೆಸರುವಾಸಿ.
ಕುದುರೆಮುಖ
ಕುದುರೆಮುಖ
Updated on: 

ಕರ್ನಾಟಕ ತನ್ನ ಅಪರೂಪದ ಜೀವವೈವಿಧ್ಯಕ್ಕೂ ಹೆಸರುವಾಸಿ. ರಾಜ್ಯದ ಕೆಲವು ಸ್ಥಳಗಳಲ್ಲಿ ಅಲ್ಲಿನ ಜೀವವೈವಿಧ್ಯವನ್ನು ಅದರ ಮೂಲರೂಪದಲ್ಲಿಯೇ ರಕ್ಷಿಸಲು ಗುರುತಿಸಲಾಗಿದೆ. ಅಂತಹ ಎಂಟು ಪ್ರಮುಖ ತಾಣಗಳ ಬಗ್ಗೆ ಮಾಹಿತಿ...

ಅಪರೂಪದ ಸಸ್ಯ ಸಂಪತ್ತು ಹೊಂದಿರುವ ರಾಜ್ಯ ಕರ್ನಾಟಕ. ವಿಶಿಷ್ಟ ಜೀವವೈವಿಧ್ಯಕ್ಕೂ ರಾಜ್ಯ ಹೆಸರುವಾಸಿ. ವನ್ಯಜೀವಿಗಳ ಶ್ರೀಮಂತಿಕೆಯ ತಾಣ. ಒಟ್ಟು ಅರಣ್ಯದ ಶೇ.17ರಷ್ಟು ಅರಣ್ಯ ಪ್ರದೇಶವನ್ನು ವನ್ಯ ಜೀವಿಗಳ ಮತ್ತು ಜೀವವೈವಿಧ್ಯತೆಯ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ವಿಶ್ವದ ಜಾಗತಿಕ ಪರಿಸರ ಸಂರಕ್ಷಣ ಪಟ್ಟಿಯಲ್ಲಿ ನಮ್ಮ ಪಶ್ಚಿಮ ಘಟ್ಟವೂ ಒಂದು ಎನ್ನುವುದೂ ಹೆಮ್ಮೆ.
ರಾಜ್ಯದ ಕೆಲವು ಸ್ಥಳಗಳನ್ನು ಅದರ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಅಲ್ಲಿನ ಜೀವವೈವಿಧ್ಯವನ್ನು ಅದರ ಮೂಲರೂಪದಲ್ಲಿಯೇ ರಕ್ಷಿಸಲು ಗುರುತಿಸಲಾಗಿದೆ. ಇದು ಪರಿಸರ ಸಮತೋಲನ ಕಾಪಾಡುವುದರ ಜತೆ ಮಾನವ ಸಂಕುಲಕ್ಕೂ ಅತ್ಯಮೂಲ್ಯ ಕೊಡುಗೆ ನೀಡುತ್ತದೆ. ಕರ್ನಾಟಕದ ಟಾಪ್ 8 ಪರಿಸರ ತಾಣಗಳ ಕಿರುನೋಟ ಇಲ್ಲಿದೆ.
ಅಘನಾಶಿನಿ ನದಿ ಕಣಿವೆ
ಅಘನಾಶಿನಿ ನದಿ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಶಿರಸಿ, ಸಿದ್ದಾಪುರ, ಕುಮಟಾ ತಾಲೂಕುಗಳಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತವೆ. ಈ ನದಿ ಕಣಿವೆ ತನ್ನ ವ್ಯಾಪ್ತಿಯಲ್ಲಿ ಔಷಧೀಯ ಗುಣವುಳ್ಳ ಹಲವು ಪ್ರಮುಖ ಸಸ್ಯ ಪ್ರಭೇದಗಳನ್ನು ಹೊಂದಿದೆ. ಅಘನಾಶಿನಿ ನದಿಯ ಹಿನ್ನೀರು ಪ್ರದೇಶಗಳನ್ನು ಜೈವಿಕ ವೈವಿಧ್ಯತೆಯ ಪ್ರದೇಶ ಎಂದು ಗುರುತಿಸಲಾಗಿದೆ. ಮಸಾಲ ಪದಾರ್ಥಗಳ ಸಸ್ಯವರ್ಗಗಳೂ ಇಲ್ಲಿ ಕಾಣಸಿಗುತ್ತವೆ.

ಕೊಡಚಾದ್ರಿ
ಶಿವಮೊಗ್ಗ ಜಿಲ್ಲೆಯಲ್ಲಿರುವ ಕೊಡಚಾದ್ರಿ ಬೆಟ್ಟ ತನ್ನ ಶಿಖರಕ್ಕೆ ಹೆಸರುವಾಸಿ. ಹಲವಾರು ಸ್ಥಳೀಯ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲಕ್ಕೆ ಇಲ್ಲಿನ ಮೂಕಾಂಬಿಕಾ ನ್ಯಾಷನಲ್ ಪಾರ್ಕ್ ಮತ್ತು ದಟ್ಟ ಕಾನನ ವಿಶೇಷ ಸ್ಥಾನ ಕಲ್ಪಿಸಿದೆ. ಪ್ರಮುಖವಾಗಿ ಕಾಳಿಂಗಸರ್ಪ, ಮಲಬಾರ್ ಹಾರನ್‌ಬೆಲ್, ಜಿಂಕೆ, ಚಿರತೆ, ಹುಲಿ, ಕಾಡೆಮ್ಮೆ (ಕಾಡುಕೋಣ) ಸೇರಿದಂತೆ ಅನೇಕ ವನ್ಯಜೀವಿಗಳನ್ನು ಕೊಡಚಾದ್ರಿ ಕಾನನ ಹೊಂದಿದೆ.

ಬಿಳಿರಂಗನ ಬೆಟ್ಟ
ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ಇರುವ ಬಿಳಿರಂಗನ ಪರ್ವತ ಶ್ರೇಣಿ (ಬಿಳಿಗಿರಿ ರಂಗನ ಬೆಟ್ಟ) ಕಾವೇರಿ ಮತ್ತು ಕಪಿಲಾ ನದಿಗಳ ನಡುವೆ ನೆಲೆಗೊಂಡಿದೆ. ಇದಿರುವುದು ಚಾಮರಾಜನಗರ ಜಿಲ್ಲೆಯಲ್ಲಿ.  ದಕ್ಷಿಣ ಭಾರತದ ಆನೆಗಳಿಗೆ ಹಾಗೂ ಏಷ್ಯಾದ ಹುಲಿಗಳಿಗೆ ಉತ್ತಮ ಆಶ್ರಯ ಒದಗಿಸಿದೆ. 200ಕ್ಕೂ ಹೆಚ್ಚು ಸಸ್ತನಿಗಳನ್ನು ಇಲ್ಲಿ ಗುರುತಿಸಲಾಗಿದೆ.


ಕಾಳಿ ಕೊಳ್ಳ
ಗೋವಾ ಹಾಗೂ ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಾಳಿ ನದಿ ಉತ್ತರಕನ್ನಡ ಜಿಲ್ಲೆಯಲ್ಲಿದೆ. ಅಣಶಿ, ದಾಂಡೇಲಿ ಅಭಯಾರಣ್ಯದ ಜತೆ ಅಪರೂಪದ ಸಸ್ಯಗಳು ಮತ್ತು ವನ್ಯಜೀವಿಗಳ ವಿವಿಧ ತಳಿಗಳು ಕಾಣಸಿಗುತ್ತವೆ. ಆದಿವಾಸಿ ಸಮುದಾಯಗಳಾದ ಕುಣಬಿ, ಮರಾಠಿ, ಸಿದ್ಧಿಗಳ ಆಶ್ರಯತಾಣವೂ ಹೌದು. ಅನೇಕ ಅಪರಿಚಿತ ಹಾಗೂ ಉಪಯುಕ್ತ ಸಸ್ಯಗಳ ಆಗರ ಕಾಳಿ ನದಿ ಕಣಿವೆ. 31 ವಿಧದ ಮಲಬಾರ್ ಹಾರ್ನ್‌ಬೆಲ್ ಸೇರಿದಂತೆ ವಿವಿಧ ಜಾತಿ ಪಕ್ಷಿ ಸಂಕುಲವನ್ನು ಇಲ್ಲಿ ಕಾಣಬಹುದು. ಇಲ್ಲಿನ ಕದ್ರಾ ಅಣೆಕಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಮೀನು ಜಾತಿಗಳನ್ನು ಸಂರಕ್ಷಿಸಲಾಗಿದೆ. ನೀರು ಹಕ್ಕಿ ಮತ್ತಿತರ ಅಪರೂಪದ ಜಲವಾಸಿಗಳಿವೆ.

ಅಮೃತ್ ಮಹಲ್ ಹುಲ್ಲುಗಾವಲು
ತುಮಕೂರು, ಹಾಸನ, ಮೈಸೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಹುಲ್ಲುಗಾವಲುಗಳಿವೆ. ಇಲ್ಲಿ ಬೆಳೆಯುವ ವಿಶಿಷ್ಟ ಗುಣದ ಹುಲ್ಲೇ ಎಲ್ಲರ ಗಮನ ಸೆಳೆದಿದೆ. ಅಮೃತ್‌ಮಹಲ್ ಎಂಬ ದೇಶಿ ಗೋ ತಳಿಯ ವಿಶಿಷ್ಟ ಪ್ರದೇಶವಿದು. ಹಳ್ಳಿಕಾರ್ ಎಂಬ ಗೋ ತಳಿಯೂ ಈ ಪ್ರದೇಶದಲ್ಲಿ ಕಾಣಸಿಗುತ್ತದೆ. ಅಳಿವಿನಂಚಿನಲ್ಲಿರುವ ಕೃಷ್ಣಮೃಗ, ಗುಳ್ಳೆನರಿ, ಸಣ್ಣ ಬೆಳ್ಳಕ್ಕಿ, ಗರುಡ ಮುಂತಾದವು ಇಲ್ಲಿ ಕಾಣಸಿಗುತ್ತದೆ.

ತಲಕಾವೇರಿ
ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿ ನೋಡಲು ಮನಮೋಹಕ. ಇರುವುದು ಕೊಡಗು ಜಿಲ್ಲೆಯಲ್ಲಿ.  ಕರಡಿ, ಆನೆ, ಹುಲಿ, ನರಿ, ಜಿಂಕೆ, ಸಿಂಹ, ಜಿಂಕೆ, ಅಳಿಲು, ಮುಂಗುಸಿ, ಮುಳ್ಳುಹಂದಿ ಮುಂತಾದ ಪ್ರಾಣಿಗಳ ನೆಲೆ ಇದಾಗಿದ್ದು, ಇಲ್ಲಿನ ಅಭಯಾರಣ್ಯದಲ್ಲಿ ಸರೀಸೃಪಗಳಾದ ಹಾವು, ಕಾಳಿಂಗಸರ್ಪ, ಹಾರ್ನ್‌ಬಿಲ್, ಬ್ಲೂಬರ್ಡ್ ಮುಂತಾದ ಹಕ್ಕಿ ಸಂಕುಲಗಳಿವೆ.

ಕುದುರೆಮುಖ
ಕುದರೆಮುಖದಲ್ಲಿ ತುಂಗಭದ್ರಾ ನದಿ ಜನ್ಮತಾಳಿದೆ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ತನ್ನ ಗಣಿಗಾರಿಕೆಯಿಂದ ಹೆಸರು ಮಾಡಿದ್ದ ಕುದುರೆಮುಖ ಇಂದು ಹೈಕೋರ್ಟ್ ಆದೇಶದಿಂದ ಸ್ಥಗಿತಗೊಂಡಿದೆ. ಇದು ಇಲ್ಲಿನ ಜೀವ ವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಪ್ರಾಮುಖ್ಯತೆ ತೋರಿಸಿದೆ. ಕಡಿದಾದ ಬೆಟ್ಟ ಹಾಗೂ ಕಣಿವೆಗಳಿಂದ ಕೂಡಿದ ಈ ರಾಷ್ಟೀಯ ಉದ್ಯಾನ ವಿವಿಧ ಜಾತಿಯ ಪ್ರಾಣಿ, ಸರಿಸೃಪಗಳು, ಚಿಟ್ಟೆಗಳು ಇಲ್ಲಿ ಕಾಣಸಿಗುತ್ತವೆ.

ತಲಕಾವೇರಿ
ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿ ನೋಡಲು ಮನಮೋಹಕ. ಇರುವುದು ಕೊಡಗು ಜಿಲ್ಲೆಯಲ್ಲಿ.  ಕರಡಿ, ಆನೆ, ಹುಲಿ, ನರಿ, ಜಿಂಕೆ, ಸಿಂಹ, ಜಿಂಕೆ, ಅಳಿಲು, ಮುಂಗುಸಿ, ಮುಳ್ಳುಹಂದಿ ಮುಂತಾದ ಪ್ರಾಣಿಗಳ ನೆಲೆ ಇದಾಗಿದ್ದು, ಇಲ್ಲಿನ ಅಭಯಾರಣ್ಯದಲ್ಲಿ ಸರೀಸೃಪಗಳಾದ ಹಾವು, ಕಾಳಿಂಗಸರ್ಪ, ಹಾರ್ನ್‌ಬಿಲ್, ಬ್ಲೂಬರ್ಡ್ ಮುಂತಾದ ಹಕ್ಕಿ ಸಂಕುಲಗಳಿವೆ.

ಕಪ್ಪತಗುಡ್ಡ
ಸಾವಿರಾರು ಎಕರೆಗಳಷ್ಟು ದಟ್ಟವಾದ ಅರಣ್ಯ ಪ್ರದೇಶ ಹೊಂದಿರುವ ಕಪ್ಪತಗುಡ್ಡವನ್ನು ಇತ್ತೀಚೆಗೆ ಕರ್ನಾಟಕ ರಾಜ್ಯ ಆಯುರ್ವೇದ ಔಷಧೀಯ ಸಸ್ಯಗಳ ತಾಣ ಎಂದು ಘೋಷಿಸಲಾಗಿದೆ. ಇದು ಗದಗ ಜಿಲ್ಲೆಯಲ್ಲಿದೆ. ಇಲ್ಲಿ ಸಾಕಷ್ಟು ಔಷಧೀಯ ಗಿಡಮೂಲಿಕೆಗಳಿದ್ದು, ಈಚೆಗೆ ಮಾನವನ ಹಸ್ತಕ್ಷೇಪದಿಂದ ಅವನತಿಯ ಹಾದಿ ಹಿಡಿದಿದೆ. ಇದರ ಉಳಿವೆಗೆ ಸರ್ಕಾರ ಸೇರಿದಂತೆ ಸಾರ್ವಜನಿಕರು ಕೈ ಜೋಡಿಸಬೇಕಿದೆ.

ಇನ್ನೂ ಅನೇಕ ವಿಶಿಷ್ಟ ಜೀವ ವೈವಿಧ್ಯ ಸ್ಥಳಗಳು ರಾಜ್ಯದಲ್ಲಿವೆ. ಆದರೆ ಮಾನವನ ಹಸ್ತಕ್ಷೇಪ ಹಾಗೂ ಹವಾಮಾನ ಬದಲಾವಣೆಯಿಂದ ಅವಕ್ಕೆ ಧಕ್ಕೆಯಾಗುತ್ತಿರುವುದು ಸುಳ್ಳಲ್ಲ. ಇದು ಪರಿಸರವಾದಿಗಳ ಆತಂಕಕ್ಕೂ ಕಾರಣವಾಗಿದೆ.

-ನಿತಿನ್ ಮುತ್ತಿಗೆ
nitinmuttige@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com